ಉರ್ದು ದಿನಾಚರಣೆ ಪ್ರಯುಕ್ತ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಆಶ್ರಯದಲ್ಲಿ  ‘ಉರ್ದು ಹಬ್ಬ’ ಆಯೋಜಿಸಲು ಸಿದ್ಧತೆ ನಡೆದಿದೆ, ನವೆಂಬರ್ 9ರಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ಅವರು ನೀಡಿರುವ ಹೇಳಿಕೆ ಚರ್ಚೆಯೊಂದಕ್ಕೆ ಕಾವು ನೀಡುತ್ತಿದೆ. 

ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುವ ಈ ಕಾರ್ಯಕ್ರಮ, ಓಲೈಕೆ ರಾಜಕಾರಣ ಹಾಗೂ ಕನ್ನಡ ಅಸ್ಮಿತೆಗೆ ವಿರುದ್ಧವಾದದ್ದು ಎಂಬ ವಾದ ಕೇಳಿ ಬರಲಾರಂಭಿಸಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಪರ್ವ 2026 ಉತ್ಸವದ ನಾಲ್ಕನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಯು ಟಿ ಖಾದರ್ ಉರ್ದು ಪತ್ರಿಕೆಗಳ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಉರ್ದು ಭಾಷೆ ಮತ್ತು ಸಾಹಿತ್ಯದ ಜೊತೆಗೆ ಅದರೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿ, ಪರಂಪರೆ ಹಾಗೂ ಕಲಾ ಪ್ರಕಾರಗಳನ್ನು ರಾಜ್ಯದ ವಿವಿಧ ಸಮುದಾಯಗಳಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದಿದ್ದರು.

ವಿಧಾನಸೌಧದ ಆವರಣದಲ್ಲಿ ವಿವಿಧ ಇಲಾಖೆಗಳು ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವಾಗ, ಉರ್ದು ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಬೃಹತ್ ಬೃಹತ್ ಕಾರ್ಯಕ್ರಮವನ್ನೂ ಇದೇ ಸ್ಥಳದಲ್ಲಿ ನಡೆಸಬಹುದು ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದರು.

ಪ್ರಸ್ತಾವಿತ ಉರ್ದು ಹಬ್ಬವನ್ನು ಕೇವಲ ಸಾಹಿತ್ಯ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಉರ್ದು ಸಂಸ್ಕೃತಿ, ಪುಸ್ತಕ, ಆಹಾರ ಮತ್ತು ವಿವಿಧ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದರು.

ಉರ್ದು ಹಬ್ಬ, ಉರ್ದು ನ್ಯೂಸ್‌ನಂತಹ ಕಿಡಿಯಾಗದಿರಲಿ!

ಉರ್ದು ಹಬ್ಬದ ಸುದ್ದಿ ವರದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದು ಕನ್ನಡ ವಿರೋಧಿ ಕಾರ್ಯಕ್ರಮ ಎಂಬ ಅಭಿಪ್ರಾಯ ವ್ಯಕ್ತವಾಗಲಾರಂಭಿಸಿದೆ. 

ಇದು ಉರ್ದುನ್ಯೂಸ್ ಗಲಭೆಯಂತೆ ಈ ಹಬ್ಬ ಕೂಡ ಮತ್ತೊಂದು ಗಲಾಟೆಗೆ ಆಸ್ಪದ ನೀಡದಿರಲಿ ಎಂದು ಎಚ್ಚರಿಸಿ ಟ್ವೀಟ್‌ಗಳನ್ನು ಪ್ರಕಟವಾಗಿವೆ. ಸಂಸ್ಕೃತಿಯ ಹೆಸರಿನಲ್ಲಿ ಉರ್ದು ಹೇರಿಕೆ ಬೇಡ ಎಂದು ಕೆಲವರು ಹಬ್ಬವನ್ನು ವಿರೋಧಿಸಿದ್ದಾರೆ.  

ಬೆಂಗಳೂರು ದೂರದರ್ಶನ ಕೇಂದ್ರ 1994ರಲ್ಲಿ ಪ್ರತಿ ದಿನ ಸಂಜೆಯ ಪ್ರೈಮ್‌ ಟೈಮ್‌ನಲ್ಲಿ 10 ನಿಮಿಷಗಳ ಉರ್ದು ವಾರ್ತೆಯನ್ನು ಬಿತ್ತರಿಸಲು ಆರಂಭಿಸಿತ್ತು. ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿಗಳನ್ನು ಉರ್ದು ಭಾಷೆಯಲ್ಲಿ ವೀಕ್ಷಕರಿಗೆ ತಲುಪಿಸುವುದು ಉದ್ದೇಶವಾಗಿತ್ತು. 

ಈ ಕಾರ್ಯಕ್ರಮ ರಾಜಕೀಯ ಬಣ್ಣ ಪಡೆದು, ಚುನಾವಣಾ ಪೂರ್ವದಲ್ಲಿ ಆರಂಭವಾಗುತ್ತಿರುವ ಸುದ್ದಿ ಪ್ರಸಾರ, ಮುಸ್ಲಿಮ್‌ ಮತಗಳ ಓಲೈಕೆಗಾಗಿ ನಡೆಸುತ್ತಿರುವ ಪ್ರಯತ್ನ ಎಂದು ತೀವ್ರ ವಿರೋಧವನ್ನು ಎದುರಿಸಿತು. ವಿರೋಧ, ಪ್ರತಿಭಟನೆಗೆ ತಿರುಗಿ, ಗಲಭೆಯಾಗಿ 23 ಮಂದಿ ಸಾವಿಗೆ ಕಾರಣವಾಯಿತು. ಮೂರು ದಿನಗಳ ಕಾಲ ನಡೆದ ಗಲಭೆ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿತು. 

ಉರ್ದು ಹಬ್ಬದ ಘೋಷಣೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ನೆನಪಿಸುತ್ತಿರುವ ಸೋಷಿಯಲ್ ಮೀಡಿಯಾ ಬಳಕೆದಾರರು, ಉರ್ದು ಹಬ್ಬವನ್ನು ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ.