ವಿಶ್ವದ ಕೋಟ್ಯಂತರ ಓದುಗರ ಮನಗೆದ್ದ ಖ್ಯಾತ ಬ್ರಿಟಿಷ್ ಲೇಖಕ ಜೆಫ್ರಿ ಆರ್ಚರ್ ಇನ್ನಿಲ್ಲ. ಬೆಸ್ಟ್ಸೆಲ್ಲರ್ ಕಾದಂಬರಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದ್ದ ಮಾಜಿ ಕನ್ಸರ್ವೇಟಿವ್ ಸಂಸದ ಜೆಫ್ರಿ ಆರ್ಚರ್ (86) ಸೋಮವಾರ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಜೆಫ್ರಿ ಅವರು ತಮ್ಮ ಬರವಣಿಗೆಯ ನಡುವೆಯೇ ಹಠಾತನೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪ್ರಕಾಶಕರಾದ ಹಾರ್ಪರ್ಕಾಲಿನ್ಸ್ ತಿಳಿಸಿದ್ದಾರೆ.

50 ವರ್ಷಗಳ ಕಾಲ ಕಥೆಗಳ ಲೋಕದಲ್ಲಿ ಓದುಗರನ್ನು ರಂಜಿಸಿದ್ದ ಆರ್ಚರ್, ತಮ್ಮ ಕೊನೆಯ ಕಾದಂಬರಿ ‘Adam and Eve’ ಮೂಲಕ ವಿದಾಯ ಹೇಳಲು ಸಜ್ಜಾಗಿದ್ದರು. ಈ ವಾರ ನಡೆಯಲಿದ್ದ ಚೆಲ್ಟನ್ಹ್ಯಾಮ್ ಲಿಟರರಿ ಫೆಸ್ಟಿವಲ್ನಲ್ಲಿ ತಮ್ಮ ಕಾದಂಬರಿ ಕುರಿತು ಮಾತನಾಡಬೇಕಿದ್ದ ಅವರು, ಭಾನುವಾರ ಲಂಡನ್ನಲ್ಲಿ ಅಭಿಮಾನಿಗಳಿಗೆ ಪುಸ್ತಕಗಳಿಗೆ ಸಹಿ ಹಾಕಿದ್ದರು. ಆದರೆ ಮರುದಿನವೇ ಅವರ ನಿಧನದ ಸುದ್ದಿ ಸಾಹಿತ್ಯ ಲೋಕಕ್ಕೆ ಆಘಾತ ನೀಡಿದೆ.

30 ಕೋಟಿಗೂ ಹೆಚ್ಚು ಪುಸ್ತಕಗಳ ಮಾರಾಟ!

ಆರ್ಚರ್ ಅವರ ಕಾದಂಬರಿಗಳು ವಿಶ್ವಾದ್ಯಂತ 30 ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. 1975ರಲ್ಲಿ ಪ್ರಕಟವಾದ ‘Not A Penny More, Not A Penny Less’ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಅವರು, ನಂತರ ಒಂದರ ಹಿಂದೆ ಒಂದರಂತೆ ಬೆಸ್ಟ್ಸೆಲ್ಲರ್ ಕೃತಿಗಳನ್ನು ನೀಡಿದರು. ರಾಜಕೀಯ, ಹಣಕಾಸು, ಅಧಿಕಾರ, ಪ್ರೀತಿ ಮತ್ತು ಮಾನವ ಸಂಬಂಧಗಳನ್ನು ತಮ್ಮ ಕಥೆಗಳಲ್ಲಿ ಬೆರೆಸಿ ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅವರು ನಿಸ್ಸೀಮರಾಗಿದ್ದರು.

ಲೇಖಕನಷ್ಟೇ ಅಲ್ಲ, ರಾಜಕೀಯದಲ್ಲೂ ‘ಹೈ ಫ್ಲೈಯರ್’!

