ಪ್ರಧಾನಿ ನರೇಂದ್ರ ಮೋದಿ ಆಡಳಿತಾತ್ಮಕ ಚುಕ್ಕಾಣಿ ಹಿಡಿದು ಇವತ್ತಿಗೆ ಸರಿಯಾಗಿ 25 ವರ್ಷ.. ಇದು ಬಿಜೆಪಿಗೆ ಪಕ್ಷದ ನಾಯಕರು, ಕಾರ್ಯಕರ್ತರು ಅಭಿಮಾನಿಗಳಿಗೆ ಹರ್ಷ ತಂದಿದೆ. 2001ರ ಅಕ್ಟೋಬರ್ 7ರ ಇದೇ ದಿನ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು. ಅಂದು ಗುಜರಾತ್‌ ನಲ್ಲಿ ಘಟಾನುಘಟಿ ನಾಯಕರುಗಳಿದ್ದರು ಆದರೆ ಅವರೆನ್ನೆಲಾ ಹಿಂದಕ್ಕೆ ತಳ್ಳಿ ಯಾವುದೇ ಆಡಳಿತಾತ್ಮಕ ಪೂರ್ವ ಅನುಭವವಿಲ್ಲದೇ ಇದ್ದರೂ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಆಸೀನರಾದರು. ಅಲ್ಲಿಂದ ಆರಂಭವಾದ ಅವರ ಅಧಿಕಾರಾವಧಿ ಇಂದು ದೇಶದ ಪ್ರಧಾನಿಯಾಗಿ ಮೂರನೇ ಅವಧಿಗೆ ಯಶಸ್ವಿಯಾಗಿ ಮುನ್ನಡೆಯುತ್ತಾ 25 ವರ್ಷಗಳನ್ನು ಪೂರೈಸಿದೆ. ಇಷ್ಟು ದೀರ್ಘಕಾಲ ಕಾರ್ಯಾಂಗದ ಮುಖ್ಯಸ್ಥರಾಗಿ ಮುಂದುವರಿದಿರುವುದು ಜಾಗತಿಕ ಪ್ರಜಾಪ್ರಭುತ್ವದಲ್ಲೇ ಅತ್ಯಂತ ಅಪರೂಪದ ಸಾಧನೆಯಾಗಿದೆ. 

ಹಾಗಿದ್ದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ದೇಶದ ಪ್ರಧಾನಿಯಾಗಿ ನೀಡಿರುವ ಆಡಳಿತ ಎಂಥಾದ್ದು ಎನ್ನುವುದನ್ನು ಈ ಸಂದರ್ಭದಲ್ಲಿ ಅವಲೋಕನ ಮಾಡಲೇ ಬೇಕು. ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ರಾಜ್ಯ ಭೀಕರ ಭೂಕಂಪದಿಂದ ತತ್ತರಿಸಿ ಹೋಗಿತ್ತು. ಇಂತ ಪರಿಸ್ಥಿತಿಯಲ್ಲಿ ಮೋದಿ ಅಧಿಕಾರ ಸ್ವೀಕರಿಸಿದ್ದರು. ತಮ್ಮ 13 ವರ್ಷಗಳ ಮುಖ್ಯಮಂತ್ರಿ ಅವಧಿಯಲ್ಲಿ ಕೈಗಾರಿಕಾ ಹೂಡಿಕೆ, ಸುಧಾರಿತ ಮೂಲಸೌಕರ್ಯ ಮತ್ತು 24 ಗಂಟೆ ವಿದ್ಯುತ್ ಒದಗಿಸುವ ಮೂಲಕ ಗುಜರಾತ್ ಮಾಡೆಲ್ ಎಂಬ ಜನಪ್ರಿಯತೆಯನ್ನು ದೇಶಾದ್ಯಂತ ಸೃಷ್ಟಿಸಿದರು. ಆದರೆ ಅದರ ಬೆನ್ನಲ್ಲೇ ತಳಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕಗಳು, ಸಾಮಾಜಿಕ ಸೌಹಾರ್ದತೆ ಮತ್ತು ಗುಜರಾತ್‌ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದು ಇಂದಿಗೂ ತೀವ್ರ ವಿಮರ್ಶೆಗೆ ಒಳಗಾಗುತ್ತಿದೆ.ಅದರಲ್ಲೂ ಗುಜರಾತ್ ಹತ್ಯಾಕಾಂಡವನ್ನಂತೂ ದೇಶ ಮರೆತಿಲ್ಲ. ಕೇವಲ ಗೋಧ್ರಾ ರೈಲು ದುರಂತ ಮಾತ್ರವಲ್ಲ..ನಂತರ ನಡೆದ ಭಾಡ್ದುದ್ದ ಗಲಭೆ ನಿಯಂತ್ರಿಸುವಲ್ಲಿ ಮತ್ತು ಅಲ್ಪಸಂಖ್ಯಾತ ನಾಗರಿಕರ ಜೀವ, ಆಸ್ತಿ ರಕ್ಷಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಯಿತು ಎಂಬ ಆರೋಪವಿದೆ. 

ಗುಜರಾತ್ ಮಾಡೆಲ್ ಕಲ್ಪನೆ ಏನಾಯ್ತು.? 
ಗುಜರಾತ್ ಮಾಡೆಲ್ ಅನ್ನುವ ಕಲ್ಪನೆಯೇನೋ ಸರಿಯಾಗಿತ್ತು. ಆದರೆ ಅದರ ನಿರ್ಮಾಣಕ್ಕಾಗಿ ಹಿಡಿದ ಮಾರ್ಗ ತಪ್ಪಾಗಿತ್ತು. ಇದನ್ನ ಗುಜರಾತ್ ನ ಬಿಜೆಪಿ ನಾಯಕರುಗಳೇ ಹೇಳುತ್ತಾರೆ. ಗುಜರಾತ್ ಮಾಡೆಲ್ ಎನ್ನುವುದು ಹೆಚ್ಚಾಗಿ ನಗರ ಕೇಂದ್ರಿತ ಮತ್ತು ಉದ್ಯಮಿಗಳ ಪರವಾಗಿತ್ತು ಎಂಬ ಆಕ್ಷೇಪಗಳು ಇನ್ನೂ ಇಲ್ಲಿ ಚಾಲ್ತಿಯಲ್ಲಿವೆ. ಟಾಟಾ ನ್ಯಾನೋ ಮುಂತಾದ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ಅಗ್ಗದ ದರದಲ್ಲಿ ಭೂಮಿ ಮತ್ತು ತೆರಿಗೆ ವಿನಾಯಿತಿ ನೀಡಿದ ಸರ್ಕಾರ, ಸಣ್ಣ ರೈತರ ನೀರಾವರಿ ಸಮಸ್ಯೆಗಳನ್ನು ಬಗೆಹರಿಸುವ ದೊಡ್ಡ ಮನಸ್ಸು ಮಾಡಲಿಲ್ಲ. ಅದರಲ್ಲೂ ನರ್ಮದಾ ನಾಲೆಯ ನೀರು ಗ್ರಾಮೀಣ ಭಾಗದ ತಳಮಟ್ಟದ ರೈತರಿಗೆ ತಲುಪದ ಕಾರಣ, ಸೌರಾಷ್ಟ್ರ ಮತ್ತು ಕಚ್ ಭಾಗದ ರೈತರು ನಿರಂತರ ಸಂಕಷ್ಟ ಎದುರಿಸುವಂತಾಯಿತು ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳೂ ಪ್ರತಿದಿನ ವರದಿಯಾಗಿದ್ದವು. ಬಂಡವಾಳಶಾಹಿ ಆಧಾರಿತ ನೀತಿಗಳಿಂದಾಗಿ ಗುಜರಾತ್‌ನಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ಹೆಚ್ಚಾಯಿತು.

ಶಿಕ್ಷಣದ ವಿಚಾರಕ್ಕೆ ಬರುವಾದಾದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಲಯದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣದ ಬದಲಿಗೆ ಖಾಸಗೀಕರಣಕ್ಕೆ ಹೆಚ್ಚಿನ ಒತ್ತು ನೀಡಿದರು. ಪರಿಣಾಮ ಸಾಕ್ಷರತಾ ಸೂಚ್ಯಂಕದಲ್ಲಿ ಗುಜರಾತ್ ದೇಶದ ಮೊದಲ ಹತ್ತು ರಾಜ್ಯಗಳ ಪಟ್ಟಿಯಲ್ಲೂ ಸ್ಥಾನ ಪಡೆಯಲು ವಿಫಲವಾಗಿತ್ತು.ಈ ಆಡಳಿತ ಶೈಲಿಯ ನಡುವೆಯೇ 2014ರಲ್ಲಿ ಮೋದಿ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಂಡಾಗ ದೇಶದ ಜನರಲ್ಲಿ ಹೊಸ ಭರವಸೆ ಇತ್ತು. ಭಾರಿ ಬದಲಾವಣೆಯ ನಿರೀಕ್ಷೆ ಇತ್ತು. ದಶಕಗಳ ಬಳಿಕ ಒಂದೇ ಪಕ್ಷಕ್ಕೆ ಸಿಕ್ಕ ಪೂರ್ಣ ಬಹುಮತದ ಕಾರಣದಿಂದಾಗಿ ಅಂದಿನ ಜನರು ಹತ್ತಾರು ಆಶೋತ್ತರಗಳನ್ನು ಇರಿಸಿಕೊಂಡಿದ್ದರು. ಇದಕ್ಕೆ ತಕ್ಕಂತೆ ಮೋದಿ ಅಚ್ಚೇ ದಿನ್ ಆನೇ ವಾಲೇ ಹೈ ಮತ್ತು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಘೋಷಣೆಗಳನ್ನು ಮೊಳಗಿಸಿದರು. ಇದು ಜನರಲ್ಲಿ ಹೊಸ ಚೈತನ್ಯ ಮೂಡಿಸಿದ್ದವು. ಜನರು ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತವನ್ನು ನಿರೀಕ್ಷಿಸುತ್ತಿದ್ದರು. ಹಾಗಿದ್ರೆ ಮೋದಿ ಮಾಡಿದ ಘೋಷಣೆಗಳು ನೆರವೇರಿದವಾ ಎಂಬುದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ.
 
ನಿರುದ್ಯೋಗಿಗಳಿಗೆ ‘ಪಕೋಡ’ ಸಲಹೆ 

ವರ್ಷಕ್ಕೆ 2 ಕೋಟಿ ಉದ್ಯೋಗಗಳ ಬೃಹತ್ ಭರವಸೆಗಳೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಮುಂದಿನ ದಿನದಲ್ಲಿ ನಿರುದ್ಯೋಗಿ ಯುವಕರಿಗೆ ಪಕೋಡ ಮಾರುವ ಉಚಿತ ಸಲಹೆ ಕೊಟ್ಟರು. 2 ಕೋಟಿ ಉದ್ಯೋಗದ ಭರವಸೆ ಇವತ್ತಿಗೂ ನೀರಿನ ಮೇಲಿನ ಬರಹವಾಗಿಯೇ ಉಳಿದಿದೆ. ಯುವಜನತೆಗೆ ಉದ್ಯೋಗ ಸೃಷ್ಟಿಸಲು ವಿಫಲವಾಗಿರುವುದು. ಭರವಸೆ ನೀಡಿದ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗದ ಕಾರಣ, ಭಾರತದಲ್ಲಿ ನಿರುದ್ಯೋಗ ದರವು ಇತ್ತೀಚಿನ ದಶಕಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರಸ್ತುತ ಮೋದಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಯಾವುದೇ ಸುದೀರ್ಘ ಆಡಳಿತವನ್ನು ಮೌಲ್ಯಮಾಪನ ಮಾಡುವಾಗ ಅದರ ಮಿತಿಗಳನ್ನು ಪರಿಶೀಲಿಸುವುದು ಪ್ರಜಾಪ್ರಭುತ್ವದ ನಿಯಮ. ಅದರಂತೆ ಕಳೆದ 12 ವರ್ಷಗಳಲ್ಲಿ ದೇಶದ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಮೇಲೆ ಈ ಸರ್ಕಾರದಿಂದ ಆಗಿರುವ ಪರಿಣಾಮವನ್ನು ವಿಶ್ಲೇಷಿಸಲೇ ಬೇಕು. 

