ನಾರ್ವೆ ನೊಬೆಲ್ ಸಮಿತಿಯು 287 ನಾಮನಿರ್ದೇಶನಗಳಿಂದ 208 ವ್ಯಕ್ತಿಗಳು ಮತ್ತು 79 ಸಂಸ್ಥೆಗಳು ಅಂತಿಮವಾಗಿ ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ಹೋರಾಟಗಾರ್ತಿ ನವನೇತಮ್ ನವಿ ಪಿಳ್ಳೈ ಅವರನ್ನು ಆಯ್ಕೆ ಮಾಡಲಾಗಿದೆ.
ಯಾರು ಈ ನವನೇತಮ್ ನವಿ ಪಿಳ್ಳೈ.?
ನವನೇತಮ್ ಪಿಳ್ಳ ಮೂಲತಃ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ತಮಿಳು ಮೂಲದ ಭಾರತೀಯ ಕುಟುಂಬದಲ್ಲಿ ಜನಿಸಿದರು. 1890ರ ದಶಕದಲ್ಲಿ ಬ್ರಿಟಿಷರ ಆಡಳಿತಾವಧಿಯಲ್ಲಿ ಕಬ್ಬಿನ ತೋಟಗಳಲ್ಲಿ ಗುತ್ತಿಗೆ ಕಾರ್ಮಿಕರಾಗಿ ದಕ್ಷಿಣ ಭಾರತದ ತಮಿಳುನಾಡಿನಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗಿದ್ದ ಶ್ರಮಿಕರ ಕುಟುಂಬ ಇವರದ್ದಾಗಿದೆ. ದಕ್ಷಿಣ ಆಫ್ರಿಕಾದ ಡರ್ಬನ್ ನಗರದ ಬಡ ಪ್ರದೇಶವೊಂದರಲ್ಲಿ ನಾರಾಯಣಸ್ವಾಮಿ ನಾಯ್ಡು ಮತ್ತು ಶಾಂತಮ್ಮ ದಂಪತಿಯ ಎಂಟು ಮಕ್ಕಳಲ್ಲಿ ಐದನೆಯವರಾಗಿ 1941ರ ಸೆಪ್ಟೆಂಬರ್ 23ರಂದು ನವನೀತಮ್ ನಾಯ್ಡುಜನಿಸಿದರು. ಇವರ ತಂದೆ ಬಸ್ ಚಾಲಕರಾಗಿ ಮತ್ತು ಮೀನುಗಾರರಾಗಿ ದುಡಿದು ದೊಡ್ಡ ಕುಟುಂಬವನ್ನು ಸಾಗಿಸುತ್ತಿದ್ದರು.
ನವನೇತಮ್ ನವಿ ಪಿಳ್ಳೈ ಅವರು ದಕ್ಷಿಣ ಆಫ್ರಿಕಾದ ಪ್ರಸಿದ್ಧ ಮಾನವ ಹಕ್ಕುಗಳ ವಕೀಲರು ಮತ್ತು ಅಂತರರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರಾಗಿದ್ದು, ಇಲ್ಲಿನ ವರ್ಣಭೇದ ನೀತಿಯ ವಿರುದ್ಧ ಸುದೀರ್ಘ ಹೋರಾಟ ನಡೆಸಿದ್ದರು. ನೆಲ್ಸನ್ ಮಂಡೇಲಾ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದರು.ಅಲ್ಲದೇ ರ್ವಾಂಡಾದ ಅಂತರರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ನ ನ್ಯಾಯಾಧೀಶರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಅವರು ಲೈಂಗಿಕ ಅತ್ಯಾಚಾರವನ್ನು ಜನಾಂಗೀಯ ಹತ್ಯೆಯ ಒಂದು ರೂಪ ಎಂದು ವ್ಯಾಖ್ಯಾನಿಸುವ ಐತಿಹಾಸಿಕ ತೀರ್ಪನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ವಿಶ್ವದ ಗಮನ ಸೆಳೆದಿತ್ತು.
ಕಡು ಬಡತನ ಮತ್ತು ತಾಯಿಯ ಅಪಾರ ತ್ಯಾಗದ ನಡುವೆ ಬೆಳೆದ ನವಿ ಪಿಳ್ಳೈ ಅವರ ಬಾಲ್ಯದ ಶಿಕ್ಷಣ ಮತ್ತು ವರ್ಣಭೇದ ನೀತಿ ವಿರುದ್ಧದ ಹೋರಾಟವು ಅವರ ಜಾಗತಿಕ ಸಾಧನೆಗೆ ಬುನಾದಿಯಾಯಿತು. ಹಳೆಯ ಪುಸ್ತಕಗಳ ಖಾಲಿ ಹಾಳೆಗಳನ್ನು ಹೊಲಿದು ನೋಟ್ಬುಕ್ ಮಾಡಿಕೊಟ್ಟ ತಾಯಿಯ ತ್ಯಾಗ ಮತ್ತು 10ನೇ ವಯಸ್ಸಿನಲ್ಲೇ ತಾರತಮ್ಯದ ವಿರುದ್ಧ ಅವರು ಬರೆದ ಪ್ರಬಂಧವು ಅವರಲ್ಲಿ ಕಾನೂನು ಹೋರಾಟದ ಕಿಚ್ಚನ್ನು ಹೊತ್ತಿಸಿತು.