ಜೆಫ್ರಿ ಆರ್ಚರ್ ಅವರ ಬದುಕು ಅವರ ಕಾದಂಬರಿಗಳಿಗಿಂತಲೂ ರೋಚಕವಾಗಿತ್ತು. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕನ್ಸರ್ವೇಟಿವ್ ಪಕ್ಷ ಸೇರಿದ ಅವರು, 1969ರಲ್ಲಿ ಉಪಚುನಾವಣೆಯಲ್ಲಿ ಗೆದ್ದು ಕೇವಲ 29ನೇ ವಯಸ್ಸಿನಲ್ಲಿ ಸಂಸದರಾದರು. 1985ರಲ್ಲಿ ಮಾರ್ಗರೆಟ್ ಥ್ಯಾಚರ್ ಅವರ ಸರ್ಕಾರದಲ್ಲಿ ಕನ್ಸರ್ವೇಟಿವ್ ಪಕ್ಷದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಆದರೆ ರಾಜಕೀಯ ಯಶಸ್ಸಿನ ಬೆನ್ನಲ್ಲೇ ವಿವಾದಗಳೂ ಅವರನ್ನು ಬೆನ್ನಟ್ಟಿದವು. 1987ರಲ್ಲಿ ‘ಡೈಲಿ ಸ್ಟಾರ್’ ವಿರುದ್ಧದ ಮಾನನಷ್ಟ ಪ್ರಕರಣದಲ್ಲಿ ಸುಳ್ಳು ಅಲಿಬಿ ಸೃಷ್ಟಿಸಿದ ಆರೋಪ ಎದುರಿಸಿದ ಅವರು, ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದರು. 2001ರಲ್ಲಿ ಸುಳ್ಳು ಸಾಕ್ಷ್ಯ ನೀಡಿದ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸಿದ ಆರೋಪಗಳಲ್ಲಿ ದೋಷಿ ಎಂದು ತೀರ್ಪು ಬಂದಿದ್ದು, ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2003ರಲ್ಲಿ ಅವರಿಗೆ ಪೆರೋಲ್ ದೊರೆಯಿತು.

1999ರಲ್ಲಿ ಲಂಡನ್ನ ಮೊದಲ ಚುನಾಯಿತ ಮೇಯರ್ ಆಗುವ ಕನಸಿನೊಂದಿಗೆ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯಾಗಲು ಆರ್ಚರ್ ಮುಂದಾಗಿದ್ದರು. ಆದರೆ ವಿವಾದಗಳು ಅವರ ರಾಜಕೀಯ ಕನಸಿಗೆ ತಡೆಗೋಡೆಯಾದವು. ಅವರನ್ನು ಪಕ್ಷದಿಂದ ಹೊರಹಾಕಲಾಯಿತು. 1992ರಲ್ಲಿ ಹೌಸ್ ಆಫ್ ಲಾರ್ಡ್ಸ್ ಸದಸ್ಯತ್ವಕ್ಕೆ ಶಿಫಾರಸು ಮಾಡಲಾಗಿದ್ದ ಆರ್ಚರ್, 2024ರಲ್ಲಿ ಅಲ್ಲಿಂದ ನಿವೃತ್ತರಾದರು.

2014ರಲ್ಲಿ ತಮಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಅವರು ಬಹಿರಂಗಪಡಿಸಿದ್ದರು. ಜೀವನದ ಹಲವು ಏಳುಬೀಳುಗಳ ನಡುವೆಯೂ ಪತ್ನಿ ಮೇರಿ ಆರ್ಚರ್ ಅವರಿಗೆ ಬೆಂಬಲವಾಗಿ ನಿಂತಿದ್ದರು.

ರಾಜಕೀಯ, ವಿವಾದ, ಜೈಲು, ವೈಯಕ್ತಿಕ ಸಂಕಷ್ಟ—ಇವೆಲ್ಲವನ್ನೂ ಎದುರಿಸಿದ ಜೆಫ್ರಿ ಆರ್ಚರ್, ಪ್ರತಿಬಾರಿಯೂ ಹೊಸ ಕಥೆಯೊಂದಿಗೆ ಮರಳಿದ್ದರು. ಅವರ ಬದುಕೇ ಒಂದು ಕಾದಂಬರಿಯಂತಿತ್ತು. ಇದೀಗ ಅವರು ನಮ್ಮೊಂದಿಗಿಲ್ಲದಿದ್ದರೂ, ಕೋಟ್ಯಂತರ ಓದುಗರ ಕೈಯಲ್ಲಿರುವ ಅವರ ಪುಸ್ತಕಗಳ ಮೂಲಕ ಜೆಫ್ರಿ ಆರ್ಚರ್ ಅವರ ಕಥೆಗಳು ಇನ್ನೂ ಹಲವು ತಲೆಮಾರುಗಳವರೆಗೆ ಜೀವಂತವಾಗಿರಲಿವೆ.