ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದ ದಿನ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಆರ್ ಆರ್ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ನಟ ದರ್ಶನ್ ಜೊತೆ ಇವರಿಬ್ಬರೂ ಪಾರ್ಟಿ ಮಾಡಿದ್ದರು. ಈ ಕಾರಣಕ್ಕಾಗಿ ಇವರನ್ನು ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ. ಇದರಿಂದ ಇವತ್ತು ಬೆಂಗಳೂರಿನ 59ನೇ CCH ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಇವರಿಬ್ಬರೂ ಆಗಮಿಸಿದ್ದರು. ಆದರೆ ನಟ ಚಿಕ್ಕಣ್ಣ ತೀವ್ರ ಆತಂಕ ಮತ್ತು ಗಾಬರಿಯಿಂದಾಗಿ ಸಾಕ್ಷಿ ಹೇಳುವಾಗ ತಡಬಡಿಸಿದ್ದಾರೆ.

ಕಟಕಟೆಯಲ್ಲಿ ಗಾಬರಿಯಾದ ನಟ ಚಿಕ್ಕಣ್ಣ 
ನ್ಯಾಯಾಲಯದ ಕಟಕಟೆಯಲ್ಲಿ ಸಾಕ್ಷಿ ಹೇಳಲು ನಿಂತ ನಟ ಚಿಕ್ಕಣ್ಣ ಸಾಕಷ್ಟು ಆತಂಕಕ್ಕೆ ಒಳಗಾಗಿ ಹೋದರು. ಮಾತನಾಡಲು ತಡಬಡಸಿದರು ಇದರಿಂದ ನ್ಯಾಯಾಧೀಶರು ಚಿಕ್ಕಣ್ಣಗೆ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದರು. ಆದರೂ ಚಿಕ್ಕಣ್ಣ ತಮಗೆ ತೀವ್ರ ಟೆನ್ಷನ್ ಆಗುತ್ತಿದೆ ಎಂದು ಹೇಳಿ ಪೂರ್ಣ ಹೇಳಿಕೆ ನೀಡಲು ಹಿಂದೇಟು ಹಾಕಿದರು. ಇದರಿಂದ ಚಿಕ್ಕಣ್ಣ ಅವರ ಒತ್ತಡ ಮತ್ತು ಆತಂಕದ ಪರಿಸ್ಥಿತಿ ಪರಿಗಣಿಸಿದ ನ್ಯಾಯಾಲಯವು ಅವರ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

ಯಶಸ್ ಸೂರ್ಯ ಹೇಳಿದ್ದೇನು.?
ನಟ ಯಶಸ್ ಸೂರ್ಯ ಇದೇ ಸಂಬಂಧ ಸಾಕ್ಷಿ ನುಡಿಯಲು ಆಗಿಸಿಮಿದ್ದರು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಸೂರ್ಯ ಘಟನೆಯ ದಿನ ನಡೆದ ಪಾರ್ಟಿಯ ಕುರಿತು ತಮ್ಮ ಹೇಳಿಕೆಯನ್ನು ದಾಖಲಿಸಿದರು. ಅಷ್ಟಕ್ಕೂ ನ್ಯಾಯಾಲಯದಲ್ಲಿ ಸೂರ್ಯ ಹೇಳಿದ್ದಾದರೂ ಏನಂದರೆ ತಮಗೆ ನಟ ದರ್ಶನ್ ಅವರೊಂದಿಗೆ ಹಲವು ವರ್ಷಗಳ ಒಡನಾಟವಿದೆ. 2010ರ ಚಿಂಗಾರಿ ಸಿನಿಮಾದಿಂದ ಹಿಡಿದು ಕುರುಕ್ಷೇತ್ರ, ಚಕ್ರವರ್ತಿ, ಒಡೆಯ ಹಾಗೂ ಗರಡಿ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು. ಅಲ್ಲದೇ ಘಟನೆ ನಡೆದ ದಿನ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ದರ್ಶನ್ ಅವರೊಂದಿಗೆ ಮುಂಬರುವ ಹೊಸ ಸಿನಿಮಾವೊಂದರ ಕುರಿತು ಚರ್ಚಿಸಲು ಭೇಟಿಯಾಗಿದ್ದೆವು. ಈ ವೇಳೆ ಅಲ್ಲೇ ಊಟ ಮಾಡಿದ್ದೆವು. ಅಲ್ಲಿ ಕೇವಲ ಸಿನಿಮಾಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ಚರ್ಚೆಯಾಗಿತ್ತೇ ಹೊರತು ಬೇರೇನೂ ನಡೆದಿಲ್ಲ. ಊಟ ಮುಗಿದ ತಕ್ಷಣವೇ ನಾನು ಅಲ್ಲಿಂದ ಹೊರಟುಹೋದೆ ಎಂದು ಹೇಳಿದರು 

ಆರೋಪಿ ಪವನ್ ವಿಚಾರದಲ್ಲಿ  ನುಡಿದ ಸಾಕ್ಷಿ ಏನು.? 
ಇದೇ ವೇಳೆ ಪ್ರಕರಣದ ಮತ್ತೊಬ್ಬ ಆರೋಪಿ ಪವನ್, ಇವರೆಲ್ಲಾ ಮಾತುಕತೆ ನಡೆಸುವ ವೇಳೆ ಸ್ಥಳಕ್ಕೆ ಬಂದಿದ್ದ. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿರುವ ವಿಷಯವನ್ನು ದರ್ಶನ್ಗೆ ತಿಳಿಸಿ ಹೋಗಿದ್ದ. ಈ ವಿಚಾರವನ್ನು ಪೊಲೀಸರು ಹೇಳಿಕೆ ನೀಡಲು ತಿಳಿಸಿದ್ದರು. ಆದರೆ ಆ ಸಮಯದಲ್ಲಿ ನಾನು ಫೋನ್ನಲ್ಲಿ ಮಾತನಾಡುತ್ತಿದ್ದಿದ್ದರಿಂದ ಪವನ್ ಬಂದು ಹೋಗಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ಯಶಸ್ ಸೂರ್ಯ ಸ್ಪಷ್ಟಪಡಿಸಿದರು. ಇನ್ನು, ಯಶಸ್ ಸೂರ್ಯ ಈ ಹೇಳಿಕೆಯ ಬೆನ್ನಲ್ಲೇ, ಸರ್ಕಾರಿ ಅಭಿಯೋಜಕರು ಯಶಸ್ ಸೂರ್ಯ ಭಾಗಶಃ ಹಾಸ್ಟೈಲ್ ವಿಟ್ನೆಸ್ ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅದರಂತೆ, ಬುಧವಾರದ ವಿಚಾರಣೆಯಲ್ಲಿ ಸರ್ಕಾರಿ ವಕೀಲರು ಯಶಸ್ ಸೂರ್ಯಗೆ ಪಾಟೀ ಸವಾಲು ನಡೆಸಲಿದ್ದಾರೆ. ಹಾಗೇ ಚಿಕ್ಕಣ್ಣ ಕೂಡಾ ಸಾಕ್ಷಿ ನುಡಿಯಲಿದ್ದಾರೆ.