ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಸುದೀರ್ಘ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ, ಭೇಟಿಯ ವೇಳೆ ತಮಗಾದ ರಾಜಕೀಯ ಅನ್ಯಾಯ ಮತ್ತು ಬೇಸರವನ್ನು ನೇರವಾಗಿಯೇ ಹೊರಹಾಕಿದ್ದಾರೆ ಎನ್ನಲಾಗಿದೆ.
ನನ್ನ ಇಮೇಜ್ ಗೆ ಧಕ್ಕೆ ತಂದರೆ ಪ್ರಚಾರಕ್ಕೆ ಬರಲ್ಲ
ನೀವು ಹೇಳಿದ್ರಿ ಎಂಬ ಒಂದೇ ಕಾರಣಕ್ಕೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು, ಬೇರೆಯವರ ಒತ್ತಡಕ್ಕೆ ಮಣಿದಲ್ಲ. ಆದರೆ ನಾನು ಅಧಿಕಾರದಿಂದ ಇಳಿದ ಬಳಿಕ ನನ್ನ ವರ್ಚಸ್ಸಿಗೆ ಮಸಿ ಬಳಿಯುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಇದೆಲ್ಲ ಕೆಲವರು ಸೃಷ್ಟಿಸಿದ ಬೆಳವಣಿಗೆ" ಎಂದು ಸ್ಟಿಂಗ್ ಪ್ರಕರಣದ ಕುರಿತು ರಾಹುಲ್ ಗಾಂಧಿ ಎದುರೇ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಮುಂದುವರಿದು ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸಲ್ಲ ಎಂದು ಈಗಾಗಲೇ ಹೇಳಿದ್ದೇನೆ. ನಾನು ಮತ್ತೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಅದಾಗ್ಯೂ ಈ ರಾಜಕೀಯ ಷಡ್ಯಂತ್ರ ನಡೆಸಿದ್ದು ಯಾರು? ಆ ವಿಡಿಯೋ ಹಂಚಿಕೊಂಡವರು ಯಾರೆಂದು ನನಗೆ ಗೊತ್ತು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ನನ್ನ ಹೆಸರಿಗೆ ಧಕ್ಕೆ ತರಲಾಗುತ್ತಿರುವುದು ತೀವ್ರ ಬೇಸರ ಮೂಡಿಸಿದೆ. ನನ್ನ ಇಮೇಜ್ಗೆ ಧಕ್ಕೆ ತರುವುದಾದರೆ ನಾನು ಇನ್ಮುಂದೆ ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕನಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಹತ್ವದ ಭೇಟಿಯ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ ಉಪಸ್ಥಿತರಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಈ ನಡೆ ಮತ್ತು "ಪ್ರಚಾರಕ್ಕೆ ಬರಲ್ಲ" ಎಂಬ ಹೇಳಿಕೆ ಈಗ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದೆ.


