ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಯಮ ಬಾಹಿರವಾಗಿ ಮೊಬೈಲ್ ಫೋನ್ ಬಳಸಿದ ಗಂಭೀರ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಆದೇಶ ಹೊರಡಿಸಲಾಗಿದೆ. ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಈ ಕಠಿಣ ಕ್ರಮ ಜರುಗಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿಪುವ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್ನಲ್ಲಿ ಇತ್ತೀಚೆಗೆ ಜೈಲು ಅಧಿಕಾರಿಗಳು ನಡೆಸಿದ ದಾಳಿ ವೇಳೆ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ಗಳು ಪತ್ತೆಯಾಗಿದ್ದವು. ಕಾರಾಗೃಹದ ನಿಯಮಗಳನ್ನು ಗಾಳಿಗೆ ತೂರಿ,ಜೈಲಿನ ಒಳಗಿನಿಂದಲೇ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಇದೇ ವೇಳೆ ಜೈಲಿನಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ಮರುಕಳಿಸದಂತೆ ತಡೆಯಲು ಭದ್ರತಾ ದೃಷ್ಟಿಯಿಂದ ಪ್ರಜ್ವಲ್ ಸೇರಿದಂತೆ 9 ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕಾರಾಗೃಹ ಇಲಾಖೆಗೆ ಲಿಖಿತ ಮನವಿಯನ್ನು ಕೂಡಾ ಸಲ್ಲಿಸಿದ್ದರು.
ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಪ್ರಜ್ವಲ್ ರೇವಣ್ಣ ಮತ್ತು ಇತರ ಐದು ಮಂದಿ ಕೈದಿಗಳನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ತಕ್ಷಣವೇ ಸ್ಥಳಾಂತರಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಭದ್ರತಾ ವೈಫಲ್ಯದ ಹೊಣೆ ಹೊರಿಸಿ ಇಬ್ಬರು ಜೈಲಾಧಿಕಾರಿಗಳನ್ನೂ ಸಹ ವರ್ಗಾವಣೆ ಮಾಡಲಾಗಿದೆ.
ಡಿಜಿಪಿ ಆದೇಶದ ಮೇರೆಗೆ, ಕಾರಾಗೃಹ ಇಲಾಖೆಯ ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಶುಕ್ರವಾರ ಸಂಜೆ ಅಥವಾ ರಾತ್ರಿಯ ವೇಳೆಗೇ ಪ್ರಜ್ವಲ್ ರೇವಣ್ಣರನ್ನು ಬೆಳಗಾವಿಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.