ಅಕ್ಟೋಬರ್ 11 ರಂದು ಬೆಳಿಗ್ಗೆ 11:50 ರ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾಗೆ ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿಯ ದಸರಾ ವೈಶಿಷ್ಟ್ಯ ಎಂದರೆ, ಈ ಬಾರಿಯ ದಸರಾವನ್ನು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ, ಸಂಪೂರ್ಣವಾಗಿ ಸಾಂಸ್ಕೃತಿಕ ಮತ್ತು ಜನಸಾಮಾನ್ಯರ ಹಬ್ಬವಾಗಿ ಆಚರಿಸಲಾಗುತ್ತಿದೆ.
ದೀಪಾಲಂಕಾರದ ಮ್ಯಾಜಿಕ್ ಮತ್ತೆ ಕಂಬಳದ ಜೋರು
ಸಾಕಷ್ಟು ವಿವಾದಗಳ ನಂತರ ಕರಾವಳಿಯ ಜಾನಪದ ಕ್ರೀಡೆಯಾದ 'ಕಂಬಳ' ಈ ಸಲ ಮೈಸೂರಿಗರನ್ನು ರಂಜಿಸಲಿದೆ. ಅಕ್ಟೋಬರ್ 18 ಮತ್ತು 19 ರಂದು ಸಾತಗಳ್ಳಿಯ ಕಂಬಳ ಟ್ರ್ಯಾಕ್ನಲ್ಲಿ ಕೋಣಗಳ ಓಟದ ಗಮ್ಮತ್ತು ನೋಡಬಹುದು. ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೂ ಇಡೀ ಮೈಸೂರು ನಗರ ಹಾಗೂ ಐತಿಹಾಸಿಕ ಅರಮನೆ ಲಕ್ಷಾಂತರ ಬಲ್ಬ್ಗಳ ಬೆಳಕಿನಲ್ಲಿ ಜಗಮಗಿಸುತ್ತದೆ. ಈ ಬೆಳಕಿನ ಸಂಭ್ರಮವನ್ನು ರಸ್ತೆಯಲ್ಲಿ ನಿಂತು ನೋಡೋ ಮಜಾನೇ ಬೇರೆ.
ಈ ಬಾರಿಯ ದಸರಾ ಹೈಲೈಟ್ ಅಂದ್ರೆ ಅದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿರುವ ಡ್ರೋನ್ ಶೋ ಅಕ್ಟೋಬರ್ 17, 18, 20 ಮತ್ತು 21 ರ ರಾತ್ರಿ ನೂರಾರು ಡ್ರೋನ್ಗಳು ಆಕಾಶದಲ್ಲಿ ಚಿತ್ರವಿಚಿತ್ರ ಆಕೃತಿಗಳನ್ನು ಮೂಡಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡಲಿವೆ. ಇದರ ಜೊತೆಗೆ ಕೇಂದ್ರ ಸರ್ಕಾರದ ನೆರವಿನಿಂದ ದಸರಾ ಇತಿಹಾಸದಲ್ಲೇ ಹೊಸ ಮೆರುಗು ನೀಡಲು ಭರ್ಜರಿ 'ಏರ್ ಶೋ' ಕೂಡ ಪ್ಲಾನ್ ಆಗಿದೆ.
ಇನ್ನು ಅಕ್ಟೋಬರ್ 21 ರ ವಿಜಯದಶಮಿಯಂದು ನಮಗೆಲ್ಲ ಕಾಯುವಿಕೆಯ ಕ್ಷಣ. ಅಂದು ಮಧ್ಯಾಹ್ನ 1:30 ಕ್ಕೆ ನಂದಿಧ್ವಜ ಪೂಜೆ ನೆರವೇರಿದರೆ, ಸಂಜೆ 4:10 ಕ್ಕೆ ಕಣ್ಣುತುಂಬಿಕೊಳ್ಳುವಂತಹ ಜಂಬೂ ಸವಾರಿಗೆ ಚಾಲನೆ ಸಿಗಲಿದೆ. 750 ಕೆಜಿ ತೂಕದ ಸ್ವರ್ಣ ಅಂಬಾರಿಯಲ್ಲಿ ಜಗನ್ಮಾತೆ ಚಾಮುಂಡೇಶ್ವರಿಯ ಮೂರ್ತಿಯನ್ನು ಹೊತ್ತು ತರಲು ಸಾಹಸಿ ಅಭಿಮನ್ಯು ಆನೆ ಸಿದ್ಧನಾಗಿದ್ದಾನೆ. ಮಹೇಂದ್ರ ಸೇರಿದಂತೆ ಉಳಿದ ಆನೆಗಳಿಗೂ ಬನ್ನಿಮಂಟಪದಲ್ಲಿ 21 ಬಾರಿ ಕುಶಾಲುತೋಪು ಸಿಡಿಸಿ ಸೂಪರ್ ತಾಲೀಮು ನೀಡಲಾಗಿದೆ.
ಸಂಗೀತ, ಊಟ, ಹೂವುಗಳ ಜಾತ್ರೆ
ಯುವ ಜನತೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ 'ಯುವ ದಸರಾ' ಈಗಾಗಲೇ ನಡೆಯುತ್ತಿದೆ. ಅರಮನೆಯಲ್ಲಿ ದೇಶ-ವಿದೇಶದ ದಿಗ್ಗಜ ಕಲಾವಿದರಿಂದ ಶಾಸ್ತ್ರೀಯ ಸಂಗೀತದ ರಸದೌತಣ ಸಿಗಲಿದೆ. ಕುಪ್ಪಣ್ಣ ಪಾರ್ಕ್ನಲ್ಲಿ ಪ್ರಜಾಪ್ರಭುತ್ವದ ಹಬ್ಬ ಹೆಸರಿನಲ್ಲಿ ಜಬರ್ದಸ್ತ್ ಹೂವಿನ ಪ್ರದರ್ಶನ ನಡೀತಿದೆ. ಮಹಾರಾಜ ಕಾಲೇಜು ಮೈದಾನದ ಬಳಿ ಫುಡ್ ಫೆಸ್ಟಿವಲ್ ಹಾಗೂ ದೊಡ್ಡಕೆರೆ ಮೈದಾನದಲ್ಲಿ ಎಕ್ಸಿಬಿಷನ್ ಕಾಯುತ್ತಿವೆ.
ಹೀಗೆ ಈ ಬಾರಿಯ ಮೈಸೂರು ದಸರಾ ಹಲವು ವಿಶೇಷತೆಯಿಂದ ಕೂಡಿದೆ.
