ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ದಿಢೀರನೆ ಭಾರೀ ಸದ್ದು ಕೇಳಿಬಂದಿದ್ದು, ಬೆಟ್ಟದ ಮೇಲ್ಭಾಗದಲ್ಲಿದ್ದ ಬೃಹತ್ ಬಂಡೆಗಳು ಮುರಿದು ಕೆಳಕ್ಕೆ ಉರುಳಿಬಿದ್ದಿವೆ. ಬಂಡೆಗಳು ಒಂದಕ್ಕೊಂದು ಅಪ್ಪಳಿಸುತ್ತಾ ಬೆಟ್ಟದ ಇಳಿಜಾರಿನಲ್ಲಿ ಕೆಳಕ್ಕೆ ಧಾವಿಸಿದ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ. ಘಟನೆಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಸದ್ದಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಫೋಟ, ಕಲ್ಲು ಗಣಿಗಾರಿಕೆ ಅಥವಾ ನೈಸರ್ಗಿಕ ಕಾರಣಗಳಿಂದ ಬಂಡೆಗಳು ಕುಸಿದಿವೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಆದರೆ, ಸ್ಫೋಟ ಸಂಭವಿಸಲು ಈ ಹಿಂದೆ ಪ್ರಸ್ತಾಪಿಸಿದ್ದ ರೋಪ್ವೇ ಯೋಜನೆಯ ಅನಧಿಕೃತ ಚಟುವಟಿಕೆಗಳು ನಡೆಯುತ್ತಿವೆಯಾ? ಇದೇ ಕಾರಣದಿಂದಲೇ ಬೆಟ್ಟದಲ್ಲಿ ಸ್ಫೋಟವಾಗಿರಬಹುದೇ ಎಂಬ ಅನುಮಾನದ ಹೊಗೆಯಾಡುತ್ತಿದೆ.
ರೋಪ್ವೇ ಯೋಜನೆಯ ಸುತ್ತ ಅನುಮಾನದ ಹುತ್ತ
ನಂದಿಗಿರಿಧಾಮಕ್ಕೆ ಪ್ರವಾಸಿಗರು ಸುಲಭವಾಗಿ ತಲುಪಲು ಹಾಗೂ ರಸ್ತೆ ಸಂಚಾರದ ಮೇಲಿನ ಒತ್ತಡ ಕಡಿಮೆ ಮಾಡಲು ಪ್ರವಾಸೋದ್ಯಮ ಇಲಾಖೆ ₹93.40 ಕೋಟಿ ವೆಚ್ಚದ ರೋಪ್ವೇ ಯೋಜನೆಯನ್ನು ಪ್ರಸ್ತಾಪಿಸಿತ್ತು. ಆದರೆ, ಅರಣ್ಯ ಭೂಮಿಯ ಬಳಕೆಯಲ್ಲಿ ನಿಯಮ ಉಲ್ಲಂಘನೆಗಳು ನಡೆದಿರುವ ಹಿನ್ನೆಲೆಯಲ್ಲಿ ಯೋಜನೆಯ ಅನುಮೋದನೆ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ತಜ್ಞರ ಸಮಿತಿಯು ನಂದಿ ಗ್ರಾಮದ ಸರ್ವೆ ನಂಬರ್ 1ರಲ್ಲಿರುವ 4.8 ಎಕರೆ ಅರಣ್ಯ ಭೂಮಿಯಲ್ಲಿ ನಡೆದ ಕಾಮಗಾರಿಗಳಿಗೆ ನಂತರದ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಮುಂದೂಡಿತ್ತು. ಅಲ್ಲದೆ, ಅನುಮತಿಯಿಲ್ಲದೆ ಕಾಮಗಾರಿಗಳಿಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆಯೂ ಸೂಚಿಸಿದೆ.
