ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿರುವ ಬೆನ್ನಲ್ಲೇ, ಇರಾನ್‌ನ ಖೇಷ್ಮ್ ದ್ವೀಪದ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದೆ ಎಂಬ ವರದಿಗಳು ಜಾಗತಿಕ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಮಂಗಳವಾರ ಏಷ್ಯನ್ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತೆ ಏರಿಕೆಯಾಗಿದೆ. ಯುದ್ಧದ ಪರಿಸ್ಥಿತಿ ತಿಳಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ಹೊಸ ಸೇನಾ ಕಾರ್ಯಾಚರಣೆಯ ವರದಿಗಳು ಆತಂಕ ಮೂಡಿಸಿವೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಅಮೆರಿಕದ ಪಡೆಗಳು ಇರಾನ್‌ನ ಖೇಷ್ಮ್ ದ್ವೀಪದ ಮೇಲೆ ದಾಳಿ ನಡೆಸಿವೆ. ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಈ ವರದಿ ಪ್ರಕಟಿಸಲಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸುವುದನ್ನು ತಡೆಯುವ ಉದ್ದೇಶದಿಂದ ರಕ್ಷಣಾತ್ಮಕ ಕ್ರಮವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕೆಲವು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕವನ್ನು ಹೆಚ್ಚಿಸಿದೆ.

ಅಮೆರಿಕದ ದಾಳಿ ಕುರಿತ ವರದಿಗಳ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಭವಿಷ್ಯದ ಬೆಲೆ ಶೇ.0.5ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 105.25 ಡಾಲರ್ ತಲುಪಿದೆ. ಅದೇ ರೀತಿ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೆಟ್ ಕಚ್ಚಾ ತೈಲದ ಬೆಲೆ ಕೂಡ ಶೇ.0.5ರಷ್ಟು ಹೆಚ್ಚಳವಾಗಿ 96.93 ಡಾಲರ್ಗೆ ತಲುಪಿದೆ. ಇದಕ್ಕೂ ಹಿಂದಿನ ದಿನ ಯುದ್ಧ ನಿಲ್ಲುವ ಸಾಧ್ಯತೆಗಳ ಬಗ್ಗೆ ಆಶಾವಾದ ಮೂಡಿದ್ದರಿಂದ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.7.63ರಷ್ಟು ಅಂದರೆ 8.66 ಡಾಲರ್ ಕುಸಿದು, ಪ್ರತಿ ಬ್ಯಾರೆಲ್‌ಗೆ 104.77 ಡಾಲರ್‌ಗೆ ತಲುಪಿತ್ತು. ಆದರೆ ಹೊಸ ಸೇನಾ ದಾಳಿಯ ವರದಿಗಳು ಮಾರುಕಟ್ಟೆಯ ಲೆಕ್ಕಾಚಾರವನ್ನೇ ಬದಲಿಸಿವೆ.

ಜಾಗತಿಕ ಇಂಧನ ಪೂರೈಕೆಯಲ್ಲಿ ಹಾರ್ಮುಜ್ ಜಲಸಂಧಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಫೆಬ್ರವರಿ ಅಂತ್ಯದಲ್ಲಿ ಸಂಘರ್ಷ ಆರಂಭವಾಗುವ ಮೊದಲು ವಿಶ್ವದ ಸುಮಾರು ಐದನೇ ಒಂದು ಭಾಗದಷ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಇದೇ ಮಾರ್ಗದ ಮೂಲಕ ಸಾಗಣೆಯಾಗುತ್ತಿತ್ತು. ಆದರೆ ಯುದ್ಧದ ಪರಿಣಾಮ ಹಡಗು ಸಂಚಾರ ಗಣನೀಯವಾಗಿ ಕುಸಿದಿದ್ದು, ಜಾಗತಿಕ ಇಂಧನ ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗಿದೆ.

ಇನ್ನೊಂದೆಡೆ, ಯುದ್ಧಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಮುಂದುವರಿದಿವೆ. ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೆ ಮುಕ್ತಾಯಗೊಂಡಿದ್ದರೂ, ಪರಿಷ್ಕೃತ ಪ್ರಸ್ತಾಪಗಳನ್ನು ಮುಂದಿಡಲಾಗಿದೆ ಎಂದು ಇರಾನ್ ತಿಳಿಸಿದೆ. ಅಮೆರಿಕದ ಜತೆಗಿನ ಸಂಪರ್ಕವೂ ಮುಂದುವರಿದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೆಹ್ರಾನ್ ಜತೆ ಒಪ್ಪಂದ ಸಾಧ್ಯವಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಇತ್ತ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕೂಡ ಯುದ್ಧ ನಿಲ್ಲಿಸುವ ಮಾತುಕತೆಗಳನ್ನು ಮುಂದುವರಿಸಲು ಪರಮೋಚ್ಚ ನಾಯಕ ಅಯಾತುಲ್ಲಾ ಮೊಜ್ತಬಾ ಖಮೇನಿ ಸರ್ಕಾರಕ್ಕೆ ನಿರ್ದಿಷ್ಟ ಅಧಿಕಾರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಒಂದೆಡೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಸೇನಾ ದಾಳಿಗಳ ಭೀತಿ ಮುಂದುವರಿದಿದೆ. ಈ ಅನಿಶ್ಚಿತತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಏರಿಳಿತಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇಂಧನ ಬೆಲೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಜಗತ್ತಿನ ಗಮನ ನೆಟ್ಟಿದೆ.