ನಟ ಧನ್ವೀರ್‌ಗೆ ಮತ್ತೊಮ್ಮೆ ಪೊಲೀಸ್ ವಿಚಾರಣೆಯ ಸಂಕಷ್ಟ ಎದುರಾಗಿದೆ. ನಟಿ ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿ ಧನ್ವೀರ್ ಸಲ್ಲಿಸಿದ್ದ ಮನವಿಗೆ ಪೊಲೀಸರು ಸ್ಪಂದಿಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ, ಹೆಚ್ಚಿನ ಕಾಲಾವಕಾಶ ನೀಡುವಂತೆ ಧನ್ವೀರ್ ಪೊಲೀಸರಿಗೆ ಪತ್ರ ಬರೆದಿದ್ದರು. ಇದೀಗ ಮನವಿಯನ್ನು ಪರಿಗಣಿಸಿರುವ ಪೊಲೀಸರು ನವೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಎರಡನೇ ನೋಟಿಸ್ ನೀಡಿದ್ದಾರೆ.

ಈ ಹಿಂದೆ ನವೆಂಬರ್ 11ರೊಳಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಧನ್ವೀರ್ ಮನವಿ ಹಿನ್ನೆಲೆಯಲ್ಲಿ ವಿಚಾರಣೆಯ ದಿನಾಂಕವನ್ನು ಒಂದು ದಿನ ಮುಂದೂಡಲಾಗಿದೆ.

ಧನ್ವೀರ್ಗೆ ಮತ್ತೊಂದು ಪ್ರಕರಣದ ಸಂಕಷ್ಟ!

ಇನ್ನೊಂದೆಡೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವೈರಲ್ ಪ್ರಕರಣದಲ್ಲೂ ನಟ ಧನ್ವೀರ್‌ಗೆ ಸಂಕಷ್ಟ ಎದುರಾಗಿದೆ. ಈ ವಿಡಿಯೋ ವೈರಲ್ ಮಾಡಲು ಧನ್ವೀರ್ ಅವರ ಮೊಬೈಲ್ ಬಳಕೆಯಾಗಿದೆ ಎಂಬುದಕ್ಕೆ ಸಾಕ್ಷ್ಯ ಲಭ್ಯವಾಗಿದೆ ಎಂದು ವರದಿಯಾಗಿದೆ.

ಈ ಹಿಂದೆ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಧನ್ವೀರ್ ಅವರನ್ನು ವಿಚಾರಣೆ ನಡೆಸಿ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದರು. ಪ್ರಾಥಮಿಕ ಪರಿಶೀಲನೆ ವೇಳೆ ವಿಡಿಯೋಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಇದೀಗ ಮೊಬೈಲ್‌ನಿಂದ ಅಳಿಸಲಾದ ಮಾಹಿತಿಯನ್ನು ಮರುಪಡೆಯುವ ರಿಟ್ರೀವ್ ವರದಿ ಸಿಸಿಬಿ ಪೊಲೀಸರ ಕೈ ಸೇರಿದೆ ಎನ್ನಲಾಗಿದೆ. ಈ ವರದಿಯಲ್ಲಿ ವಿಡಿಯೋ ವೈರಲ್‌ಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.