2026ರ ಏಷ್ಯನ್ ಗೇಮ್ಸ್‌ನ ಕ್ರೀಡಾಕೂಟ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದೀಗ ನಮ್ಮ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಅಥ್ಲೀಟ್‌ಗಳಿಗೆ ಬಿಗ್ ಸಪ್ರೈಸ್ ಸಿಕ್ಕಿದೆ. ರಾಜ್ಯ ಸರ್ಕಾರವು ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುವ ನಗದು ಬಹುಮಾನದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿ ಆದೇಶ ಹೊರಡಿಸಿದೆ.

ಹಿರಿಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರು ಹರಿಯಾಣದಂತಹ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನೀಡಲಾಗುತ್ತಿದ್ದ ಬಹುಮಾನ ಮೊತ್ತ 35 ಲಕ್ಷ ತೀರಾ ಕಡಿಮೆ ಎಂದು ಧ್ವನಿ ಎತ್ತಿದ ಬೆನ್ನಲ್ಲೇ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಹೆಚ್ಚಿಸಲಾದ ಹೊಸ ಬಹುಮಾನದ ಮೊತ್ತದ ವಿವರ ಇಲ್ಲಿದೆ

ಚಿನ್ನದ ಪದಕ: 35 ಲಕ್ಷದಿಂದ ನೇರವಾಗಿ 1 ಕೋಟಿಗೆ ಏರಿಕೆ

ಬೆಳ್ಳಿ ಪದಕ: 25 ಲಕ್ಷದಿಂದ 75 ಲಕ್ಷಕ್ಕೆ ಏರಿಕೆ

ಕಂಚಿನ ಪದಕ: 15 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ

ಪ್ರೋತ್ಸಾಹಧನ: ಕೂಟದಲ್ಲಿ ಭಾಗವಹಿಸಿದ ರಾಜ್ಯದ ಎಲ್ಲಾ 20 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ಸಿಗಲಿದೆ.

ಒಟ್ಟಾರೆಯಾಗಿ ರಾಜ್ಯದ 8 ಪದಕ ವಿಜೇತರಿಗಾಗಿ ಸರ್ಕಾರ 8.00 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಎಂ.ಆರ್. ಪೂವಮ್ಮ (ಅಥ್ಲೆಟಿಕ್ಸ್): ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನ ಮತ್ತು ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದು ಒಟ್ಟು 1.75 ಕೋಟಿ ಪಡೆದಿದ್ದಾರೆ.

ಪ್ರಣವಿ ಎಸ್. ಅರಸ್ (ಗಾಲ್ಫ್): ವೈಯಕ್ತಿಕ ವಿಭಾಗದಲ್ಲಿ ಚಿನ್ನ ಹಾಗೂ ಮಹಿಳಾ ತಂಡದ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡು ಒಟ್ಟು 1.75 ಕೋಟಿ ಗಳಿಸಿದ್ದಾರೆ.

ಶ್ರೇಯಾಂಕಾ ಪಾಟೀಲ್ (ಕ್ರಿಕೆಟ್): ಮಹಿಳಾ ಕ್ರಿಕೆಟ್ ತಂಡದಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ₹1 ಕೋಟಿ ಪಡೆಯಲಿದ್ದಾರೆ.

ಮೋಹಿತ್ ಹೆಚ್.ಎಸ್. (ಹಾಕಿ): ಪುರುಷರ ಹಾಕಿ ತಂಡದಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ 1 ಕೋಟಿ ಪಡೆಯಲಿದ್ದಾರೆ.

ತಿಲೋತ್ತಮ ಸೇನ್ (ಶೂಟಿಂಗ್): 50 ಮೀಟರ್ ರೈಫಲ್ ತಂಡದ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ 75 ಲಕ್ಷ ಪಡೆಯಲಿದ್ದಾರೆ.

ಆಯುಷ್ ಶೆಟ್ಟಿ (ಬ್ಯಾಡ್ಮಿಂಟನ್) ಮತ್ತು ಸ್ನೇಹಾ ಎಸ್.ಎಸ್. (ಅಥ್ಲೆಟಿಕ್ಸ್): ಕಂಚಿನ ಪದಕ ವಿಜೇತರಾದ ಇವರಿಗೆ ತಲಾ 50 ಲಕ್ಷ ಲಭಿಸಲಿದೆ.

ಕೇವಲ ನಗದು ಬಹುಮಾನ ಮಾತ್ರವಲ್ಲದೆ, ಪದಕ ವಿಜೇತರನ್ನು ನೇರವಾಗಿ ಗ್ರೂಪ್-ಬಿ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಜೊತೆಗೆ ಸರ್ಕಾರಿ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ ಶೇ. 2 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಒಲಿಂಪಿಕ್ಸ್ ತರಬೇತಿಯ ತಯಾರಿಗಾಗಿ ಗುರು ಒಲಿಂಪಿಕ್ಸ್ ಯೋಜನೆಯಡಿ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್, ಶ್ರೇಯಾಂಕಾ ಪಾಟೀಲ್ ಮತ್ತು ಕಾಮನ್‌ವೆಲ್ತ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರಿಗೆ ತಲಾ 10 ಲಕ್ಷ ಮುಂಗಡ ಧನಸಹಾಯ ನೀಡಲಾಗುತ್ತಿದೆ.