ಸ್ಟಿಂಗ್ ಆಪರೇಷನ್ ಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಕಟ್ಟುಕಥೆಯ ಭಾಗವಾಗಿದೆ ಎಂದು ಸಿಸಿಬಿ ಹೇಳಿದೆ. ಅಲ್ಲದೇ ಇದು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ನಿರೂಪಣೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ಸಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ವಿಡಿಯೋದಲ್ಲಿ ಚಿತ್ರಿಸಿರುವ ರೀತಿಯಲ್ಲಿ ಯಾವುದೇ ಘಟನೆ ನಡೆದಿರುವ ಬಗ್ಗೆ ಈವರೆಗಿನ ತನಿಖೆಯಲ್ಲಿ ದಾಖಲಿಸಲಾದ ಹೇಳಿಕೆಗಳು ಹಾಗೂ ಸಂಗ್ರಹಿಸಲಾದ ಸಾಕ್ಷಾಧಾರಗಳು ದೃಢಪಡಿಸಿಲ್ಲ ಎಂದು ಸಿಸಿಬಿ ತಿಳಿಸಿದೆ.
ಇದರ ಜೊತೆ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಈಗಾಗಲೇ ಪತ್ತೆಹಚ್ಚಲಾಗಿದೆ. ಅಲ್ಲದೆ ಅವರನ್ನು ಸಮಗ್ರವಾದ ವಿಚಾರಣೆಗೆ ಒಳಪಡಿಸಲಾಗಿದೆ. ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆ ಮಾಡಲಾಗಿದೆ. ಅವರ ಹೇಳಿಕೆಗಳು ಹಾಗೂ ಈವರೆಗೆ ಸಂಗ್ರಹಿಸಲಾದ ಸಾಕ್ಷಾಧಾರಗಳ ಆಧಾರದ ಮೇಲೆ, ವಿಡಿಯೋದಲ್ಲಿ ಉಲ್ಲೇಖಿಸಲಾದ ಅಥವಾ ಸೂಚ್ಯವಾಗಿ ಆರೋಪಿಸಲಾದ ವ್ಯಕ್ತಿಗಳ ವಿರುದ್ಧದ ಆರೋಪಗಳು ಸುಳ್ಳು ಹಾಗೂ ಕಟ್ಟುಕಥೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಎಲ್ಲ ಅಂಶಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಸಿಸಿಬಿ ತಿಳಿಸಿದೆ.


