ಇಂದಿನ ಕಾಲದಲ್ಲಿ ಎಲ್ಲ ರೀತಿಯ ಸೌಲಭ್ಯಗಳು, ಹಣ, ಅನುಕೂಲಗಳಿದ್ದರೂ ಏನನ್ನೂ ಸಾಧಿಸದೆ ಸಮಯ ಮತ್ತು ಹಣವನ್ನು ಹಾಳು ಮಾಡುವವರು ಎಷ್ಟೋ ಜನರಿದ್ದಾರೆ. ಆದರೆ ಯಾವುದೇ ಮೂಲಭೂತ ಫೆಸಿಲಿಟೀಸ್ ಇಲ್ಲದೆ, ಬಡತನದ ನಡುವೆ ಬೆಳೆದು ದೊಡ್ಡ ಮಟ್ಟದ ಸಾಧನೆ ಮಾಡುವುದು ಸುಲಭದ ಮಾತಲ್ಲ. 

2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ವೈಯಕ್ತಿಕ ಹಾಗೂ ಮಿಕ್ಸೆಡ್ ಎರಡು ವಿಭಾಗಗಳಲ್ಲೂ ಬಂಗಾರದ ಪದಕ ತಂದುಕೊಟ್ಟ 26 ವರ್ಷದ ನೀರು ಧಾಂಡಾ ಅವರ ಸಾಧನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಮಹಿಳಾ ಟ್ರ್ಯಾಪ್ ಶೂಟಿಂಗ್‌ನಲ್ಲಿ ದೇಶಕ್ಕೆ ವೈಯಕ್ತಿಕ ಚಿನ್ನ ತಂದುಕೊಟ್ಟ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. 1978ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿ ರಣಧೀರ್ ಸಿಂಗ್ ಗೆದ್ದ ನಂತರ ಈ ವಿಭಾಗದಲ್ಲಿ ಚಿನ್ನ ಗೆದ್ದ ಏಕೈಕ ಭಾರತೀಯಳು ಇವರಾಗಿದ್ದಾರೆ.
 
ಅಪರಿಚಿತ ವ್ಯಕ್ತಿಯಿಂದ ತಾಯಿಗೆ ಸಿಕ್ಕಿತ್ತು ಸಿಹಿ ಸುದ್ದಿ

ನೀರು ಇವತ್ತು ಗೆದ್ದಿರುವುದು ಪ್ರತಿಯೊಬ್ಬರಿಗೂ ಕಾಣಿಸುತ್ತಿದೆ. ಆದರೆ ಈ ಗೆಲುವಿನ ಹಿಂದೆ ಅವರು ಪಟ್ಟಿರುವ ಶ್ರಮ ಮತ್ತು ಕಷ್ಟ ಕಲ್ಪನೆಗೂ ಮೀರಿದ್ದು. ಇನ್ನು ಅಚ್ಚರಿಯ ವಿಷಯವೆಂದರೆ ನೀರು ಧಾಂಡಾ ಗೆದ್ದಿರುವ ವಿಷಯ ಅವರ ತಾಯಿಗೆ ತಿಳಿದೆ ಇರಲಿಲ್ಲ, ಇದಕ್ಕೆ ಕಾರಣ ನೀರು ಅವರ ಪುಟ್ಟ ಮನೆಯಲ್ಲಿ ಟಿವಿ ಅಥವಾ ಸ್ಮಾರ್ಟ್‌ಫೋನ್‌ನಂತಹ ಯಾವುದೇ ಸೌಲಭ್ಯವಿಲ್ಲ. ಮಗಳು ಜಪಾನ್‌ನಲ್ಲಿ ದೇಶದ ಬಾವುಟ ಹಾರಿಸಿದ ಸುದ್ದಿ ಬೇರೆಯವರು ಹೇಳಿದ ಮೇಲೆಯೇ ತಾಯಿಗೆ ಗೊತ್ತಾಗಿದ್ದು. ಅವರು ಮನೆ ಹತ್ತಿರದ ರೇಷನ್ ಅಂಗಡಿಗೆ ಹೋದಾಗ, ಅಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು "ನಿಮ್ಮ ಮಗಳು ಚಿನ್ನ ಗೆದ್ದಿದ್ದಾಳೆ" ಎಂದು ವಿಷಯ ತಿಳಿಸಿದರು. ಇದನ್ನು ಕೇಳಿದ ತಾಯಿ ತಾವು ಮಾಡುತ್ತಿದ್ದ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ, "ಈ ಸುದ್ದಿ ನಿಜಾನಾ?" ಎಂದು ಖಚಿತಪಡಿಸಿಕೊಳ್ಳಲು ಅಲ್ಲಿದ್ದ ಸ್ಥಳೀಯರಿಗೆ ಹೇಳಿ ಸಂಭ್ರಮಿಸಿದರಂತೆ.

