ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಬಾಲಿವುಡ್ ನ ದಿಯಾ ಮಿರ್ಜಾ ಮತ್ತು ನಸೀರುದ್ದೀನ್ ಶಾ ಅವರಿಗೆ ಪರಿಸದ ಬಗ್ಗೆ ಕಾಳಜಿ ಬರುತ್ತದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇತರ ಧರ್ಮಗಳ ಹಬ್ಬಗಳ ಆಚರಣೆಯ ವೇಳೆ ಉಂಟಾಗುವ ಮಾಲಿನ್ಯದ ಬಗ್ಗೆ ಈ ನಟರು ಮೌನ ವಹಿಸುತ್ತಾರೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ. 

ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಈ ಇಬ್ಬರ ಪರಿಸರ ಕಾಳಜಿಯು ಕೇವಲ ಆಯ್ದ ವಿಷಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು. ಇಲ್ಲಿ ಪರಿಸರ ಕಾಳಜಿಯ ಸಂದೇಶ ನೀಡುವುದರಲ್ಲಿಯೂ ತಾರತಮ್ಯ ಎದ್ದು ಕಾಣುತ್ತಿದೆ. ನೀವು ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಕೇವಲ ಹಿಂದೂ ಹಬ್ಬಗಳ ದಿನಗಳಲ್ಲಿ ಹೇಳುತ್ತೀರಿ. ಆದರೆ ಈದ್ ಮತ್ತು ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ ಪ್ರಾಣಿ ಬಲಿಯಿಂದಾಗಿ ನೀರಿನ ಮಾಲಿನ್ಯ ಉಂಟಾದಾಗ, ನಾಸೀರುದ್ದೀನ್ ಶಾ ಮತ್ತು ದಿಯಾ ಮಿರ್ಜಾ ಅವರಂತಹವರು ಒಂದೂ ಮಾತನಾಡುವುದಿಲ್ಲ ಎಂದು ಭಾಟಿಯಾ ತರಾಟೆಗೆ ತೆಗೆದುಕೊಂಡರು.

ಮಹಾನಗರ ಪಾಲಿಕೆಯ ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತ ದೀಪಾವಳಿ ಅಭಿಯಾನಕ್ಕಾಗಿ ದಿಯಾ ಮಿರ್ಜಾ ಅವರು ಮಾಡಿದ್ದ ವಿಡಿಯೋವನ್ನು ಬಿಜೆಪಿ ನಾಯಕರ ಆಕ್ಷೇಪದ ಬಳಿಕ ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಲಾಗಿತ್ತು. ಈ ಕುರಿತ ವಿವಾದವನ್ನು ಬಾಂಬೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡು, ವಿಡಿಯೋವನ್ನು ಮತ್ತೆ ಅಪ್ಲೋಡ್ ಮಾಡುವಂತೆ ಪಾಲಿಕೆಗೆ ಮಂಗಳವಾರ ಆದೇಶಿಸಿದೆ. ಹೈಕೋರ್ಟ್ನ ಆದೇಶದ ಪ್ರತಿಯನ್ನು ತಾನು ಇನ್ನು ನೋಡಿಲ್ಲದ ಕಾರಣ ಅದರ ಬಗ್ಗೆ ನೇರ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಭಾಟಿಯಾ, ನಾಗರಿಕರು ನ್ಯಾಯಾಲಯದ ಆದೇಶಗಳನ್ನು ಗೌರವಿಸಬೇಕು ಮತ್ತು ಕಾನೂನನ್ನು ಪಾಲಿಸಬೇಕು ಎಂದರು. "ಹಿಂದೂ ಧರ್ಮದ ಅನುಯಾಯಿಗಳು ಸಹಿಷ್ಣುಗಳು ಮತ್ತು ಅವರು ಸಂವಿಧಾನ ಹಾಗೂ ನ್ಯಾಯಾಲಯದ ತೀರ್ಪುಗಳನ್ನು ಗೌರವಿಸುತ್ತಾರೆ. ಹಿಂದೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳು ನೀಡಿದ ತೀರ್ಪುಗಳನ್ನು ಒಪ್ಪಿಕೊಂಡು ದೀಪಾವಳಿಯನ್ನು ಶಾಂತಿಯುತವಾಗಿ ಆಚರಿಸಿಕೊಂಡು ಬಂದಿರುವುದನ್ನು ನಾವು ನೋಡಿದ್ದೇವೆ ಎಂದು ಅವರು ಪ್ರತಿಪಾದಿಸಿದರು. 


ಆದಾಗ್ಯೂ, ಪರಿಸರ ಮತ್ತು ಶಬ್ದ ಮಾಲಿನ್ಯದ ಬಗ್ಗೆ ನಿಜವಾದ ಕಾಳಜಿ ಇರುವ ನಾಗರಿಕರು ಎಲ್ಲಾ ಧರ್ಮಗಳ ಹಬ್ಬಗಳ ಸಂದರ್ಭದಲ್ಲೂ ಅಂತಹದೇ ನಿಲುವನ್ನು ವ್ಯಕ್ತಪಡಿಸಬೇಕೇ ಹೊರತು, ಕೇವಲ ಹಿಂದೂ ಹಬ್ಬಗಳನ್ನು ಗುರಿಯಾಗಿಸಿ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.