ಅರಬ್ಬಿ ಸಮುದ್ರದಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿರೋಧಕ ದಳ ಸೇರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಮಾದಕವಸ್ತು ಸಿಕ್ಕಿಬಿದ್ದಿದೆ. ಸುಮಾರು 3,000 ಕೋಟಿ ರೂಪಾಯಿ ಬೆಲೆಬಾಳುವ 526 ಕೆಜಿ ತೂಕದ ಹೈ-ಗ್ರೇಡ್ ಹೆರಾಯಿನ್ ಹಾಗೂ ಮೆಥಾಂಫೆಟಮೈನ್ ಎಂಬ ಅಪಾಯಕಾರಿ ಡ್ರ*ಗ್ಸ್ ಅನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಗುಜರಾತ್ ಎಟಿಎಸ್ ನೀಡಿದ ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸೆಪ್ಟೆಂಬರ್ 25 ರಂದು ಈ ರಹಸ್ಯ ಕಾರ್ಯಾಚರಣೆಯನ್ನು ತಡರಾತ್ರಿ ನಡೆಸಲಾಗಿತ್ತು. ಲಕ್ಷದ್ವೀಪದ ಪಶ್ಚಿಮ ಭಾಗದ ಅರಬ್ಬಿ ಸಮುದ್ರದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇರಾನ್ ದೇಶಕ್ಕೆ ಸೇರಿದ ದೋಣಿಯೊಂದನ್ನು ಕರಾವಳಿ ರಕ್ಷಣಾ ಪಡೆಯು ಅತ್ಯಾಧುನಿಕ ವಿಮಾನ ಮತ್ತು ನೌಕೆಗಳ ಕಣ್ಗಾವಲಿನ ಮೂಲಕ ಪತ್ತೆ ಹಚ್ಚಿದೆ. ಕರಾವಳಿ ಪಡೆ ಬೆನ್ನಟ್ಟಿದಾಗ ದೋಣಿಯನ್ನು ತಡೆದು ತಪಾಸಣೆ ನಡೆಸಲಾಗಿದೆ.

ಅಷ್ಟಕ್ಕೂ ಆ ದೋಣಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಭದ್ರತಾ ಪಡೆಗಳೇ ಆಶ್ಚರ್ಯಚಕಿತರಾಗಿದ್ದಾರೆ. ಅದರಲ್ಲಿ ಮೂಟೆಗಳಲ್ಲಿ ಬಂಧಿಸಿಡಲಾಗಿದ್ದ 526 ಕೆಜಿಯಷ್ಟು ಮಾರಕ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ಡ್ರ*ಗ್ಸ್ ಪತ್ತೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ದೋಣಿಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ಭದ್ರತಾ ಪಡೆಗಳು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಇರಾನ್ ದೋಣಿ, ಭಾರಿ ಪ್ರಮಾಣದ ಮಾದಕವಸ್ತು ಹಾಗೂ ಬಂಧಿತ ಐವರು ಆರೋಪಿಗಳನ್ನು ಬಿಗಿ ಸಶಸ್ತ್ರ ಭದ್ರತೆಯೊಂದಿಗೆ ಮುಂಬೈ ಬಂದರಿಗೆ ಕರೆತರಲಾಗಿದೆ.

ಈ ದೊಡ್ಡ ಮಟ್ಟದ ಜಪ್ತಿಯಿಂದಾಗಿ ಅಂತರರಾಷ್ಟ್ರೀಯ ಮಾದಕವಸ್ತು ಜಾಲಕ್ಕೆ ಭಾರತೀಯ ಭದ್ರತಾ ಸಂಸ್ಥೆಗಳು ಭಾರಿ ಹೊಡೆತ ನೀಡಿವೆ. ಮುಂಬೈನಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಈ ಜಾಲದ ಹಿಂದೆ ಇನ್ಯಾರೆಲ್ಲಾ ಹಸ್ತವಿದೆ ಎಂಬ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.