ಇತ್ತೀಚೆಗೆ ದಿನನಿತ್ಯ ಬಳಕೆಯ ವಸ್ತು ಮತ್ತು ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿಯೇ ಬೇಳೆಕಾಳುಗಳ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ. ಆದ್ರೆ ಇದರ ನಡುವೆಯೇ ಕರ್ನಾಟಕದಲ್ಲಿ ಬೇಳೆಕಾಳುಗಳ ಬೆಲೆ ದಿಢೀರನೆ ಏರಿಕೆಯಾಗಿದ್ದು, ಸಾಮಾನ್ಯ ಜನರ ದೈನಂದಿನ ಅಡುಗೆಯ ಮೇಲೆಯೇ ದೊಡ್ಡ ಪೆಟ್ಟು ಬಿದ್ದಿದೆ. ದಿನನಿತ್ಯದ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ತರುವ ಬದಲು, ತೋರಿಕೆಗೆ ಏನೇನೋ ಮಾಡಲು ಕೋಟ್ಯಾಂತರ ವೆಚ್ಚದಲ್ಲಿ ಯೋಜನೆ, ಕಾರ್ಯಕ್ರಮ ಅಂತೆಲ್ಲಾ ಮಾಡ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಲೆ ಏರಿಕೆಗೆ ಅಸಲಿ ಕಾರಣವೇನು?

ಜೂನ್‌ನಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ಬರೋಬ್ಬರಿ ಶೇ. 35ರಷ್ಟು ಮಳೆ ಕೈಕೊಟ್ಟಿದ್ದರಿಂದ ಬೆಳೆಗಳ ಇಳುವರಿ ಸಂಪೂರ್ಣ ಕುಸಿದಿದೆ. ನಮ್ಮ ರಾಜ್ಯದ ತೊಗರಿ ಕಣಜ ಎಂದೇ ಹೆಸರಾದ ಕಲಬುರಗಿ ಹಾಗೂ ಮಹಾರಾಷ್ಟ್ರದ ಭಾಗಗಳಲ್ಲಿ ಸರಿಯಾಗಿ ಮಳೆಯಾಗದೆ ಬೆಳೆ ಹಾಳಾಗಿದೆ. ಸರ್ಕಾರ 16 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ತೊಗರಿ ಬಿತ್ತನೆಯ ಗುರಿ ಇಟ್ಟುಕೊಂಡಿತ್ತಾದರೂ, ಮಳೆ ಕೊರತೆಯಿಂದಾಗಿ ಕೇವಲ 13.35 ಲಕ್ಷ ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿದೆ. ಇದರ ಜೊತೆಗೆ ದಸರಾ, ದೀಪಾವಳಿ ಹಬ್ಬಗಳ ಸಾಲು ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಜಾಸ್ತಿಯಾಗಿದೆ. ಆಫ್ರಿಕಾದ ತಾಂಜೇನಿಯಾ ಹಾಗೂ ಬರ್ಮಾದಿಂದ ಆಮದು ಮಾಡಿಕೊಳ್ಳುವ ಬೇಳೆಯ ವೆಚ್ಚವೂ ಹೆಚ್ಚಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಬೇಳೆಗಳ ರೇಟ್

ನಿತ್ಯ ಬಳಕೆಯ ತೊಗರಿ ಬೇಳೆ ದರ ಮೊದಲು ಕೆಜಿಗೆ 110 ರಿಂದ 125 ರೂಪಾಯಿ ಇತ್ತು, ಈಗ ಅದು 145 ರಿಂದ 160 ರೂಪಾಯಿಗೆ ತಲುಪಿದೆ. ಪ್ರೀಮಿಯಂ ಬ್ರ್ಯಾಂಡೆಡ್ ಬೇಳೆಗಳಂತೂ 200 ರಿಂದ 300 ರೂಪಾಯಿಯವರೆಗೂ ಮಾರಾಟವಾಗುತ್ತಿವೆ. ಹಾಗೆಯೇ ಉದ್ದಿನ ಬೇಳೆ 140 ರಿಂದ 164 ರೂಪಾಯಿ, ಕಡಲೆ ಬೇಳೆ 100 ರಿಂದ 120 ರೂಪಾಯಿ, ಹೆಸರು ಬೇಳೆ 110 ರಿಂದ 115 ರೂಪಾಯಿ ಹಾಗೂ ಮಸೂರ್ ದಾಲ್ 125 ರೂಪಾಯಿವರೆಗೆ ಏರಿಕೆಯಾಗಿದೆ.

ಸಗಟು ಮಾರುಕಟ್ಟೆಯ ಇಂದಿನ ಸ್ಥಿತಿ

ಕ್ವಿಂಟಾಲ್ ಲೆಕ್ಕದಲ್ಲಿ ನೋಡಿದರೆ, ತೊಗರಿ ಬೇಳೆ ಸರಾಸರಿ 11,800 ರೂಪಾಯಿ ಇದ್ದು, ಕಲಬುರಗಿ ಮಾರುಕಟ್ಟೆಯಲ್ಲಿ ಗರಿಷ್ಠ 14,500 ರೂಪಾಯಿಗೆ ತಲುಪಿದೆ. ಅಲಸಂದೆ ಕಾಳು ಕ್ವಿಂಟಾಲ್‌ಗೆ 10,000 ರೂಪಾಯಿ ಹಾಗೂ ಅವರೆ ಬೇಳೆ 9,000 ರೂಪಾಯಿಯಂತೆ ಮಾರಾಟವಾಗುತ್ತಿದೆ.

ಮಾರುಕಟ್ಟೆಗೆ ಮುಂದಿನ ಹೊಸ ಬೆಳೆ ಬರುವವರೆಗೂ ಬೆಲೆ ಕಡಿಮೆಯಾಗುವ ಮುನ್ಸೂಚನೆ ಇಲ್ಲ ಎಂದು ವರ್ತಕರು ಸ್ಪಷ್ಟಪಡಿಸಿದ್ದು, ಸಾಲು ಸಾಲು ಹಬ್ಬಗಳ ನಡುವೆ ಜನಸಾಮಾನ್ಯರ ಪರದಾಟವಂತೂ ಮುಂದುವರಿದಿದೆ.