ಭಾನುವಾರ ಸಂಜೆ ಅಮಿತಾಬ್ ನಿಂತಿದ್ದ ಪೀಠಕ್ಕೆ ಬುಲೆಟ್ ಪ್ರೂಫ್ ಗ್ಲಾಸ್ ಪರದೆ ಅಳವಡಿಸಲಾಗಿತ್ತು. ಒಳಗೆ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿರಬಹುದೆಂದು ಹೇಳಲಾದ ಉಡುಪಿನಲ್ಲಿದ್ದ ಬಿಗ್ ಬಿ ಕಾಣಿಸಿಕೊಂಡರು. ಆ ರಕ್ಷಣಾತ್ಮಕ ಪರದೆಯ ಹಿಂದಿನಿಂದಲೇ ಅಭಿಮಾನಿಗಳಿಗೆ ಕೈಮುಗಿದಿದ್ದಾರೆ. ಟೈಗರ್ ಶಾಫ್ ಮೇಲೆ ದಾಳಿಯಾದ ಬಳಿಕ ಈ ಭದ್ರತೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಅಕ್ಟೋಬರ್ 23 ರಂದು ಮುಂಬೈ ಮೇಯರ್ ರಿತು ತಾವ್ಡೆ ಹಾಗೂ ಉಪ ಮೇಯರ್ ಸಂಜಯ್ ಘಾಡಿ ಅವರಿಗೆ ಬೆದರಿಕೆ ಇಮೇಲ್ ಬಂದಿತ್ತು. ಅಕ್ಟೋಬರ್ 31 ರಿಂದ ನವೆಂಬರ್ 27 ರ ಅವಧಿಯಲ್ಲಿ ಅಮಿತಾಭ್ ಬಚ್ಚನ್ ಅವರ ಜಲ್ಸಾ ಬಂಗಲೆ, ಮೇಯರ್ ಕಚೇರಿ ಮೇಲೆ ಗ್ರೆನೇಡ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಪ್ರಮುಖ ಕಡೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದು ಪೊಲೀಸರ ಸೂಚನೆಯೋ ಇಲ್ಲ ಸ್ವತಃ ಬಚ್ಚನ್ ಅವರ ರಕ್ಷಣಾ ಮುನ್ನೆಚ್ಚರಿಕೆಯೋ ಎಂಬುದು ಸ್ಪಷ್ಟವಾಗಿಲ್ಲವಾದರೂ, ಬಾಲಿವುಡ್ನ ಇಂದಿನ ಕರಾಳ ಪರಿಸ್ಥಿತಿಗೆ ಇದು ನಿದರ್ಶನವಾಗಿದೆ.
ಬಿಗ್ ಬಿ ಮನೆಗೆ ಬೆದರಿಕೆ ಬರುವ ಕೆಲವೇ ದಿನಗಳ ಮೊದಲು ಎಂದರೆ ಅಕ್ಟೋಬರ್ 18ರಂದು ಜುಹುವಿನಲ್ಲಿ ನಟ ಟೈಗರ್ ಶ್ರಾಫ್ ಮೇಲೆ ಭೀಕರ ದಾಳಿ ನಡೆದಿತ್ತು. ಫುಟ್ಬಾಲ್ ಆಟವಾಡಿ, ಕಾರಿನಲ್ಲಿ ವಾಪಸಾಗುತ್ತಿದ್ದ ಟೈಗರ್ ಶ್ರಾಫ್ ಮೇಲೆ ಇಬ್ಬರು ಅಪರಿಚಿತರು ಮನಬಂದಂತೆ ಗುಂಡು ಹಾರಿಸಿದ್ದರು. ಇದಾದ ಬಳಿಕ ಬಾಲಿವುಡ್ ಅಂಗಳದಲ್ಲಿ ಆತಂಕ ಶುರುವಾಗಿದ್ದು, ಅಮಿತಾಬ್ ಕೂಡಾ ಇದೇ ಕಾರಣಕ್ಕೆ ಬುಲೆಟ್ ಪ್ರೂಫ್ ಗ್ಲಾಸ್ ಹಿಂದೆ ಕಾಣಿಸಿಕೊಂಡಿರಬಹದು ಎನ್ನಲಾಗಿದೆ.


