ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಪ್ರದೇಶದಲ್ಲಿ ನಡೆದಿದ್ದ ರಾಸಾಯನಿಕ ಪ್ರಯೋಗಕ್ಕೆ ಸಂಬಂಧಿಸಿದಂತೆ ಪ್ರತಾಪ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಹೈಕೋರ್ಟ್ ಅವರ ವಿರುದ್ಧದ ಎಫ್ಐಆರ್ ರದ್ದುಪಡಿಸಿದೆ.
ಏನಿದು ಪ್ರಕರಣ?
ನೀರಿನೊಂದಿಗೆ ಸೋಡಿಯಂ ರಾಸಾಯನಿಕವಾಗಿ ಪ್ರತಿಕ್ರಿಯಿಸುವ ಪ್ರಯೋಗದ ವಿಡಿಯೋವನ್ನು ಡ್ರೋನ್ ಪ್ರತಾಪ್ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಹಂಚಿಕೊಂಡಿದ್ದರು. ಇದನ್ನು ಅವರು ವಿಜ್ಞಾನದ ಪ್ರಯೋಗ ಎಂದು ಹೇಳಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ, ಸ್ಥಳೀಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದರು. 2024ರ ಡಿಸೆಂಬರ್ 12ರಂದು ಪ್ರಕರಣ ದಾಖಲಿಸಿ ಪ್ರತಾಪ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಪೊಲೀಸರು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 288ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಎಫ್ಐಆರ್ ರದ್ದುಗೊಳಿಸಿದೆ ಎಂದು ವರದಿಯಾಗಿದೆ. ಪ್ರಯೋಗ ನಡೆಸಿದ ವಿಧಾನವನ್ನು ನ್ಯಾಯಾಲಯ ಸಮರ್ಥಿಸುವುದಿಲ್ಲವಾದರೂ, ಪ್ರಕರಣದಲ್ಲಿ ನಡೆಸಲಾದ ಚಟುವಟಿಕೆ ಶೈಕ್ಷಣಿಕ ಉದ್ದೇಶವನ್ನು ಹೊಂದಿತ್ತು ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲಾಗಿದೆ.
ಕಣ್ಣೀರಿಟ್ಟ ಡ್ರೋನ್ ಪ್ರತಾಪ್
ಹೈಕೋರ್ಟ್ ತೀರ್ಪಿನ ಬಳಿಕ ಪ್ರತಿಕ್ರಿಯಿಸಿರುವ ಡ್ರೋನ್ ಪ್ರತಾಪ್, ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಗಳು ರದ್ದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. “ಖುಷಿಗೆ ಕಣ್ಣೀರು ಹಾಕ್ತಿದ್ದೀನಿ. ಇವತ್ತು ಕೋರ್ಟ್ನಿಂದ ಎಲ್ಲಾ ಪ್ರಕರಣಗಳ ರದ್ದು ಮಾಡಿ ನಿರಪರಾಧಿ ಅಂತ ನಾನು ನಿಂತಿದ್ದೀನಿ. ನನಗೆ ಸಹಾಯ ಮಾಡಿದ ವಕೀಲ ಸಾಗರ್ ಹಾಗೂ ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸಲೇಬೇಕು” ಎಂದು ಅವರು ಹೇಳಿದ್ದಾರೆ.
ತಮ್ಮ ಜೀವನದ ಅಮೂಲ್ಯ ಸಮಯ ಪ್ರಕರಣಗಳಿಂದಾಗಿ ವ್ಯರ್ಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ತಮ್ಮ ವಿರುದ್ಧ ಈ ಹಿಂದೆ ಹಲವು ಆರೋಪಗಳು ಕೇಳಿಬಂದಿದ್ದವು ಎಂದು ಹೇಳಿದ್ದಾರೆ.“ಇವತ್ತು ನನ್ನ ಮೇಲಿದ್ದಂತ ಎಲ್ಲಾ ಪ್ರಕರಣಗಳನ್ನ ಹೈಕೋರ್ಟ್ ರದ್ದು ಮಾಡಿದೆ. ನನ್ನ ಜೀವನದ ಕೆಲವು ಟೈಮ್ನ್ನ ವೇಸ್ಟ್ ಮಾಡಿಬಿಟ್ರಿ. ಕ್ಷಣಗಳನ್ನ ನೀವು ಎಲ್ಲಾ ಸೇರಿಕೊಂಡು ತೆಗೆದುಕೊಂಡಿದ್ದೀರಿ. ಕಡೆಗೂ ಮೇಲೆ ಒಬ್ಬ ಇದ್ದಾನೆ ಅನ್ನೋದು ಸತ್ಯ ಆಯ್ತು” ಎಂದು ಡ್ರೋನ್ ಪ್ರತಾಪ್ ಭಾವುಕರಾಗಿ ಹೇಳಿದ್ದಾರೆ. ನ್ಯಾಯಾಲಯದ ತೀರ್ಪಿಗೆ ಗೌರವ ಸಲ್ಲಿಸಿದ ಅವರು, “ಇದು ಸತ್ಯಕ್ಕೆ ಸಿಕ್ಕಂತ ಜಯ” ಎಂದು ಪ್ರತಿಕ್ರಿಯಿಸಿದ್ದಾರೆ.
ಹೈಕೋರ್ಟ್ ಎಫ್ಐಆರ್ ರದ್ದುಗೊಳಿಸಿರುವುದು ಪ್ರಕರಣದ ಕಾನೂನು ಸ್ಥಿತಿಗೆ ಸಂಬಂಧಿಸಿದ ತೀರ್ಪಾಗಿದೆ. ಪ್ರಯೋಗ ನಡೆಸಿದ ವಿಧಾನವನ್ನು ನ್ಯಾಯಾಲಯ ಸಮರ್ಥಿಸಿಲ್ಲ ಎಂಬ ಅಂಶವೂ ವರದಿಗಳಲ್ಲಿ ಉಲ್ಲೇಖವಾಗಿದೆ. ಆದ್ದರಿಂದ ಅಪಾಯಕಾರಿ ರಾಸಾಯನಿಕ ಪ್ರಯೋಗಗಳನ್ನು ಸಾರ್ವಜನಿಕವಾಗಿ ಅನುಕರಿಸುವುದು ಸೂಕ್ತವಲ್ಲ ಎಂಬ ಸಂದೇಶವನ್ನು ಈ ಪ್ರಕರಣ ಮತ್ತೊಮ್ಮೆ ಮುಂದಿಟ್ಟಿದೆ.