ಕಡು ಬಡತನದಲ್ಲಿದ್ದ ನವಿ ಪಿಳ್ಳೈ ಅವರಿಗೆ ಸ್ಥಳೀಯ ಭಾರತೀಯ ಸಮುದಾಯದ ದೇಣಿಗೆ ಮತ್ತು ವಿದ್ಯಾರ್ಥಿವೇತನ ಆಸರೆಯಾಯಿತು. ಇದರ ನೆರವಿನಿಂದ 1963ರಲ್ಲಿ ಬಿಎ ಹಾಗೂ 1965ರಲ್ಲಿ ಎಲ್ಎಲ್ಬಿ ಪದವಿ ಪೂರ್ಣಗೊಳಿಸಿದರು. ಆ ಕಾಲದಲ್ಲಿ ಜಾರಿಯಲ್ಲಿದ್ದ ಕಟ್ಟುನಿಟ್ಟಿನ ವರ್ಣಭೇದ ನೀತಿಯ ಕಾರಣದಿಂದಾಗಿ ಬಿಳಿಯರಲ್ಲದ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಕರ್ಯಗಳೂ ಸಿಗುತ್ತಿರಲಿಲ್ಲ. ಒಮ್ಮೆಯಂತೂ ಕೇವಲ ಒಂದೇ ಒಂದು ಪಠ್ಯಪುಸ್ತಕವನ್ನು 20 ವಿದ್ಯಾರ್ಥಿಗಳು ಹಂಚಿಕೊಂಡು ಓದಬೇಕಾದ ದುಸ್ಥಿತಿ ಇತ್ತು.
ಹಾರ್ವಡ್ ನಲ್ಲಿ ದಕ್ಷಿಣ ಆಫ್ರಿಕಾದ ಮೊದಲ ದಾಖಲೆ
ಇಂತಹ ತಾರತಮ್ಯದ ಸವಾಲುಗಳಿಗೆ ಎದೆಗುಂದದ ನವಿ ಪಿಳ್ಳೈ ಅವರು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದರು. ಕಠಿಣ ಅಧ್ಯಯನದ ಮೂಲಕ 1988ರಲ್ಲಿ ಕಾನೂನು ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಆ ಮೂಲಕ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಡಾಕ್ಟರೇಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲಗಿರು ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅವರು ಪಾತ್ರರಾದರು.
ವಕೀಲಿ ವೃತ್ತಿ ಆರಂಭಿಸಿದ ಪಿಳ್ಳೈ, 1967ರಲ್ಲಿ ನಟಾಲ್ ಪ್ರಾಂತ್ಯದಲ್ಲಿ ತಮ್ಮದೇ ಆದ ಕಾನೂನು ಸಂಸ್ಥೆ ಆರಂಭಿಸಿದರು. ಅಲ್ಲದೇ ವರ್ಣಭೇದ ನೀತಿಯ ವಿರುದ್ಧದ ಕಾನೂನು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಅವರನ್ನು, 1995ರಲ್ಲಿ ಬಾರ್ ಅಸೋಸಿಯೇಷನ್ ಉಸ್ತುವಾರಿಯಲ್ಲಿ ನೆಲ್ಸನ್ ಮಂಡೇಲಾ ಅವರ ಬೆಂಬಲದೊಂದಿಗೆ ದಕ್ಷಿಣ ಆಫ್ರಿಕಾ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಿಸಲಾಯಿತು. ಆ ಮೂಲಕ ದಕ್ಷಿಣ ಆಫ್ರಿಕಾದ ಹೈಕೋರ್ಟ್ ಏರಿದ ಮೊದಲ ಶ್ವೇತವರ್ಣೀಯೇತರ ಮಹಿಳೆ ಎಂಬ ಐತಿಹಾಸಿಕ ಮೈಲುಗಲ್ಲನ್ನು ನವಿ ಪಿಳ್ಳೈ ಸ್ಥಾಪಿಸಿದರು.
ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇವರು ಅರಪಾರ ಸೇವೆ ಸಲ್ಲಿಸಿದ್ದಾರೆ. 1995ರಲ್ಲಿ ರವಾಂಡಾ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ನ್ಯಾಯಾಧೀಶರಾಗಿ ನೇಮಕಗೊಂಡು, ನಂತರ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 2003ರಿಂದ 2008ರವರೆಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನ್ಯಾಯಾಧೀಶರಾಗಿ, ತದನಂತರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಅತ್ಯುನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತತ್ಕಾಲಿಕ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸದ್ಯ ಜಗತ್ತಿನಲ್ಲಿ ಯುದ್ಧಗಳು ಮತ್ತು ಸಂಘರ್ಷಗಳು ಹೆಚ್ಚಾಗುತ್ತಿವೆ. ಕಾನೂನು ಸಂಸ್ಥೆಗಳು ಮತ್ತು ನ್ಯಾಯಾಧೀಶರು ರಾಜಕೀಯ ದಾಳಿಗೆ ತುತ್ತಾಗುತ್ತಿರುವ ಬಗ್ಗೆ ಆತಂಕವೂ ಇದೆ. ಇಂಥಹ ದಿನಗಳಲ್ಲಿ ಹಿಂಸಾಚಾರವಿಲ್ಲದೆ ಸಂಘರ್ಷಗಳನ್ನು ಬಗೆಹರಿಸುವ ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರಲು ಸಮಿತಿಯು ನವಿ ಪಿಳ್ಳೈ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದು ನಿಜಕ್ಕೂ ಮೆಚ್ಚ ತಕ್ಕದ್ದು
