ನಾಡಿನಲ್ಲಿ ನವರಾತ್ರಿಯ ಸಂಭ್ರಮ ಅಷ್ಟಿಷ್ಟಲ್ಲ.ಹಾಗೇ ಆರನೇ ದಿನದ ಪೂಜೆಯೂ ಅಷ್ಟೇ ಸಾಕಷ್ಟು ಮಹತ್ವ ಪಡ್ಕೊಂಡಿದೆ. ಈ ದಿನ ತಾಯಿ ಕಾತ್ಯಾಯಿನಿ ದೇವಿಯನ್ನು ಪೂಜಿಸಬೇಕು. ಈಕೆ ಕೂಡಾ ಶಕ್ತಿಶಾಲಿ ದೇವತೆಯಾಗಿದ್ದಾಳೆ.. ಅಷ್ಟೇ ಅಲ್ಲ. ಭಕ್ತಿಯಿಂದ ಆರಾಧಿಸೋರಿಗೆ ಬೇಡಿದ ವರ ನೀಡುತ್ತಾಳೆ. ಸನಾತನ ಗ್ರಂಥಗಳಲ್ಲಿ ತಾಯಿ ಕಾತ್ಯಾಯಿನಿಯ ಮಹಿಮೆಯನ್ನು ವಿವರವಾಗಿ ವಿವರಿಸಲಾಗಿದೆ. ತಾಯಿ ಕಾತ್ಯಾಯನಿಯನ್ನು ಆರಾಧಿಸುವುದರಿಂದ ಸಾಧಕನು ಮೃತ್ಯುಲೋಕದಲ್ಲಿ ಸ್ವರ್ಗಸದೃಶ ಸುಖಗಳನ್ನು ಪಡೆಯುತ್ತಾನೆ ಅನ್ನೋ ನಂಬಿಕೆ ಇದೆ. ಅಷ್ಟೇ ಅಲ್ಲ..ಆದಾಯ, ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ಪಡೆದುಕೊಳ್ಳತ್ತಾನೆ ಅಂತಾನೇ ಹೇಳಲಾಗುತ್ತೆ. ಹಾಗಿದ್ರೆ ಈ ಮಾತೆಯ ಮಹತ್ವ...ಈಕೆಯ ಪೂಜೆ ಮಾಡೋ ವಿಧಿ-ವಿಧಾನ… ಈ ದಿನ ಯಾವ ಮಂತ್ರ ಪಠಣ ಮಾಡ್ಬೇಕು…ಯಾವ ನೈವೇದ್ಯ ಮಾಡ್ಬೇಕು ಅನ್ನೋದ್ರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ 

ಕಾತ್ಯಾಯಿನಿಗೆ ಈ ಹೆಸರು ಹೇಗೆ ಬಂದಿತು.? 

ಮೊದಲಿಗೆ ಈ ತಾಯಿಗೆ ಕಾತ್ಯಾಯಿನಿ ಅನ್ನೋ ಹೆಸುರು ಹೇಗೆ ಬಂದಿತು ಎನ್ನುವುದನ್ನು ತಿಳಿದುಕೊಳ್ಳೋಣ.. ಹಿಂದೆ ಕತ ಅನ್ನು ಒಬ್ಬರು ಋಷಿಮುನಿಗಳು ಇದ್ರು. ಅವರಿಗೆ ಒಬ್ಬ ಮಗನಿದ್ದನು ಆತನ ಹೆಸರು ಕಾತ್ಯ. ಇದೇ ಕಾತ್ಯ ಋಷಿಯ ಗೋತ್ರದಲ್ಲಿ ಜನಿಸಿದವರು ಕಾತ್ಯಾಯನ. ಆ ಭಗವತಿಯು ತಮ್ಮ ಮನೆಯಲ್ಲಿ ಮಗಳಾಗಿ ಹುಟ್ಟಬೇಕು ಅನ್ನುವ ಇರಾದೆಯಿಂದ ಅವರು ಕಠಿಣವಾದ ತಪಸ್ಸು ಮಾಡಿದರು. ಪ್ರಾರ್ಥನೆಯನ್ನು ಆ ದೇವಿಯ ನಡೆಸಿಕೊಟ್ಟಳು. ಕೆಲ ಸಮಯದ ನಂತರ ರಾಕ್ಷಸನಾದ ಮಹಿಷಾಸುರನ ಉಪಟಳವು ವಿಪರೀತ ಹೆಚ್ಚಾಯಿತು. ಆಗ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಹಾಗೂ ಎಲ್ಲ ದೇವತೆಗಳು ಸೇರಿ, ತಂತಮ್ಮ ತೇಜಶ್ಶಕ್ತಿಯ ಅಂಶವನ್ನು ನೀಡಿ, ಒಬ್ಬ ದೇವಿಯನ್ನು ಸೃಷ್ಟಿ ಮಾಡಿದರು. ಆಕೆಯು ಮಹಿಷಾಸುರನ ಸಂಹಾರಕ್ಕಾಗಿಯೇ ಸೃಷ್ಟಿಯಾದವಳು. ಋಷಿಗಳಾದ ಕಾತ್ಯಾಯನರು ಈ ದೇವಿಯ ಪೂಜೆಯನ್ನು ಮೊದಲಿಗೆ ಮಾಡಿದರು. ಇದ್ರಿಂದ ಈ ತಾಯಿಗೆ ಕಾತ್ಯಾಯಿನಿ ಎನ್ನುವ ಹೆಸರು ಬಂದಿತು. 

ಈ ಮಹಾಮಾತೆಯ ಬಣ್ಣ ಬಂಗಾರದಂತೆ ಹೊಳೆಯುತ್ತಾಳೆ.. ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈ ಅಭಯ ಮುದ್ರೆಯನ್ನು ತೋರುತ್ತಿದೆ. ಕೆಳಗಿನ ಕೈ ವರ ಮುದ್ರೆಯನ್ನು ತೋರುತ್ತಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದ್ದು, ಕೆಳಗಿನ ಕೈಯಲ್ಲಿ ