ಇನ್ನೇನು ದಸರಾ, ದೀಪಾವಳಿ ಹಬ್ಬ ಬಂತು ಹೊಸ ಎಸಿ, ಟಿವಿ ಅಥವಾ ಫ್ರಿಜ್ ಖರೀದಿಸಬೇಕು ಅನ್ಕೊಂಡಿರೋವರಿಗೆ ದೊಡ್ಡ ಶಾಕ್ ಕೊಟ್ಟ ಗೃಹೋಪಯೋಗಿ ಮತ್ತು ಕನ್ಸೂಮರ್ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿಗಳು. ಅಕ್ಟೋಬರ್ 1ರಿಂದ ಎಸಿ, ಎಲ್‌ಇಡಿ ಟಿವಿ, ವಾಷಿಂಗ್ ಮೆಷಿನ್ ಮತ್ತು ರೆಫ್ರಿಜರೇಟರ್‌ಗಳ ಬೆಲೆಯನ್ನು ಶೇಕಡಾ 5ರಿಂದ 8ರಷ್ಟು ಹೆಚ್ಚಿಸಲು ಪ್ರಮುಖ ಕಂಪನಿಗಳು ನಿರ್ಧರಿಸಿವೆ.

ವರದಿಗಳ ಪ್ರಕಾರ, 2026ರಲ್ಲೇ ಎಲೆಕ್ಟ್ರಾನಿಕ್ಸ್ ಉಪಕರಣಗಳ ಬೆಲೆ ಏರಿಕೆಯಾಗುತ್ತಿರುವುದು ಇದು ಮೂರನೇ ಬಾರಿ. ಹಬ್ಬದ ಸೀಸನ್ ಆರಂಭವಾಗುವ ಬೆನ್ನಲ್ಲೇ ಬೆಲೆ ಏರಿಕೆ ಮುನ್ನೆಲೆಗೆ ಬಂದಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.
 
ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು ಅಂದ್ರೆ..?

ಕಚ್ಚಾವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಿರುವುದೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಕಂಪನಿಗಳು ತಿಳಿಸಿವೆ. ತಾಮ್ರ (ಕಾಪರ್), ಉಕ್ಕು (ಸ್ಟೀಲ್), ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್ ಬೆಲೆಗಳು ಗಣನೀಯವಾಗಿ ಏರಿಕೆಯಾಗಿವೆ. ಜೊತೆಗೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ವಾತಾವರಣದಿಂದಾಗಿ ಕಚ್ಚಾ ತೈಲ ಮತ್ತು ಸರಕು ಸಾಗಣೆ ವೆಚ್ಚ ವಿಪರೀತ ಹೆಚ್ಚಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯದ ವ್ಯತ್ಯಾಸವೂ ಕಂಪನಿಗಳ ಮೇಲೆ ಭಾರಿ ಒತ್ತಡ ಹೇರಿದೆ.

ಯಾವ ಉಪಕರಣಗಳ ಬೆಲೆ ಎಷ್ಟು ಹೆಚ್ಚಾಗಲಿದೆ ಅಂದ್ರೆ 

ಏರ್ ಕಂಡೀಷನರ್‌ಗಳು : ಎಸಿಗಳ ಬೆಲೆಯಲ್ಲಿ ಹೆಚ್ಚು ಅಂದರೆ ಶೇಕಡಾ 5ರಿಂದ 10ರಷ್ಟು ಏರಿಕೆಯಾಗಲಿದೆ. ಬ್ಲೂ ಸ್ಟಾರ್, ಡೈಕಿನ್, ಗೋದ್ರೇಜ್, ಎಲ್‌ಜಿ ಮತ್ತು ಹಿಟಾಚಿ ಕಂಪನಿಗಳು ಈಗಾಗಲೇ ಬೆಲೆ ಏರಿಕೆಯನ್ನು ದೃಢಪಡಿಸಿವೆ.

ಎಲ್‌ಇಡಿ ಟಿವಿ ಹಾಗೂ ಇತರ ಉಪಕರಣಗಳು : ಸೂಪರ್ ಪ್ಲಾಸ್ಟ್ರಾನಿಕ್ಸ್ (ಥಾಮ್ಸನ್, ಕೊಡಾಕ್, ಬ್ಲೌಪಂಕ್ಟ್) ಅಕ್ಟೋಬರ್ ನಂತರ ಟಿವಿ ಬೆಲೆಗಳನ್ನು ಶೇ. 7ರಷ್ಟು ಹೆಚ್ಚಿಸಲಿದೆ. ವಾಷಿಂಗ್ ಮೆಷಿನ್ ಮತ್ತು ಫ್ರಿಜ್ ಬೆಲೆಗಳು ಶೇ. 3ರಿಂದ 5ರಷ್ಟು ಏರಿಕೆಯಾಗಲಿವೆ.

ಗ್ರಾಹಕರಿಗೆ ಒಂದು ಸಣ್ಣ ಸಮಾಧಾನಕರ ಸುದ್ದಿ ಅಂದ್ರೆ, ಬೆಲೆ ಏರಿಕೆ ಜಾರಿಗೆ ಬಂದರೂ, ಹಬ್ಬದ ಆರಂಭದ ದಿನಗಳಲ್ಲಿ ಖರೀದಿದಾರರಿಗೆ ಹಳೆಯ ಬೆಲೆಯಲ್ಲೇ ಉತ್ಪನ್ನಗಳು ಸಿಗುವ ಸಾಧ್ಯತೆಯಿದೆ. ಏಕೆಂದರೆ ಡೀಲರ್‌ಗಳು ಈಗಾಗಲೇ ಹಳೆಯ ದರದಲ್ಲೇ ಸ್ಟಾಕ್ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಹಾಗಾಗಿ ಹಳೆಯ ಸ್ಟಾಕ್ ಮುಗಿಯುವವರೆಗೆ ಹಳೆಯ ಬೆಲೆಯಲ್ಲೇ ಸಿಗಬಹುದು ಎಂಬ ನಿರೀಕ್ಷೆ ಇದೆ.