ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಮತ್ತು ಚೆಂಡಿನ ನಡುವಿನ ಹೋರಾಟದಷ್ಟೇ ಆಟಗಾರರ ನಡುವಿನ ವಾಕ್ಸಮರಗಳು ಕೂಡ ಅಭಿಮಾನಿಗಳ ಗಮನ ಸೆಳೆಯುತ್ತವೆ. ಅಂತಹದ್ದೇ ಒಂದು ಹೈ-ಡ್ರಾಮಾ ಘಟನೆ ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ ನಡುವೆ ನಡೆದ ಮೂರನೇ ಟಿ೨೦ ಪಂದ್ಯದಲ್ಲಿ ಜರುಗಿದೆ. ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಮತ್ತು ಜಿಂಬಾಬ್ವೆ ಬ್ಯಾಟ್ಸ್ಮನ್ ರಯಾನ್ ಬರ್ಲ್ ನಡುವೆ ಮೈದಾನದಲ್ಲೇ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಅಂಪೈರ್ಗಳು ಮಧ್ಯಪ್ರವೇಶಿಸಬೇಕಾಯಿತು.

ಮೈದಾನದಲ್ಲಿ ನಡೆದಿದ್ದೇನು?
ಜಿಂಬಾಬ್ವೆ ಇನ್ನಿಂಗ್ಸ್ನ ೯ನೇ ಓವರ್ನಲ್ಲಿ ರಶೀದ್ ಖಾನ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಜಿಂಬಾಬ್ವೆಯ ರಯಾನ್ ಬರ್ಲ್ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದಾಗ ಚೆಂಡು ನೇರವಾಗಿ ಅವರ ಪ್ಯಾಡ್ಗೆ ಬಡಿಯಿತು. ರಶೀದ್ ಖಾನ್ ತಕ್ಷಣವೇ LBWಗಾಗಿ ಜೋರಾಗಿ ಮನವಿ ಮಾಡಿದರು, ಆದರೆ ಅಂಪೈರ್ ಅದನ್ನು ನಾಟೌಟ್ ಎಂದು ಘೋಷಿಸಿದರು. ಸರಣಿಯಲ್ಲಿ DRS ಲಭ್ಯವಿಲ್ಲದ ಕಾರಣ ಅಂಪೈರ್ ನಿರ್ಧಾರದಿಂದ ರಶೀದ್ ತೀವ್ರ ಅಸಮಾಧಾನಗೊಂಡರು. ಇದೇ ವಿಷಯವಾಗಿ ಓವರ್ ಮುಕ್ತಾಯದ ವೇಳೆಗೆ ಇಬ್ಬರು ಆಟಗಾರರ ನಡುವೆ ತೀವ್ರ ವಾಗ್ವಾದ ಶುರುವಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಆನ್-ಫೀಲ್ಡ್ ಅಂಪೈರ್ ಅಹ್ಮದ್ ಶಾ ಪಕ್ತೀನ್ ಮತ್ತು ಫಾರೂಕ್ ಖಾನ್ ಇಬ್ಬರನ್ನೂ ಸಮಾಧಾನಪಡಿಸಿ ದೂರ ಕರೆದೊಯ್ದರು

ಫ್ಲೈಯಿಂಗ್ ಕಿಸ್' ಮೂಲಕ ಪರಿಸ್ಥಿತಿ ಶಾಂತಗೊಳಿಸಿದ ರಶೀದ್!
ಮೈದಾನದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಸಿದ್ದ ಈ ಜಗಳವು ಕೆಲವೇ ಕ್ಷಣಗಳಲ್ಲಿ ರೋಚಕ ತಿರುವು ಪಡೆದುಕೊಂಡಿತು. ರಯಾನ್ ಬರ್ಲ್ ಔಟ್ ಆಗಿ ಡಗೌಟ್ನಲ್ಲಿ ಕುಳಿತಿದ್ದಾಗ, ರಶೀದ್ ಖಾನ್ ಅವರತ್ತ ನೋಡಿ ತಮಾಷೆಯಾಗಿ ಫ್ಲೈಯಿಂಗ್ ಕಿಸ್ ಎಸೆಯುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೆಲ ಹೊತ್ತಿನ ಮುಂಚೆಯಷ್ಟೇ ಕೋಪದಿಂದ ಕಣ್ಣು ಕೆಂಪಗಾಗಿಸಿಕೊಂಡಿದ್ದ ಆಟಗಾರರ ನಡುವಿನ ಈ ಹಗುರವಾದ ಕ್ಷಣದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.