ಯೋಜನೆಯ ಪರಿಶೀಲನೆ ವೇಳೆ ಸುಮಾರು 3.2 ಎಕರೆ ಪ್ರದೇಶದಲ್ಲಿ ಮೊದಲೇ ನಿಯಮ ಉಲ್ಲಂಘನೆಗಳು ನಡೆದಿದ್ದವು ಎಂಬುದನ್ನು ಸಮಿತಿ ಗಮನಿಸಿದೆ. ಕೆಲವು ಉಲ್ಲಂಘನೆಗಳು 1986ರಷ್ಟು ಹಿಂದಿನವು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆದರೆ, ಅರಣ್ಯ ಸಲಹಾ ಸಮಿತಿಯು ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಹೊಣೆಗಾರಿಕೆಯನ್ನು ಪ್ರಸ್ತಾಪಿಸಿದ್ದು, ಈ ಸಂಬಂಧ ಕ್ರಮ ಕೈಗೊಂಡಿಲ್ಲ ಎಂದು ಉಲ್ಲೇಖಿಸಿದೆ.
ಯೋಜನೆಗಾಗಿ ಕಡಿಯಲು ಉದ್ದೇಶಿಸಿರುವ ಮರಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವಂತೆಯೂ ಸೂಚಿಸಲಾಗಿದೆ. ಪರಿಹಾರಾರ್ಥ ಅರಣ್ಯೀಕರಣಕ್ಕಾಗಿ ಗುರುತಿಸಿರುವ ಭೂಮಿ ಸೂಕ್ತವಲ್ಲದ ಕಾರಣ ಪರ್ಯಾಯ ಭೂಮಿಯನ್ನು ಗುರುತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
ಹೈಕೋರ್ಟ್ ವಿಚಾರಣೆ ಅ.21ಕ್ಕೆ ಮುಂದೂಡಿಕೆ
ಇನ್ನು ನಂದಿಗಿರಿಧಾಮದ ರೋಪ್ವೇ ಯೋಜನೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿದೆ. ಸದ್ಯ ಬ್ರಹ್ಮಗಿರಿ ಬೆಟ್ಟದ ಬಂಡೆ ಕುಸಿತ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸೂಕ್ತ ತನಿಖೆ ನಡೆಸಿ, ಏಕಾಏಕಿ ಬಂಡೆ ಸ್ಫೋಟಗೊಳ್ಳಲು ಕಾರಣವೇನು ಎಂಬ ಕಾರಣವನ್ನು ತಿಳಿಯಬೇಕಿದೆ. ಮತ್ತೊಂದೆಡೆ, ರೋಪ್ವೇ ಯೋಜನೆ ಸಂಬಂಧ ನಿಯಮ ಉಲ್ಲಂಘನೆಗಳ ಕುರಿತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.
ನಂದಿಗಿರಿಧಾಮಕ್ಕೆ ವಾರದ ದಿನಗಳಲ್ಲಿ ಸುಮಾರು 5,500 ಹಾಗೂ ವಾರಾಂತ್ಯದಲ್ಲಿ 18,000ದವರೆಗೆ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂಬುದು ಪ್ರವಾಸೋದ್ಯಮ ಇಲಾಖೆಯ ಅಂದಾಜು. ಹೀಗಾಗಿ ಪರಿಸರ ಸಂರಕ್ಷಣೆ, ಪ್ರವಾಸಿಗರ ಸುರಕ್ಷತೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮಹತ್ವದ್ದಾಗಿದೆ. ಬೆಟ್ಟದಲ್ಲಿನ ಸ್ಫೋಟದ ಘಟನೆಗೂ ರೋಪ್ವೇ ಯೋಜನೆಯ ನಡುವೆಯೂ ನೇರ ಸಂಬಂಧವಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಅಧಿಕೃತ ತನಿಖೆ ಮತ್ತು ಮುಂದಿನ ನ್ಯಾಯಾಲಯದ ವಿಚಾರಣೆಯ ಬಳಿಕವೇ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.