ಸಂಕಷ್ಟ ತಂದ ನೋಟು ಅಮಾನ್ಯೀಕರಣ 
2016ರಲ್ಲಿ ಜಾರಿಗೆ ತಂದ ನೋಟು ಅಮಾನ್ಯೀಕರಣ ಕಪ್ಪುಹಣ ಮತ್ತು ಭಯೋತ್ಪಾದನೆ ನಿಗ್ರಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಇದನ್ನು ರಿಸರ್ವ್ ಬ್ಯಾಂಕ್ ಅಂಕಿ-ಅಂಶಗಳೇ ಸಾಬೀತುಪಡಿಸಿವೆ. ಈ ಹಠಾತ್ ನಿರ್ಧಾರದಿಂದಾಗಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದ ಸಣ್ಣ, ಅಸಂಘಟಿತ ಮತ್ತು ಮಧ್ಯಮ ಕೈಗಾರಿಕೆಗಳು ಇನ್ನೂ ಚೇತರಿಸಿಕೊಳ್ಳಲು ಸಾಧ್ಯವೇ ಆಗಿಲ್ಲ.ಇದರ ಬೆನ್ನಲ್ಲೇ ಜಾರಿಯಾದ ಜಿಎಸ್ಟಿ ಗೊಂದಲಗಳು ಸಣ್ಣ ವ್ಯಾಪಾರಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದವು.

ಇದರ ಜೊತೆ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ದಿನಬಳಕೆಯ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ. ಇದು ಬಡ ಮತ್ತು ಮಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿದೆ.ಇದರೊಂದಿಗೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡು ದೇಶದ ಆರ್ಥಿಕ ದೌರ್ಬಲ್ಯವನ್ನು ಜಗತ್ತಿನ ಎದುರು ಪ್ರದರ್ಶಿಸಿದೆ.

ಸ್ವಾಯತ್ತೆ ಸಂಸ್ಥೆಗಳಿಗೆ ಬಿತ್ತು ಬ್ರೇಕ್ 
ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ಕಾವಲುಗಾರರಾದ ಸಿಬಿಐ (CBI), ಜಾರಿ ನಿರ್ದೇಶನಾಲಯ (ED), ಮತ್ತು ಚುನಾವಣಾ ಆಯೋಗದಂತಹ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಧಕ್ಕೆಯಾಗಿದೆ ಎಂಬ ಗಂಭೀರ ಆರೋಪಗಳಿವೆ.

ತನಿಖಾ ಸಂಸ್ಥೆಗಳ ದುರುಪಯೋಗ
ಮೋದಿ ಆಡಳಿತದಲ್ಲಿ ಸ್ವಾಯತ್ತ ಸಂಸ್ಥೆಗಳು ಕಾಲು ಮುರಿದುಕೊಂಡು ಕೂತಿವೆ ಎನ್ನುವ ಆರೋಪಗಳಿವೆ. ಸಿಬಿಐ,ಜಾರಿ ನಿರ್ದೇಶನಾಲಯ ಮತ್ತು ಚುನಾವಣಾ ಆಯೋಗದಂತಹ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳು ಇವತ್ತು ಸರ್ಕಾರದ ಆಜ್ಞೆಗಾಗಿ ಕಾಯುತ್ತಿವೆ. ಅಲ್ಲದೇ ಇದೇ ತನಿಖಾ ಸಂಸ್ಥೆಗಳನ್ನು ಕೇವಲ ರಾಜಕೀಯ ವಿರೋಧಿಗಳನ್ನು ಮತ್ತು ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಲು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂಬ ಆರೋಪವೂ ಇದೆ. ಆಡಳಿತ ಪಕ್ಷ ಸೇರಿದ ತಕ್ಷಣ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ನಾಯಕರು ಮುಕ್ತರಾಗುತ್ತಿರುವುದನ್ನು ನೋಡಿದೆ ಇದು ವ್ಯವಸ್ಥೆಯನ್ನು ಅಣಕ ಮಾಡುವಂತಿದೆ. 

ಸಾಮಾಜಿಕ ಧ್ರುವೀಕರಣ ಮತ್ತು ಬಹುತ್ವಕ್ಕೆ ಧಕ್ಕೆ:
ಮೋದಿ ಅಭಿವೃದ್ಧಿಯ ಹೆಸರಿನಲ್ಲಿ ಪಟ್ಟಕ್ಕೆ ಏರಿದರೂ ಚುನಾವಣಾ ಲಾಭಕ್ಕಾಗಿ ದೇಶದಲ್ಲಿ ಧಾರ್ಮಿಕ ಧ್ರುವೀಕರಣ ಮತ್ತು ದ್ವೇಷದ ಭಾಷಣಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಸತ್ಯ ಬಯಲಾಗುತ್ತಿದೆ ಅಲ್ಪಸಂಖ್ಯಾತರು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲಿನ ದಾಳಿಗಳು ಹಾಗೂ ಮಣಿಪುರದಲ್ಲಿ ನಡೆದ ಸುದೀರ್ಘ ಜನಾಂಗೀಯ ಹಿಂಸಾಚಾರವನ್ನು ನಿಯಂತ್ರಿಸಲು ಪ್ರಧಾನಿ ವಿಫಲರಾಗಿದ್ದು, ಸರ್ಕಾರದ ಕಾನೂನು ಸುವ್ಯವಸ್ಥೆ ದೊಡ್ಡ ವೈಫಲ್ಯ ಅಂತಾನೇ ಹೇಳಬಹುದು.ಮೋದಿ ತಮ್ಮ 25 ವರ್ಷಗಳ ರಾಜಕೀಯ ಪಯಣದಲ್ಲಿ 2002ರ ಗುಜರಾತ್ ಗಲಭೆಗಳ ಕಪ್ಪು ಚುಕ್ಕೆ ಇಂದಿಗೂ ಮಾಸಿಲ್ಲ. ಆದರೆ ಪ್ರಧಾನಿಯಾದ ಬಳಿಕವೂ ದೇಶದಲ್ಲಿ ಧಾರ್ಮಿಕ ಧ್ರುವೀಕರಣ, ದ್ವೇಷದ ಭಾಷಣಗಳನ್ನು ಪಠಣ ಮಾಡುತ್ತಲೇ ಬಂದಿದ್ದಾರೆ. ಇದು ಬಹುಸಂಖ್ಯಾತ ವಾದಕ್ಕೆ ಸಿಕ್ಕ ಪ್ರೋತ್ಸಾಹ ಭಾರತದ ಬಹುತ್ವದ ಸಂಸ್ಕೃತಿಗೆ ಧಕ್ಕೆ ತರುತ್ತಿದೆ.

ವಿದೇಶಾಂಗ ಮತ್ತು ಗಡಿ ಭದ್ರತೆಯ ವಿಚಾರಗಳು 
ವಿದೇಶಾಂಗ ನೀತಿಯಲ್ಲಿ ಮೋದಿ ದೊಡ್ಡ ಮಟ್ಟದ ಪ್ರಚಾರ ಪಡೆದರೂ, ನೆರೆಹೊರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದ ಉಪಟಳ ಮಟ್ಟ ಹಾಕಲು ಮೋದಿಗೆ ಸಾಧ್ಯವಾಗಿಲ್ಲ. ಅದರಲ್ಲೂ ಚೀನಾ ಭಾರತದ ಗಡಿಯೊಳಗೆ ಅತಿಕ್ರಮಣ ನಡೆಸಿರುವುದು ನಡೆಯುತ್ತಲೇ ಇದೆ. ಇನ್ನು ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾದಂತಹ ನೆರೆರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಮೊದಲಿನಷ್ಟು ಸುಸೂತ್ರವಾಗಿಲ್ಲದಿರುವುದು ರಾಜತಾಂತ್ರಿಕ ಹಿನ್ನಡೆ ಅಂತಾನೇ ಹೇಳಬಹುದು. ಇದರೊಂದಿಗೆ ದೇಶದೊಳಗಿನ ವಿಚಾರಕ್ಕೆ ಬರುವುದಾದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ನಂತರವೂ ಅಲ್ಲಿ ಟಾರ್ಗೆಟ್ ಕಿಲ್ಲಿಂಗ್ಸ್ ಮತ್ತು ಸೈನಿಕರ ಮೇಲಿನ ಉಗ್ರಗಾಮಿ ದಾಳಿಗಳು ನಿಂತಿಲ್ಲ.

