ಮತ್ತೊಮ್ಮೆ ಶಿವರಾಜ್‌ಕುಮಾರ್ ತಮ್ಮ ಅಭಿನಯದ ರುಚಿಯನ್ನು ತೋರಿ, ತಮ್ಮ ಅಭಿಮಾನದ ಗಡಿಯನ್ನು ವಿಸ್ತರಿಸಿದ್ದಾರೆ. ವಿಶೇಷ ಪಾತ್ರದಲ್ಲೇ ಕಾಣಿಸಿಕೊಂಡಿದ್ದರೂ ಶಿವರಾಜ್‌ ಕುಮಾರ್ ತಮ್ಮ ಮಾಸ್‌ ಅಭಿನಯದಿಂದ ರಜನೀ ಅವರಿಗೆ ಸರಿಸಾಟಿಯಾಗಿ ಮೆಚ್ಚುಗೆ ಗಳಿಸುತ್ತಿದ್ದಾರೆ. 

2023ರಲ್ಲಿ 'ಜೈಲರ್' ಚಿತ್ರದ ಮೊದಲ ಭಾಗದಲ್ಲಿ ರಜನೀಕಾಂತ್ ಅವರೊಂದಿಗೆ ನರಸಿಂಹ ಪಾತ್ರದಲ್ಲಿ ನಟಿಸಿದ್ದ ಶಿವರಾಜ್‌ಕುಮಾರ್‍‌ ತಮ್ಮ ಅಪ್ಪಟ ಗ್ಯಾಂಗ್‌ ಸ್ಟಾರ್‍‌ ಅಭಿನಯದ ಛಾಪು ಒತ್ತಿದ್ದರು. 

ರಜನೀ ಕುಟುಂಬವನ್ನು ರಕ್ಷಿಸಲು ತನ್ನ ಕಟ್ಟಾಳುಗಳನ್ನು ಕಳಿಸುವ, ಸ್ವತಃ ರಕ್ಷಣೆಗೆ ಬರುವ ಆಕ್ಷನ್ ದೃಶ್ಯಗಳಲ್ಲಿ ಶಿವರಾಜ್‌ ಕುಮಾರ್ ಎಂದಿನಂತೆ ಅಬ್ಬರಿಸಿದ್ದರು. 

ಭೈರತಿ ರಣಗಲ್‌ ನಂತರ ಕಪ್ಪು ಅಂಗಿ, ಕಪ್ಪು ಲುಂಗಿ ಕಾಸ್ಟ್ಯೂಮ್ ಹೊಸದೊಂದು ಲುಕ್‌ ಕಾಪಾಡಿಕೊಂಡ ಶಿವಣ್ಣ, ತಮಿಳು ನಾಡಿನಲ್ಲೂ ತಮ್ಮ ಅಭಿಮಾನಿಗಳ ಬಳಗವನ್ನು ಸಂಪಾದಿಸಿಕೊಂಡಿದ್ದರು. 

ಈಗ ಜೈಲರ್ 2 ಮೂಲಕ ತಮ್ಮ ಅಭಿನಯ ಹವಾ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು, ತಮ್ಮ ಐಕಾನಿಕ್‌ ಅವತಾರವಾದ ಲಾಂಗ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. 


ಇತ್ತೀಚೆಗೆ ತಾನೆ ಪವನ್ ಒಡೆಯರ್ ನಿರ್ದೇಶನದ 'ಬೇಲ್' ಚಿತ್ರದ ಯಶಸ್ಸಿನ ಗುಂಗಿನಲ್ಲಿದ್ದ ಶಿವರಾಜ್ ಕುಮಾರ್ ಅವರಿಗೆ ಜೈಲರ್ 2 ಮೂಲಕ ದಕ್ಷಿಣ ಭಾರತದಾದ್ಯಂತ ಅಭಿಮಾನಿಗಳ ಮೆಚ್ಚುಗೆ ಸಿಗುತ್ತಿದೆ. 

ಬಹುತಾರಾಗಣ ಇರುವ ಈ ಚಿತ್ರದಲ್ಲಿ ಜೈಲರ್ ಒಂದರಲ್ಲಿ ಇದ್ದಂತೆ ಶಿವರಾಜ್ ಕುಮಾರ್ ಅವರೊಂದಿಗೆ ಮೋಹನ್‌ಲಾಲ್, ಜಾಕಿ ಶ್ರಾಫ್‌ ಕೂಡ ಇದ್ದಾರೆ. ಇವರ ಜೊತೆಗೆ ವಿದ್ಯಾಬಾಲನ್, ಮಿಥುನ್ ಚಕ್ರವರ್ತಿ, ಕಡೆಯ ದೃಶ್ಯದಲ್ಲಿ ವಿಜಯ್‌ ಸೇತುಪತಿ ಕೂಡ ಕಾಣಿಸಿಕೊಂಡಿದ್ದಾರೆ. 

ವಿಶೇಷ ಪಾತ್ರದಲ್ಲಿ ಹೃತಿಕ್ ರೋಷನ್ ಕೂಡ ಕಾಣಿಸಿಕೊಂಡಿದ್ದಾರೆ. 1982ರಲ್ಲಿ ಭಗವಾನ್‌ ದಾದಾ ಚಿತ್ರದಲ್ಲಿ ರಜನೀಕಾಂತ್ ಅವರೊಂದಿಗೆ ನಟಿಸಿದ್ದ ಹೃತಿಕ್ ಮತ್ತೆ ಈ ಚಿತ್ರದ ಮೂಲಕ ಜೊತೆಯಾಗಿ ಕಾಣಿಸಿಕೊಂಡಿದ್ದು ವಿಶೇಷ ಎನ್ನಲಾಗುತ್ತಿದೆ. 

ಈ ಎಲ್ಲ ಪಾತ್ರಧಾರಿಗಳ ನಡುವೆ ಶಿವಣ್ಣ ತಮ್ಮ ವಿಶೇಷ ಮ್ಯಾನರಿಸಂ, ಲುಕ್‌ನಿಂದಾಗಿ ಆಕರ್ಷಿಸಿದ್ದಾರೆ. ಜೈಲರ್ 2 ಚಿತ್ರದ ಅಭಿನಯಕ್ಕೆ ಅಭಿಮಾನಿಗಳು, ಪ್ರೇಕ್ಷಕರು ಚಿತ್ರ ಪರದೆಗಳ ಮುಂದೆ ಕುಣಿದು ಆನಂದಿಸಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಜೈಲರ್‍‌-2ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೊದಲ ದಿನವೇ 60 ಕೋಟಿ ಸಂಪಾದಿಸಿದ್ದು, ದಸರಾ ರಜೆಯ ಹಿನ್ನೆಲೆಯಲ್ಲಿ ಮತ್ತಷ್ಟು ಗಳಿಕೆಯಾಗುವ ನಿರೀಕ್ಷೆಯಿದೆ.