ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಸರ್ಕಾರ ಉಚಿತ ಕರೆಂಟ್ ನೀಡಿ ಮತ್ತೊಂದು ಕಡೆ ಅದನ್ನು ವಸೂಲು ಮಾಡುತ್ತಿದೆ ಎನ್ನುವ ಆರೋಪವಿದೆ. ಆದರೂ ಬಡವರ ಪಾಲಿಗಂತೂ ಇದರಿಂದ ಅನುಕೂಲವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದರ ಮಧ್ಯೆ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಇದೀಗ ಬೆಸ್ಕಾಂ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅರ್ಹ ಫಲಾನುಭವಿಗಳನ್ನು ಮರು ಪರಿಶೀಲಿಸುವ ಕಟ್ಟುನಿಟ್ಟಿನ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಸುಮಾರು 16ಲಕ್ಷ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಿಂದ ಬಹುತೇಕ ಹೊರಗುಳಿಯುವ ಭೀತಿ ಎದುರಾಗಿದೆ.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಈ ಯೋಜನೆಯನ್ನು ಸಾಕಷ್ಟು ಜನರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಇದರಿಂದ ಇದನ್ನು ತಡೆಯಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ನೀಡಲು ಇಂಧನ ಇಲಾಖೆ ಮುಂದಾಗಿದೆ. ಅದರಂತೆ ಮರು ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 69 ಲಕ್ಷ ಫಲಾನುಭವಿಗಳಿದ್ದಾರೆ. ಇದರಲ್ಲಿ 16 ಲಕ್ಷ ಮಂದಿಯ ನಿಖರ ಮಾಹಿತಿ ಹಾಗೂ ದಾಖಲೆಗಳು ಈವರೆಗೂ ಬೆಸ್ಕಾಂ ಕೈಸೇರಿಲ್ಲ ಎಂದು ತಿಳಿದು ಬಂದಿದೆ. ಮತ್ತೊಂದು ಕಡೆ ಮೀಟರ್ ರೀಡರ್ಗಳು ಹಾಗೂ ಸಿಬ್ಬಂದಿ ಮೂರಕ್ಕೂ ಹೆಚ್ಚು ಬಾರಿ ಮನೆಗಳಿಗೆ ಭೇಟಿ ನೀಡಿದರೂ ಫಲಾನುಭವಿಗಳು ಸಿಕ್ಕಿಲ್ಲ. ಇದು ಫಲಾನುಭವಿಗಳನ್ನು ಗುರುತಿಸುವವುದು ಅಧಿಕಾರಿಗಳಿಗೆ ಕಷ್ಟವಾಗಿದೆ. ಬಹುತೇಕ ಮನೆಗಳಿಗೆ ಬೀಗ ಹಾಕಿರುವುದು ಅಥವಾ ಬಾಡಿಗೆದಾರರು ಮನೆ ಖಾಲಿ ಮಾಡಿ ಬೇರೆಡೆ ತೆರಳಿರುವುದು ಕಂಡುಬಂದಿದೆ.
 
ಇದೆಲ್ಲದರ ನಡುವೆ ಕೆಲ ಫಲಾನುಭವಿಗಳು ಸ್ವತಃ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಇದಕ್ಕೆ ಕಾರಣವೂ ಇದೆ. ಪ್ರಮುಖವಾಗಿ ಆದಾಯ ತೆರಿಗೆ ಪಾವತಿದಾರರು ಹಾಗೂ ಹೊರರಾಜ್ಯದ ಮತದಾರರ ಪಟ್ಟಿಯಲ್ಲಿರುವವರು ದಾಖಲೆ ನೀಡಲು ಮುಂದೆ ಬರುತ್ತಿಲ್ಲ. ಇನ್ನು ಯಾರು ಇಲ್ಲಿಯವರೆಗೆ ತಮ್ಮ ದಾಖಲೆಗಳನ್ನು ಸಲ್ಲಿಸಿಲ್ಲವೋ ಅಂಥವರಿಗೆ ಬೆಸ್ಕಾಂ ತಮ್ಮ ದಾಖಲೆಗಳನ್ನು ಸಲ್ಲಿಸದ ಗ್ರಾಹಕರಿಗೆ ಬೆಸ್ಕಾಂ ಕೊನೆಯ ಅವಕಾಶವನ್ನು ನೀಡಿದೆ. ಅಕ್ಟೋಬರ್ 31ರ ಒಳಗಾಗಿ ಹತ್ತಿರದ ಬೆಸ್ಕಾಂ ಉಪ ವಿಭಾಗೀಯ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಯನ್ನು ಭರ್ತಿ ಮಾಡಬೇಕಿದೆ. ಒಂದು ವೇಳೆ ಈ ಅಂತಿಮ ಗಡುವಿನ ಒಳಗೂ ಮಾಹಿತಿ ನೀಡದಿದ್ದರೆ, ಅಂತಹವರ ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಬಳಿಕ ಪರಿಶೀಲನೆಯಲ್ಲಿ ಭಾಗಿಯಾಗದ ಗ್ರಾಹಕರನ್ನು ಗೃಹ ಜ್ಯೋತಿ ಯೋಜನೆಯಿಂದ ಶಾಶ್ವತವಾಗಿ ಹೊರಗಿಡಲು ಇಲಾಖೆ ತೀರ್ಮಾನಿಸಿದೆ.