ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಹಠಾತ್ತನೆ ವಿದಾಯ ಘೋಷಿಸಿದ ಘಟನೆ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರ ಟೆಸ್ಟ್ ನಿವೃತ್ತಿಯ ಹಿಂದಿನ ಕಾರಣದ ಕುರಿತು ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ನೀಡಿರುವ ಹೇಳಿಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಕೊಹ್ಲಿ  ನಿವೃತ್ತಿಗೆ ಕೇವಲ ಫಾರ್ಮ್ ಕುಸಿತವೇ ಕಾರಣವಲ್ಲ. ತಂಡದೊಳಗಿದ್ದ ಪ್ರಮುಖರಿಂದ ಅವರ ಮೇಲೆ ನಂಬಿಕೆಯ ಕೊರತೆ ಹಾಗೂ ಮ್ಯಾನೇಜ್‌ಮೆಂಟ್‌ನಿಂದ ಅಗತ್ಯ ಬೆಂಬಲ ಸಿಗದಿರುವುದು ಕೂಡ ಪ್ರಮುಖ ಕಾರಣವಾಗಿರಬಹುದು ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

‘ಕೊಹ್ಲಿಗೆ ತಂಡದಿಂದ ಬೆಂಬಲ ಸಿಗಲಿಲ್ಲ’

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಕೈಫ್, ಫಾರ್ಮ್‌ನಲ್ಲಿ ಏರಿಳಿತ ಸಾಮಾನ್ಯವಾಗಿದ್ದು, ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರರನ್ನು ನಡೆಸಿಕೊಂಡ ರೀತಿಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಕೊಹ್ಲಿ ನೀಡಿದ್ದ ಸಂದರ್ಶನಗಳನ್ನು ಗಮನಿಸಿದಾಗ ಅವರಲ್ಲಿ ಬೇಸರ ಕಂಡುಬರುತ್ತಿತ್ತು. ಮ್ಯಾನೇಜ್‌ಮೆಂಟ್‌ನಿಂದ ಅವರಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಹಾಗೂ ತಂಡದಲ್ಲಿ ಅವರು ಒಂಟಿಯಾಗಿದ್ದರು ಎಂಬ ಭಾವನೆ ಮೂಡುತ್ತಿತ್ತು. ಕೊಹ್ಲಿ ಇನ್ನೂ ಟೆಸ್ಟ್ ಕ್ರಿಕೆಟ್ ಆಡಲು ಬಯಸಿದ್ದರು. ಆದರೆ ತಂಡದೊಳಗಿನ ಕೆಲವರಿಗೆ ಅವರ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಲಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದನ್ನು ಉಲ್ಲೇಖಿಸಿದ ಕೈಫ್, ಅನುಭವಿ ಆಟಗಾರನನ್ನು ಕೆಲವೇ ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಅಳೆಯುವುದು ಸರಿಯಲ್ಲ. ಆಸ್ಟ್ರೇಲಿಯಾದಲ್ಲಿ ಒಂದೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣಕ್ಕೆ ಕೊಹ್ಲಿಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಯಾರೂ ಪ್ರತಿಯೊಂದು ಪಂದ್ಯದಲ್ಲೂ ಒಂದೇ ರೀತಿಯ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಅವರಿಗೆ ಸೂಕ್ತ ಬೆಂಬಲ ನೀಡಿದ್ದರೆ ಅವರು ಮತ್ತೆ ಉತ್ತಮ ಪ್ರದರ್ಶನಕ್ಕೆ ಮರಳುವ ಸಾಧ್ಯತೆ ಇತ್ತು ಎಂಬುದು ಕೈಫ್ ಅವರ ಅಭಿಪ್ರಾಯಪಟ್ಟಿದ್ದಾರೆ.

ಆಯ್ಕೆ ಸಮಿತಿಯ ನಡೆ ಬಗ್ಗೆ ಚರ್ಚೆ

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಆಯ್ಕೆ ಸಮಿತಿಯು ಕೊಹ್ಲಿಯೊಂದಿಗೆ ಅವರ ಸ್ಥಾನಮಾನ ಮತ್ತು ಮುಂದಿನ ಆಯ್ಕೆಯ ಕುರಿತು ಚರ್ಚಿಸಿತ್ತು ಎಂಬ ವರದಿಗಳು ಈ ಹಿಂದೆ ಕೇಳಿಬಂದಿದ್ದವು. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿನ ಪ್ರದರ್ಶನವನ್ನು ಆಧರಿಸಿ ಮುಂದಿನ ಪಂದ್ಯಗಳಿಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ರೀತಿಯ ಚರ್ಚೆ ನಡೆದಿತ್ತು ಎನ್ನಲಾಗಿದೆ. ಇಂತಹ ವಾತಾವರಣ ಕೊಹ್ಲಿಗೆ ಬೇಸರ ಉಂಟುಮಾಡಿರಬಹುದು ಎಂಬ ವಿಶ್ಲೇಷಣೆಗಳು ಕೂಡ ಕೇಳಿಬಂದಿದ್ದವು.

ಆದರೆ, ಈ ಬೆಳವಣಿಗೆಗಳು ಕೊಹ್ಲಿಯ ನಿವೃತ್ತಿಗೆ ನೇರ ಕಾರಣವೆಂದು ಅಧಿಕೃತವಾಗಿ ದೃಢಪಟ್ಟಿಲ್ಲ. ಮೊಹಮ್ಮದ್ ಕೈಫ್ ಅವರ ಹೇಳಿಕೆ ಕೂಡ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಕೊಹ್ಲಿ ತಮ್ಮ ನಿವೃತ್ತಿಗೆ ನೀಡಿರುವ ಅಧಿಕೃತ ಕಾರಣಗಳಿಗಿಂತ ಭಿನ್ನವಾದ ವಿಶ್ಲೇಷಣೆಯಾಗಿದೆ.

ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪಾರ ಯಶಸ್ಸು ಕಂಡಿರುವ ವಿರಾಟ್ ಕೊಹ್ಲಿ, ತಂಡದ ನಾಯಕನಾಗಿಯೂ ಹಲವು ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ಹೀಗಾಗಿ ಅವರಿಗೆ ವಿದಾಯ ಪಂದ್ಯ ಆಡುವ ಅವಕಾಶ ಸಿಗದೆ ಟೆಸ್ಟ್ ವೃತ್ತಿಜೀವನ ಅಂತ್ಯಗೊಂಡಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಕೊಹ್ಲಿ  ಟೆಸ್ಟ್ ನಿವೃತ್ತಿಯ ಹಿಂದಿನ ನಿಖರ ಕಾರಣದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದ್ದರೂ, ಮ್ಯಾನೇಜ್‌ಮೆಂಟ್ ಬೆಂಬಲದ ಕೊರತೆ ಮತ್ತು ತಂಡದೊಳಗಿನ ನಂಬಿಕೆಯ ಪ್ರಶ್ನೆಯೇ ಪ್ರಮುಖ ಕಾರಣ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಮತ್ತೊಮ್ಮೆ ಕೊಹ್ಲಿಯ ಟೆಸ್ಟ್ ನಿವೃತ್ತಿಯ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.