ಸರ್ಕಾರದಲ್ಲಿ ಹೊಸ ಯೋಜನೆಗಳು ಜಾರಿಗೆ ತರಲು ಸರ್ಕಾರ ಹಿಂದು-ಮುಂದು ನೋಡುತ್ತಿದೆ. ವಿಪಕ್ಷಗಳು ಖಜಾನೆ ಖಾಲಿಯಾಗಿದೆ ಶ್ವೇತಪತ್ರ ಹೊರಡಿಸಿ ಎಂದು ಒತ್ತಾಯ ಮಾಡುತ್ತಿವೆ. ಇದರ ನಡುವೆ ರಾಜ್ಯ ಸರ್ಕಾರ ತನ್ನ ಯೋಜನೆಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದು ಹಾಗೂ ಅವುಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಉದ್ದೇಶಕ್ಕೆ ಹಣ ವ್ಯಯ ಮಾಡಲು ಮುಂದಾಗಿದೆ. ಪ್ರಾಜೆಕ್ಟ್ ಕೆ-ಮಾನಿಟರ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು ಅದಕ್ಕಾಗಿ 14 ಕೋಟಿ ರೂಪಾಯಿ ವೆಚ್ಚ ಮಾಡಲು ಸಚಿವ ಸಂಪುಟ ನಿರ್ಧಾರ ಮಾಡಲಾಗಿದೆ. 

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ‘ಸರ್ಕಾರಿ ಯೋಜನೆಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಿ, ಅವುಗಳು ಜನರಿಗೆ ಎಷ್ಟರಮಟ್ಟಿಗೆ ತಲುಪುತ್ತಿವೆ ಎಂಬುದನ್ನು ಪರಿಶೀಲಿಸಲು ಸಚಿವ ಸಂಪುಟ ನಿರ್ಧರಿಸಿದೆ’ ಎಂದು ತಿಳಿಸಿದರು. ‘ಪ್ರಜಾಸೇವೆ ಇಲಾಖೆಯು ಏಜೆನ್ಸಿ ಮೂಲಕ ಈ ಅಧ್ಯಯನ ನಡೆಸಲಿದೆ. ಜನರಿಗೆ ಯಾವ ಯೋಜನೆ ಬಗ್ಗೆ ಒಲವು ಇದೆ ಮತ್ತು ಯಾವುದರ ಬಗ್ಗೆ ಒಲವು ಇಲ್ಲ ಎಂಬುದು ಅಧ್ಯಯನ ವರದಿಯಿಂದ ಗೊತ್ತಾಗುತ್ತದೆ. ಅದನ್ನು ಆಧರಿಸಿ ಸುಧಾರಣೆ ಅಥವಾ ಬದಲಾವಣೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.

ಕೆ-ಮಾನಿಟರ್ ಯೋಜನೆಯಡಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸೋರಿಕೆಗಳಿವೆಯೇ..ಅವುಗಳು ಜನರಿಗೆ ಪರಿಣಾಮಕಾರಿಯಾಗಿ ತಲುಪುತ್ತಿವೆಯೇ ಅವುಗಳ ಅನುಷ್ಠಾನದಲ್ಲಿ ಲೋಪದೋಷಗಳಿವೆಯೇ ಎಂಬುವುದನ್ನು ತಿಳಿದುಕೊಳ್ಳುವುದಾಗಿದೆ. ಈ ಯೋಜನೆಗಳಿಂದ ಜನರಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಯಾವ ರೀತಿಯ ಪ್ರಯೋಜನಗಳಾಗುತ್ತಿವೆ ಎಂಬುದರ ಕುರಿತು ಅಧ್ಯಯನವನ್ನೂ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಇನ್ನು ಯೋಜನೆಯ ಮೊದಲ ಹಂತದಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಒಂದು ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗುವುದು. ಅಲ್ಲದೇ 60 ಸಾವಿರ ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ಅಧ್ಯಯನದ ಆಧಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.ಈ ಮೌಲ್ಯಮಾಪನದ ಫಲಿತಾಂಶಗಳ ಆಧಾರದಲ್ಲಿ ಸರ್ಕಾರಿ ಯೋಜನೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಚಿಂತನೆ ನಡೆಸಲಾಗುವುದು. ಇದಲ್ಲದೇ ಇದರಲ್ಲಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಯೋಜನೆಗಳನ್ನೂ ಪರಿಗಣಿಸಲಾಗುವುದು. ಮತ್ತೊಂದು ವಿಚಾರ ಎಂದರೆ ಅನುಷ್ಠಾನ ಪ್ರಾಧಿಕಾರಕ್ಕೂ ಮೌಲ್ಯಮಾಪನಕ್ಕೂ ಇದರಲ್ಲಿ ಸಂಬಂಧ ಇಲ್ಲ ಎನ್ನಲಾಗಿದೆ.