ಪ್ರಜ್ವಲ್ ರೇವಣ್ಣ ಕೋಣೆಯಲ್ಲಿ ಮೊಬೈಲ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವಂತೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಆದೇಶಿಸಲಾಗಿತ್ತು. ಆದರೆ ಇದಾದ ಕೆಲವೇ ಗಂಟೆಗಳ ನಂತರ, ಶುಕ್ರವಾರ ಸಂಜೆ ಅಧಿಕಾರಿಗಳು ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಮುಂದುವರಿಸಲು ನಿರ್ಧರಿಸಿದ್ದಾರೆ. ಸಿಸಿಬಿ ತಂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಸಿದ ಅನಿರೀಕ್ಷಿತ ಪರಿಶೀಲನೆ ವೇಳೆ ಪ್ರಜ್ವಲ್ ಮತ್ತು ಇನ್ನೊಬ್ಬ ವಿಚಾರಣಾಧೀನ ಕೈದಿ ಬಳಿ ಮೊಬೈಲ್ ಹಾಗೂ ಪೆನ್ ಡ್ರೈವ್ ಪತ್ತೆಯಾದ ನಂತರ ಪ್ರಜ್ವಲ್ ರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ ಇವರನ್ನು ಇಲ್ಲಿಂದ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿತ್ತು. ಅದಕ್ಕಾಗಿ ಅಧಿಕಾರಿಗಳು ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ ಈ ನಿರ್ಧಾರದಿಂದ ಅಧಿಕಾರಿಗಳು ದಿಢೀರ್ ಹಿಂದೆ ಸರಿದಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ.
ಜೈಲು ಪರಿಶೀಲನೆಯ ವೇಳೆ ಪೊಲೀಸರು ಚಾರ್ಜರ್ ಮತ್ತು ನೋಟ್ಬುಕ್ ಅನ್ನು ಪ್ರಜ್ವಲ್ ಬಳಿಯಿಂದ ವಶಪಡಿಸಿಕೊಂಡಿದ್ದರು. ಇದು ಜೈಲಿನ ಭದ್ರತೆ ಹಾಗೂ ನಿಷೇಧಿತ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.