ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ ಮಹಿಳಾ ಪತ್ರಕರ್ತೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುವಾಗ, ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರ ಮಾಧ್ಯಮ ಕ್ಷೇತ್ರದ ಇಂದಿನ ಪರಿಸ್ಥಿತಿಯ ಬಗ್ಗೆ ಗಂಭೀರ ಕಳಕಳಿ ವ್ಯಕ್ತಪಡಿಸಿವೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, "ಪ್ರತಿಯೊಬ್ಬ ನಾಗರಿಕನೂ ಪತ್ರಕರ್ತನಾದರೆ ಎಲ್ಲರಿಗೂ ಸಮಸ್ಯೆ ಸೃಷ್ಟಿಯಾಗುತ್ತದೆ" ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ರೀಲ್ಸ್ ಮಾಡುವವರೋ, ನಿಜವಾದ ಪತ್ರಕರ್ತರೋ?

ಕೋರ್ಟ್‌ನ ಈ ಮಾತಿಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಧ್ವನಿಗೂಡಿಸಿದರು. "ಇವತ್ತಿನ ಡಿಜಿಟಲ್ ಯುಗದಲ್ಲಿ ಕೈಯಲ್ಲೊಂದು ಮೊಬೈಲ್, ಮೈಕ್ ಸಿಕ್ಕರೆ ಸಾಕು ಎಲ್ಲರೂ ತಾವೇ ಸ್ವತಂತ್ರ ಪತ್ರಕರ್ತರು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರಲ್ಲಿ ಬಹುತೇಕರು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ರೀಲ್ಸ್‌ಗಾಗಿ ವೀಡಿಯೊ ಮಾಡುವವರಾಗಿದ್ದಾರೆ" ಎಂದು ಕೋರ್ಟ್‌ಗೆ ತಿಳಿಸಿದರು. ಪ್ರತಿಭಟನೆ ನಡೆಯುವ ಜಾಗಗಳಲ್ಲಿ ನಿಜವಾದ ವೃತ್ತಿಪರ ವರದಿಗಾರರು ಯಾರು ಮತ್ತು ಲೈಕ್ಸ್, ಹಣಕ್ಕಾಗಿ ವೀಡಿಯೊ ಅಪ್‌ಲೋಡ್ ಮಾಡುವ ಯೂಟ್ಯೂಬರ್/ಇನ್‌ಫ್ಲುಯೆನ್ಸರ್ ಯಾರು ಎಂದು ತಿಳಿಯುವುದು ಪೊಲೀಸರಿಗೆ ಸವಾಲಾಗಿದೆ.

ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರತಿಯೊಬ್ಬರೂ ಪತ್ರಕರ್ತರೆಂದು ಹೇಳಿಕೊಂಡರೆ, ಗ್ರೌಂಡ್‌ನಲ್ಲಿ ಕೆಲಸ ಮಾಡುವ ನಿಜವಾದ ವರದಿಗಾರರಿಗೆ ರಕ್ಷಣೆ ನೀಡುವುದು ಕಷ್ಟವಾಗುತ್ತದೆ. ಮಾಧ್ಯಮ ಸಂಸ್ಥೆಯ ಪತ್ರಕರ್ತರು, ಫ್ರೀಲಾನ್ಸರ್ಸ್ ಮತ್ತು ಸೋಷಿಯಲ್ ಮೀಡಿಯಾ ಕ್ರಿಯೇಟರ್ಸ್‌ಗಳ ನಡುವೆ ವ್ಯತ್ಯಾಸ ಗುರುತಿಸಿ, ಯಾರಿಗೆ ಎಷ್ಟರಮಟ್ಟಿಗೆ ರಕ್ಷಣೆ ನೀಡಬೇಕು ಎಂಬುದನ್ನು ಪರಿಶೀಲಿಸಬೇಕಿದೆ ಎಂದು ನ್ಯಾ. ಜಾಯ್‌ಮಾಲ್ಯ ಬಾಗ್ಚಿ ತಿಳಿಸಿದರು.

ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತೆಯರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವನ್ನು ಸುಪ್ರೀಂ ಕೋರ್ಟ್ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ನಿವೃತ್ತ ಮಹಿಳಾ ನ್ಯಾಯಾಧೀಶರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಸ್ವತಂತ್ರ ಸಮಿತಿ ರಚಿಸುವ ಸುಳಿವನ್ನು ಕೋರ್ಟ್ ನೀಡಿದೆ.