ನವರಾತ್ರಿ ಆರಂಭವಾದ ದಿನದಿಂದಲೂ ನಾವು ಆಯಾ ದಿನದ ವಿಶೇಷತೆಗಳ ಬಗ್ಗೆ ನಿಮಗೆ ಹೇಳ್ತಾ ಬಂದಿದ್ದೀವಿ. ಅದರಂತೆ ಇವತ್ತು ನಾವು ನವರಾತ್ರಿಯ ಎಂಟನೇ ದಿನದ ಕುರಿತು ತಿಳಿದುಕೊಳ್ಳೋಣ.. ಇವತ್ತಿನ ದಿನ ಯಾರಿಗೆ ಮೀಸಲು ಅಂದ್ರೆ ಮಹಾಗೌರಿಗೆ. ದುರ್ಗಾ ದೇವಿಯ ಅತ್ಯಂತ ಸುಂದರ ರೂಪವಾದ ಗೌರಿ ದೇವಿಯನ್ನ ಈ ದಿನ ಪೂಜಿಸಲಾಗುತ್ತೆ. ಹಾಗಿದ್ರೆ ಪೂಜೆಯ ವಿಧಿ - ವಿಧಾನಗಳೇನು.? ಮಹಾಗೌರಿ ಪೂಜೆ ಮಹತ್ವ ಮತ್ತು ಮಂತ್ರ ಯಾವುದು. ? ಈ ತಾಯಿಯನ್ನ ಪೂಜೆ ಮಾಡೋದ್ರಿಂದ ದೊರಕುವ ಫಲಗಳು ಏನು ಅನ್ನೋದನ್ನ ಈಗ ತಿಳಿದುಕೊಳ್ಳೋಣ..
 
ನವರಾತ್ರಿಯ ದಿನಗಳ ವಿಶೇಷ ನಿಮಗೆ ಗೊತ್ತೇ ಇದೆ.. ಈ ದಿನಗಳಲ್ಲಿ ದುರ್ಗಾ ದೇವಿಯು ಒಂಬತ್ತು ದಿನಗಳವರೆಗೆ ಭೂಮಿಗೆ ಬಂದು ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಅನ್ನೋದು ಅಪಾರವಾದ ನಂಬಿಕೆ. ಒಂದೊಂದು ದಿನವೂ ಒಂದೊಂದು ರೂಪದಲ್ಲಿ ಬಂದು ಹೋಗುವ ತಾಯಿ 8ನೇ ದಿನದಲ್ಲಿ ಮಹಾಗೌರಿಯಾಗಿ ಧರೆಗೆ ಇಳಿದು ಬರ್ತಾಳೆ. ಇಂಥಹ ಮಹಾಗೌರಿಯನ್ನ ಪೂಜಿಸೋದ್ರಿಂದ ಜೀವನದಲ್ಲಿ ನೆಮ್ಮದಿ ದೊರೆಯುತ್ತೆ. ಆಕೆಯನ್ನು ವಿಧಿ - ವಿಧಾನಗಳ ಪ್ರಕಾರ ಪೂಜಿಸುವುದರಿಂದ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳೂ ದೂರವಾಗುತ್ತವೆ ಅಂತ ಹೇಳಲಾಗುತ್ತೆ. ನೀವು ಏಳು ದಿನವೂ ದುರ್ಗಾಮಾತೆಯನ್ನ ನೋಡಿರೋದೇ ಬೇರೆ.. ಎಂಟನೇ ದಿನ ಮಹಾಗೌರಿಯ ರೂಪದಲ್ಲಿ ನೋಡೋದೇ ಬೇರೆ. ಯಾಕೆಂದ್ರೆ.. ದುರ್ಗಾ ದೇವಿಯ ವಿವಿಧ ಅವತಾರಗಳಲ್ಲಿ ಮಹಾಗೌರಿಯ ರೂಪವು ಅತ್ಯಂತ ಅದ್ಭುತ ಮತ್ತು ಸುಂದರವಾಗಿದೆ. ದುರ್ಗಾ ದೇವಿಯು ಬ್ರಹ್ಮಾಂಡದ ಕಲ್ಯಾಣಕ್ಕಾಗಿ ನಾನಾ ಅವತಾರಗಳನ್ನು ತೆಗೆದುಕೊಂಡಿದ್ದಾಳೆ. ಈಕೆಯ ಮೈಬಣ್ಣ ಅತ್ಯಂತ ಬಿಳಿಯಾಗಿದೆ. ಮಾತ್ರವಲ್ಲ ತಾಯಿ ಧರಿಸುವ ಬಟ್ಟೆ ಮತ್ತು ಆಭರಣಗಳು ಬಿಳಿಯಾಗಿರುತ್ವೆ.