ವಿವಾದ ಸೃಷ್ಟಿಸಿದ ಕೃಷಿ ಕಾಯ್ದೆಗಳು 
ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶದ ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ ರೈತ ಪ್ರತಿಭಟನೆ ನಡೆಯಿತು. ನೂರಾರು ರೈತರ ಸಾವಿನ ನಂತರ, ತೀವ್ರ ರಾಜಕೀಯ ಒತ್ತಡಕ್ಕೆ ಮಣಿದ ಪ್ರಧಾನಿ ಮೋದಿ ಕಾಯ್ದೆಗಳನ್ನು ಹಿಂಪಡೆದರು. ಇದು ಸರ್ಕಾರದ ಏಕಪಕ್ಷೀಯ ನೀತಿ ನಿರೂಪಣೆಗೆ ಹಿಡಿದ ಕೈಗನ್ನಡಿಯಾಗಿದೆ.

ಸರ್ಕಾರಿ ಸಂಸ್ಥೆಗಳ ಖಾಸಗೀಕರಣದ  ಆರೋಪ 
ಇದರ ಜೊತೆ ರೈಲ್ವೆ, ವಿಮಾನ ನಿಲ್ದಾಣಗಳು, BSNL ಮತ್ತು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಕಾರ್ಪೊರೇಟ್ ಮಿತ್ರರಿಗೆ ಅಗ್ಗದ ದರದಲ್ಲಿ ಹಸ್ತಾಂತರಿಸಲಾಗುತ್ತಿದೆ ಎಂಬ ಆರೋಪಗಳು ತೀವ್ರಗೊಂಡಿವೆ.

ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳು:
ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿವೆ. ಈ ಬಾರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ದೊಡ್ಡ ಅಲ್ಲೋಲ ಕಲ್ಲೋಲವೇ ಸೃಷ್ಟಿ ಆಗಿತ್ತು. ಈ ಹಗರಣಗಳು ಸರ್ಕಾರದ ಪರೀಕ್ಷಾ ಮಂಡಳಿಗಳ ನಿಷ್ಕ್ರಿಯತೆ ಮತ್ತು ಯುವಕರ ಭವಿಷ್ಯದೊಂದಿಗಿನ ಆಟವನ್ನು ಎತ್ತಿ ತೋರಿಸಿವೆ.

ಸರ್ಕಾರದ ಕೈಗೊಂಬೆ ಆಗಿದೆಯಾ ಚುನಾವಣಾ ಆಯೋಗ.?
ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ದಿನಾಂಕಗಳ ಘೋಷಣೆ, ವಿರೋಧ ಪಕ್ಷಗಳ ಮೇಲಿನ ತಾರತಮ್ಯದ ಕ್ರಮಗಳು ಮತ್ತು ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತರಲಾದ ಅನಧಿಕೃತ ಬದಲಾವಣೆಗಳು ಸ್ವತಂತ್ರ ಸಂಸ್ಥೆಯಾದ ಚುನಾವಣಾ ಆಯೋಗದ ನಿಷ್ಪಕ್ಷಪಾತ ಗುಣದ ಮೇಲೆ ಸಾರ್ವಜನಿಕರಲ್ಲಿ ಸಂಶಯ ಮೂಡಿಸಿವೆ. ಆದರೆ ಇದರ ಬಗ್ಗೆ ಕ್ರಮಕ್ಕೆ ಮೋದಿ ಮುಂದಾಗುತ್ತಿಲ್ಲ. ಇಷ್ಟಕ್ಕೆ ಮೋದಿ ಸರ್ಕಾರದ ಆಡಳಿತ ಕಥೆ ಮುಗಿಯಲ್ಲ. ಹುಡುಕುತ್ತಾ ಹೋದರೆ ಇಂಥ ಹಲವಾರು ಹುಳುಕುಗಳು ಸಿಗುತ್ತಾ ಹೋಗುತ್ತವೆ. 

