ಕೆಲ ದಿನಗಳ ಹಿಂದಷ್ಟೇ ವಂಚಿತ್ ಬಹುಜನ ಅಘಾಡಿಯ ಮುಖ್ಯಸ್ಥ ಹಾಗೂ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ರೈತರನ್ನು ಉದ್ದೇಶಿಸಿ ರೈತರು ಅಸಮರ್ಥರು ಅವರು ತಮಗಾಗಿ ಹೋರಾಡುವ ನಾಯಕರಿಗೆ ಮತಹಾಕುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ, ಶಾಸಕ ಸಂಜಯ್ ಗಾಯಕ್ವಾಡ್, ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಅಂತ್ಯಕ್ರಿಯೆಗೆ ಯಾರೂ ಹೋಗಬಾರದು ಎಂದು ನಾನು ಹೇಳುತ್ತೇನೆ. ಶವವನ್ನು ಹಾಗೇ ಬಿಟ್ಟರೆ ಅದನ್ನು ಪ್ರಾಣಿಗಳು ತಿಂದರೆ ಏನಾಗುತ್ತದೆ ಎಂಬುದು ಜನರಿಗೆ ಅರ್ಥವಾಗುತ್ತದೆ ಎಂಬ ವಿಚಿತ್ರ ತರ್ಕ ಮುಂದಿಟ್ಟಿದ್ದಾರೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಸಂಸಾರವನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಮದುವೆಯಾಗುವಾಗ ಏಳು ಜನ್ಮಗಳ ಕಾಲ ಜೊತೆಯಾಗಿರುವ ಭರವಸೆ ನೀಡಿ, ಅರ್ಧದಲ್ಲೇ ಬಿಟ್ಟು ಹೋಗುವುದು ತಪ್ಪು ಎಂದಿದ್ದಾರೆ. ರೈತರಿಗೆ ಏನಾದರೂ ಸಮಸ್ಯೆಗಳಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಸರ್ಕಾರಕ್ಕೆ, ತಮ್ಮ ಭಾಗದ ಶಾಸಕರಿಗೆ ಅಥವಾ ಸಂಸದರಿಗೆ ಪತ್ರ ಬರೆದು ಕಷ್ಟಗಳನ್ನು ತಿಳಿಸಬೇಕು. ನಾವೆಲ್ಲರೂ ಒಟ್ಟಾಗಿ ಸಹಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಸಂಜಯ್ ಗಾಯಕ್ವಾಡಿು ಈ ಹೇಳಿಕೆ ನೀಡುತ್ತಿದ್ದಂತೆ ರೈತ ಮುಖಂಡ ರವಿಕಾಂತ್ ತುಪ್ಕರ್ ತೀವ್ರವಾಗಿ ಖಂಡಿಸಿದ್ದಾರೆ. ರೈತರು ಸಂತೋಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಬದಲಿಗೆ ಬೆಳೆ ನಷ್ಟ, ಸಾಲದ ಹೊರೆ ಮತ್ತು ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಬೇರೆ ದಾರಿಯಿಲ್ಲದೆ ಈ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಕೂಡಲೇ ರೈತರ ಕ್ಷಮೆಯಾಚಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.