ಇನ್ನು ಆರಂಭದ ದಿನಗಳಲ್ಲಿ ಖಾಲಿ ಡಬ್ಬಿಗಳಿಗೆ ಗುರಿಯಿಟ್ಟು ಶೂಟಿಂಗ್ ಅಭ್ಯಾಸ ಮಾಡುತ್ತಿದ್ದರು. ತರಬೇತಿಯ ಆರಂಭಿಕ ದಿನಗಳಲ್ಲಿ ಅವರ ಬಳಿ ಸ್ವಂತ ಗನ್ ಕೂಡ ಇರಲಿಲ್ಲ. ಬೇರೆಯವರಿಂದ ಬೆಂಕಿನುಗುಳುವ ಗನ್ ಎರವಲು ಪಡೆದು ಅವರು ಶೂಟಿಂಗ್ ಕಲಿಯುತ್ತಿದ್ದರು. ಬಳಿಕ 2018 ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಟ್ರ್ಯಾಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ತನ್ನ ಸೋದರಸಂಬಂಧಿ ಲಕ್ಷಯ್ ಶೆರಾನ್‌ನಿಂದ ನೀರು ಸ್ಫೂರ್ತಿ ಪಡೆದರು. ಅವರ ತಂದೆ-ತಾಯಿ ನೀಡಿದ ಪ್ರೋತ್ಸಾಹದಿಂದ ನೀರು ಶೂಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.

ಅಷ್ಟೇಅಲ್ಲದೇ ರಾಷ್ಟ್ರೀಯ ತರಬೇತಿ ಶಿಬಿರ ನಡೆಯುತ್ತಿದ್ದಾಗ ನೀರು ಅವರಿಗೆ H1N1 ಜ್ವರ ಕಾಣಿಸಿಕೊಂಡು ಭೋಪಾಲ್‌ನ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ದಾಖಲಾಗಿದ್ದರು. ಸುಮಾರು 5 ದಿನಗಳ ಕಾಲ ಅವರು ಕೇವಲ ದ್ರವಾಹಾರದ ಮೇಲಿದ್ದರು ಮತ್ತು ಮೂರೂವರೆ ವಾರಗಳ ಕಾಲ ಅವರಿಗೆ ಶೂಟಿಂಗ್ ಅಭ್ಯಾಸ ಮಾಡಲು ಸಾಧ್ಯವಾಗಿರಲಿಲ್ಲ. ಜಪಾನ್‌ನ ನಗೋಯಾಗೆ ತಲುಪಿದಾಗ ಅವರ ದೇಹ ದಣಿದಿತ್ತು ಮತ್ತು ತರಬೇತಿಯ ಕೊರತೆಯೂ ಇತ್ತು. ಆದರೂ ಅವರಲ್ಲಿದ್ದ ದೃಢಸಂಕಲ್ಪ ಕಮ್ಮಿಯಾಗಿರಲಿಲ್ಲ. ಸ್ಪರ್ಧೆಯ ದಿನ ಮಳೆ ಸುರಿಯುತ್ತಿದ್ದರೂ, ಧೃತಿಗೆಡದೆ ತಮ್ಮ ಗಮನವನ್ನು ಗುರಿಯ ಮೇಲಷ್ಟೇ ನೆಟ್ಟು 28 ಅಂಕಗಳೊಂದಿಗೆ ಚೀನಾದ ಆಟಗಾರ್ತಿಯನ್ನು ಸೋಲಿಸಿ ಇತಿಹಾಸ ಬರೆದರು.

ಬಡತನ, ಅನಾರೋಗ್ಯ ಮತ್ತು ಕಷ್ಟಗಳನ್ನು ಮೆಟ್ಟಿ ನಿಂತು ಗೆದ್ದ ನೀರು ಧಾಂಡಾ, ತಮ್ಮ ಈ ಐತಿಹಾಸಿಕ ಪದಕವನ್ನು ತಾಯಿ, ತರಬೇತುದಾರ ಹಾಗೂ ರಣಧೀರ್ ಸಿಂಗ್ ಅವರಿಗೆ ಅರ್ಪಿಸಿದ್ದಾರೆ. ಸೌಲಭ್ಯಗಳಿದ್ದಾಗ ಗೆಲ್ಲುವುದಕ್ಕಿಂತ, ಏನೂ ಇಲ್ಲದಿದ್ದಾಗ ಸಾಧಿಸಿ ತೋರಿಸುವುದೇ ನಿಜವಾದ ಗೆಲುವು ಎಂಬುದನ್ನು ನೀರು ಧಾಂಡಾ ಸಾಬೀತುಪಡಿಸಿದ್ದಾರೆ.