ಮಹಾಗೌರಿಯು ನಾಲ್ಕು ಕೈಗಳನ್ನು ಹೊಂದಿದ್ದು, ಗೂಳಿಯ ಮೇಲೆ ಕುಳಿತು ಸಂಚಾರವನ್ನು ಮಾಡ್ತಾ ಇರ್ತಾಳೆ. ತಾಯಿಯು ತನ್ನ ಬಲಗಡೆಯಲ್ಲಿನ ಮೇಲಿನ ಕೈಯಲ್ಲಿ ಅಭಯ ಮುದ್ರೆಯನ್ನು ಹಿಡಿದುಕೊಂಡಿರುತ್ತಾಳೆ ಮತ್ತು ಕೆಳಗಿನ ಕೈಯಲ್ಲಿ ತ್ರಿಶೂಲ ಇರುತ್ತೆ. ಅಷ್ಟೇ ಅಲ್ಲ.. ಎಡಭಾಗದ ಮೇಲಿನ ಕೈಯಲ್ಲಿ ಡಮರುವನ್ನ ಮತ್ತು ಕೆಳಗಿನ ಎಡಗೈಯಲ್ಲಿ ವರ ಮುದ್ರೆಯನ್ನ ಹಿಡಿದುಕೊಂಡಿರುತ್ತಾಳೆ. ಇನ್ನು ಈ ಮಾತೆಯನ್ನ ಪೂಜೆ ಮಾಡೋದು ಹೇಗೆ ಅನ್ನೋದನ್ನ ಈಗ ಹೇಳಿಕೊಡ್ತೀವಿ.. 8ನೇ ದಿನದಂದು ನೀವು ಏನ್ಮಾಡ್ಬೋಕು ಅಂದ್ರೆ.. ದುರ್ಗಾ ದೇವಿಯನ್ನು ಪೂಜೆ ಮಾಡುವುದಕ್ಕಾಗಿ ಮೊದಲು ಸ್ನಾನ ಇತ್ಯಾದಿಗಳನ್ನು ಮಾಡಿ ಶುದ್ಧರಾಗಿ ಶುಚಿಯಾದ ಬಟ್ಟೆ ಹಾಕಿಕೊಳ್ಳಬೇಕು. ಇನ್ನು ಪೂಜೆಯ ಮೊದಲು, ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಮಹಾಗೌರಿಯ ವಿಗ್ರಹವನ್ನ ಪೀಠದ ಮೇಲೆ ಪ್ರತಿಷ್ಠಾಪಿಸ್ಬೇಕು. ಇದಾದ ಮೇಲೆ ದೇವರ ಕೋಣೆಯನ್ನು ಹೂವು ಮತ್ತು ದೀಪಗಳಿಂದ ಅಲಂಕರಿಸಿ ತಾಯಿಗೆ ಧೂಪ, ದೀಪ, ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು, ಶ್ರೀಗಂಧ, ಕುಂಕುಮ, ಅಕ್ಷತೆ ಅರ್ಪಿಸಬೇಕು.ಮಹಾಗೌರಿ ದೇವಿಯ ಪೂಜೆ ಮಾಡಲು ರಾತ್ರಿ ಅರಳುವಂತಹ ಮಲ್ಲಿಗೆ ಹೂವನ್ನ ಬಳಸಬೇಕು. ಭಕ್ತಿ ಹಾಗೂ ಶ್ರದ್ಧೆಯಿಂದ ನವರಾತ್ರಿಯ ಪೂಜೆ ಮಾಡಬೇಕು. ಗಣೇಶ ಪ್ರಾರ್ಥನೆ ಮೂಲಕ ಪೂಜೆ ಆರಂಭಿಸಿ, ಷೋಡಸೋಪಚಾರ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು. ಇದಾದ ಮೇಲೆ ಮಹಾಗೌರಿಯ ಮಂತ್ರಗಳನ್ನು ಪಠಿಸ್ಬೇಕು. ಆ ಮಂತ್ರ ಯಾವುದು ಅಂದ್ರೆ.. ಓಂ ದೇವಿ ಮಹಾಗೌರ್ಯೈ ನಮಃ .. ಈ ಮಂತ್ರವನ್ನ ಪಠಣ ಮಾಡಿ ಪೂಜೆಯ ಕೊನೆಯಲ್ಲಿ, ಆರತಿಯನ್ನು ಮಾಡಿ ಮತ್ತು ವ್ರತ ಕಥೆಯನ್ನು ಓದಿ. ಪೂಜೆ ಮುಗಿದ ನಂತರ ಬಡವರಿಗೆ ಮತ್ತು ನಿರ್ಗತಿಕರಿಗೆ ಪ್ರಸಾದ ಮತ್ತು ದಾನ ನೀಡಿ. 


