ದೆಹಲಿಯಲ್ಲಿ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಬಿಸಿಲಿನ ತಾಪವೂ ಹೆಚ್ಚಾಗಿತ್ತು ಆದರೂ ನಮ್ಮ ಕಾರ್ಯಕರ್ತರು ಎದೆಗುಂದಲಿಲ್ಲ. ಸಾವಿರಾರು ಯುವಕ-ಯುವತಿಯರು ಸೇರಿದಂತೆ ಸಾಕಷ್ಟು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ದೀಪ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಬ್ಬ ನಾಗರಿಕರು ಈ ಶಾಂತಿಯುತ ಆಂದೋಲನದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು. ಎರಡು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 13 ಕೋಟಿ ಮತದಾರರನ್ನು ಪಟ್ಟಿಯಿಂದ ಅಳಿಸಿಹಾಕಲಾಗಿದೆ ಎಂದು ದೀಪ್ಕೆ ಗಂಭೀರ ಆರೋಪ ಮಾಡಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವಿನ ಗೆಲುವಿನ ಅಂತರ ಕೇವಲ ಶೇ. 2ರಷ್ಟಿತ್ತು, ಈ ಅಂತರವನ್ನು ಹೆಚ್ಚಿಸುವ ಉದ್ದೇಶದಿಂದಲೇ ಚುನಾವಣೆಗೂ 15 ದಿನಗಳ ಮೊದಲು ಗ್ಯಾನೇಶ್ ಕುಮಾರ್ ಅವರನ್ನು ಸಿಇಸಿ ಆಗಿ ನೇಮಿಸಲಾಯಿತು ಎಂದು ಅವರು ದೂರಿದರು. ಇನ್ನು ಕಳೆದ ದೆಹಲಿ ಚುನಾವಣಾ ವೇಳೆ ಅರವಿಂದ್ ಕೇಜ್ರಿವಾಲ್ ಕ್ಷೇತ್ರದಲ್ಲಿ 40,000 ಮತದಾರರನ್ನು ಕೈಬಿಡಲಾಗಿದೆ. ಇದರಿಂದ ಅವರು 4,000 ಮತಗಳಿಂದ ಸೋಲಬೇಕಾಯಿತು. ಅದೇ ರೀಕಿ ತಮಿಳುನಾಡಿನಲ್ಲಿ ಕೂಡಾ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತದಾರರನ್ನು ಅಳಿಸಲಾಗಿದ್ದು 10,000 ಮತಗಳಿಂದ ಸ್ಟಾಲಿನ್ ಸೋತರು. ಹಾಗೇ ಪಶ್ಚಿಮ ಬಂಗಾಳದಲ್ಲೂ ಮಮತಾ ಬ್ಯಾನರ್ಜಿ ಸೋಲಿಗೂ ಇದೇ ಕಾರಣ ಎಂದು ದೀಪ್ಕೆ ಆರೋಪಿಸಿದರು.
ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಕ್ಕಾಗಿ ಸಿಜೆಪಿ ನಾಯಕ ಸೌರವ್ ದಾಸ್ ದೆಹಲಿ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಪೊಲೀಸರು ದೌರ್ಜನ್ಯ ನಿಲ್ಲಿಸಿ ಸುಧಾರಿಸಿಕೊಳ್ಳಬೇಕು, ಇಲ್ಲದಿದ್ದರೆ ನಾವು ನಿಮ್ಮನ್ನು ಸುಧಾರಿಸುತ್ತೇವೆ ಎಂದುಸೌರವ್ ದಾಸ್ ಎಚ್ಚರಿಸಿದ್ದಾರೆ. ಇದೇ ವೇಳೆ ಮಾತಾನಾಡಿದ ಪಕ್ಷದ ಮತ್ತೊಬ್ಬ ಮುಖಂಡ ಅಜಿಂಕ್ಯ ಶಿಂಧೆ 2025ರ ಮತದಾರರ ಪಟ್ಟಿಗಳನ್ನು ತಡೆಹಿಡಿಯಬೇಕು ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ನಿಯಂತ್ರಿಸುವ 2023ರ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.



