ಅಕ್ಟೋಬರ್ 1 ರಂದು ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಸಾರ್ವಜನಿಕ ಸೇವಾ ಆಯೋಗದ 100ನೇ ವರ್ಷದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳೀಗ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ. 1920ರಲ್ಲಿ ದೇಶದ ಮಹಾನ್ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತಮ್ಮ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು 'ಸಂಸ್ಕೃತ' ಭಾಷೆಯಲ್ಲಿ ಬರೆದಿದ್ದರು ಎಂದು ಪ್ರಧಾನಿ ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

  Netaji Subhas Chandra Bose knew- Sanskrit, Bengali, Hindi, German, English, Urdu, & Hindustani. He was a linguist- but he took his 'INDIAN CIVIL SERVICE' examination in English as that was the language used for this examination. I wonder who has given such wrong information to… https://t.co/9XzA6dR77F
ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದ ಕೆಲವೇ ಹೊತ್ತಿನಲ್ಲಿ ನೇತಾಜಿಯವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಸೋಶಿಯಲ್ ಮೀಡಿಯಾದಲ್ಲಿ ಸತ್ಯಾಂಶವನ್ನು ತೆರೆದಿಟ್ಟಿದ್ದಾರೆ. ನೇತಾಜಿ ಅವರಿಗೆ ಸಂಸ್ಕೃತ, ಬಂಗಾಳಿ, ಜರ್ಮನ್, ಇಂಗ್ಲಿಷ್ ಸೇರಿ ಹಲವು ಭಾಷೆಗಳು ಗೊತ್ತಿದ್ದವು ನಿಜ. ಆದರೆ, 1920ರಲ್ಲಿ ಲಂಡನ್‌ನಲ್ಲಿ ನಡೆದ 'ಇಂಡಿಯನ್ ಸಿವಿಲ್ ಸರ್ವಿಸ್' (ICS) ಪರೀಕ್ಷೆಯು ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿಯೇ ನಡೆದಿತ್ತು. ಬೋಸ್ ಅವರು ತಮ್ಮ ಮುಖ್ಯ ವಿಷಯಗಳಾದ ತತ್ವಶಾಸ್ತ್ರ, ಪ್ರಬಂಧ ಮತ್ತು ಇತಿಹಾಸವನ್ನು ಇಂಗ್ಲಿಷ್‌ನಲ್ಲೇ ಬರೆದಿದ್ದರು. ಸಂಸ್ಕೃತವು ಕೇವಲ ಅವರ ಒಂದು ಆಪ್ಷನಲ್ ವಿಷಯವಾಗಿತ್ತು ಅಷ್ಟೇ ಎಂದು ಬರೆದಿದ್ದಾರೆ. ಇದನ್ನು ಪ್ರಸ್ತಾಪಿಸಿದ ಅವರು "ಪ್ರಧಾನಮಂತ್ರಿಯವರಿಗೆ ಇಂತಹ ತಪ್ಪು ಮಾಹಿತಿಯನ್ನು ಯಾರು ನೀಡಿದ್ದಾರೋ ಆಶ್ಚರ್ಯವಾಗುತ್ತಿದೆ, ಇತಿಹಾಸದ ಇಂತಹ ತಿರುಚುವಿಕೆಗಳನ್ನು ತಪ್ಪಿಸಬೇಕು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ICS ಹೊರತು UPSC ಅಲ್ಲ: ಬೋಸ್ ಅವರು ಪರೀಕ್ಷೆ ಬರೆದದ್ದು ಬ್ರಿಟಿಷರ ಕಾಲದ ICS. ಭಾರತದಲ್ಲಿ ಮೊದಲು ಸಾರ್ವಜನಿಕ ಸೇವಾ ಆಯೋಗ ಬಂದಿದ್ದೇ 1926ರಲ್ಲಿ, ಅದು ಕೂಡ ಇದರ 100 ನೇ ವರ್ಷದ ಅಂಗವಾಗಿಯೇ ಈ ಕಾರ್ಯಕ್ರಮ ನಡೆದಿತ್ತು. ಸ್ವತಂತ್ರ ಭಾರತದಲ್ಲಿ 1950ರಲ್ಲಿ ಇದು 'UPSC' ಎಂದು ಹೆಸರಾಯಿತು. 1945ರಲ್ಲೇ ಸುಭಾಷ್ ಚಂದ್ರ ಬೋಸ್ ಅವರು ನಿಧನರಾಗಿದ್ದರು, 1950ರಲ್ಲಿ ಬಂದ ಸಂಸ್ಥೆಯಲ್ಲಿ ಪರೀಕ್ಷೆ ಬರೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.

ದೇಶದ ಪ್ರಧಾನಿ ಸ್ಥಾನದಲ್ಲಿರುವವರು ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವಾಗ ಭಾಷಣ ಬರೆಯುವವರು ಕನಿಷ್ಠ ಸತ್ಯಾಸತ್ಯತೆ ಪರೀಕ್ಷಿಸಬೇಕಿತ್ತು. ಇತಿಹಾಸವನ್ನು ಈ ರೀತಿ ತಿರುಚುವುದು ಸೂಕ್ತವಲ್ಲ ಎಂದು ಜನರು ಕಿಡಿಕಾರುತ್ತಿದ್ದಾರೆ.

ಅಷ್ಟೇ ಅಲ್ಲದೇ ರಾಷ್ಟ್ರನಾಯಕರ ಇತಿಹಾಸವನ್ನು ಸರಿಯಾಗಿ ಓದಿ ಮಾತನಾಡಬೇಕು, ವಾಟ್ಸಾಪ್ ಸುದ್ದಿಗಳನ್ನೇ ಸತ್ಯ ಎಂದು ನಂಬಿ ಹೇಳಿಕೆ ನೀಡಬಾರದು ಎಂದು ನೆಟ್ಟಿಗರು ಹಾಗೂ ಇತಿಹಾಸ ಪ್ರೇಮಿಗಳು ಪ್ರಧಾನಿಯ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.