ಇನ್ನು ಮಹಾಗೌರಿಯನ್ನು ತಾಯಿ ಪಾರ್ವತಿಯ ದೈವಿಕ ರೂಪವೆಂದು ಪರಿಗಣಿಸಲಾಗುತ್ತೆ. ಅವಳ ಬಿಳಿ ಬಟ್ಟೆ ಮತ್ತು ಆಭರಣಗಳಿಂದಾಗಿ ಅವಳನ್ನು ಶ್ವೇತಾಂಬರಧರ ಅಂತಾನೂ ಸಂಭೋದನೆ ಮಾಡ್ಲಾಗುತ್ತೆ. ಮಹಾಗೌರಿಯನ್ನು ಮೆಚ್ಚಿಸಲು, ಭಕ್ತರು ಈ ದಿನದಂದು ಉಪವಾಸ ಮಾಡ್ಬೇಕು. ಮಹಾಗೌರಿಯ ಮಂತ್ರವನ್ನು ಪಠಿಸುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸುವ ಮೂಲಕ, ಜನರು ಅವಳ ಆಶೀರ್ವಾದಪಡೆಯುತ್ತಾರೆ ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳುತ್ತಾರೆ. ಮಾತೆ ಮಹಾಗೌರಿಯ ಕಥೆಯಾದ್ರೂ ಏನು ಅಂತೀರಾ.. ದೇವಿ ಭಾಗವತ ಪುರಾಣದ ಪ್ರಕಾರ, ಪಾರ್ವತಿ ದೇವಿಯು ಶಿವನನ್ನ ಒಳ್ಸಿಕೊಳ್ಳಲು ತನ್ನ ತಪಸ್ಸಿನ ಸಮಯದಲ್ಲಿ ಗಡ್ಡೆ, ಗೆಣಸು, ಹಣ್ಣುಗಳು ಮತ್ತು ಎಲೆಗಳನ್ನು ಮಾತ್ರ ತಿನ್ನುತ್ತಿದ್ದಳು. ನಂತರ ತಾಯಿ ಗಾಳಿಯನ್ನು ಮಾತ್ರ ಸೇವಿಸಿ ತಪಸ್ಸು ಮಾಡಲು ಪ್ರಾರಂಭಿಸಿದಳು. ತಾಯಿ ಪಾರ್ವತಿಯು ತಪಸ್ಸಿನಿಂದ ಮಹಿಮೆಯನ್ನು ಗಳಿಸಿದಳು ಮತ್ತು ಇದರಿಂದಾಗಿ ಆಕೆಗೆ ಮಹಾಗೌರಿ ಅಂತ ಹೆಸರಿಸಲಾಯ್ತು. ತಾಯಿಯ ತಪಸ್ಸಿಗೆ ಸಂತಸಗೊಂಡ ಶಿವನು ಆಕೆಯನ್ನು ಗಂಗಾಸ್ನಾನ ಮಾಡುವಂತೆ ಹೇಳಿದನು. ತಾಯಿ ಪಾರ್ವತಿಯು ಗಂಗಾನದಿಯಲ್ಲಿ ಸ್ನಾನ ಮಾಡಲು ಹೋದಾಗ, ದೇವಿಯ ಒಂದು ರೂಪವು ಕಪ್ಪು ಮೈಬಣ್ಣದಿಂದ ಕಾಣಿಸಿಕೊಂಡಿತು, ಅವಳನ್ನು ಕೌಶಿಕಿ ಅಂತ ಕರೆಯಲಾಗುತ್ತೆ. ಮತ್ತು ಇನ್ನೊಂದು ರೂಪವು ಮಹಾಗೌರಿ ಎಂದು ಕರೆಯಲ್ಪಡುವ ಪ್ರಕಾಶಮಾನವಾದ ಚಂದ್ರನಂತೆ ಕಾಣಿಸಿಕೊಂಡಿತು.ತಾಯಿ ಗೌರಿ ತನ್ನ ಪ್ರತಿಯೊಬ್ಬ ಭಕ್ತನ ಕಲ್ಯಾಣವನ್ನು ಮಾಡುತ್ತಾಳೆ ಮತ್ತು ಅವರನ್ನು ಎಲ್ಲಾ ಸಮಸ್ಯೆಗಳಿಂದ ಮುಕ್ತಗೊಳಿಸುತ್ತಾಳೆ ಅನ್ನೋದು ಅನಾದಿ ಕಾಲದಿಂದಲೂ ಬಂದಿರೋ ನಂಬಿಕೆ. 

ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡ್ತಾಳೆ. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವನ್ನ ಕೂಡಾ ನೀಡ್ತಾಳೆ. ನವರಾತ್ರಿಯ ಈ ಸಂದರ್ಭದಲ್ಲಿ ಇಂಥ ಮಹಾತಾಯಿ ಮಹಾಗೌರಿಯನ್ನ ಭಕ್ತಿಯಿಂದ ಮನಸಾರೆ ಆರಾಧಿಸೋಣ ಆಕೆಯ ಕೃಪಗೆ ಒಳಗಾಗಿ ಧನ್ಯರಾಗಿ ಆಶೀರ್ವಾದ ಪಡೆಯೋಣ