ಡಿಜಿಟಲ್ ಮೂಲಸೌಕರ್ಯ ಮತ್ತು ಜಾಗತಿಕ ಮಟ್ಟದ ಪ್ರಚಾರದಲ್ಲಿ ಯಶಸ್ಸನ್ನು ಕಂಡಿರಬಹುದು. ಆದರೆ, ಒಂದು ಪ್ರಜಾಪ್ರಭುತ್ವ ದೇಶದ ನೈಜ ಯಶಸ್ಸು ಅಳೆಯುವುದು ಸಾಂಸ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸೌಹಾರ್ದತೆ ಮತ್ತು ಸಾಮಾನ್ಯ ನಾಗರಿಕನ ಆರ್ಥಿಕ ಭದ್ರತೆಯ ಮೇಲೆ. ಈ ಮೂರೂ ರಂಗಗಳಲ್ಲಿ ಮೋದಿ ಆಡಳಿತವು ಗಂಭೀರ ಹಿನ್ನಡೆ ಅನುಭವಿಸಿದೆ. ಬೃಹತ್ ಪ್ರಚಾರಗಳ ಮರೆಯಲ್ಲಿ ತಳಮಟ್ಟದ ವಾಸ್ತವಗಳು ಕರಗಿಹೋಗುತ್ತಿವೆ.

ಸಾರ್ವಜನಿಕ ಜೀವನದ 25ವರ್ಷಗಳ ಪೂರೈಸಿದ ನಡುವೆ ದೆಹಲಿಯಲ್ಲಿ ಪ್ರಧಾನಿ ಮೋದಿ ಇಂದು ದೆಹಲಿಯಲ್ಲಿ ನಡೆದ ವಿಕಸಿತ ಭಾರತ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದಾರೆ. ಈ ಕುರಿತು 2047 ರ ವೇಳೆಗೆ ಭಾರತವನ್ನು ವಿಕಸಿತ ಮಾಡುತ್ತೇವೆ, ಈಗಾಗಲೇ ಜಾಗತಿಕ ಉತ್ಪಾದನಾ ಕೇಂದ್ರ, ಒಲಿಂಪಿಕ್ಸ್‌ನ ಆತಿಥ್ಯ, ಬಾಹ್ಯಾಕಾಶಕ್ಕೆ ಹೆಜ್ಜೆ ಹಾಕುತ್ತಿದ್ದೇವೆ ಈ ಶಕ್ತಿ ಮತ್ತು ಆತ್ಮವಿಶ್ವಾಸ ಅದ್ಭುತವಾಗಿದೆ ಎಂದು ಶ್ಲಾಘನೆ ಹಾಗೂ ಭರವಸೆಯ ಮಾತುಗಳನ್ನಾಡಿದ್ದಾರೆ.

ಇವತ್ತು ನರೇಂದ್ರ ಮೋದಿ ತಾವು ಕಾಲು ಶತಮಾನದ ಆಡಳಿತ ಸಂಭ್ರಮದಲ್ಲಿ ಮುಳುಗಿದ್ದಾರೆ. ಆ ಸಡಗರವನ್ನು ಅವರ ಅಭಿಮಾನಿಗಳು ದೇಶಾದ್ಯಂತ ಆಚರಣೆ ಮಾಡುತ್ತಿದ್ದಾರೆ. ಅಧಿಕಾರದ ಈ 25 ವರ್ಷಗಳ ಮೈಲಿಗಲ್ಲು ಕೇವಲ ವೈಭವೀಕರಣಕ್ಕೆ ಸೀಮಿತವಾಗದೆ, ಕಳೆದುಹೋಗುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರುಸ್ಥಾಪಿಸುವ ಕಡೆಗೆ ದೇಶವನ್ನು ಮೋದಿ ಪ್ರೇರೇಪಿಸಬೇಕಿದೆ.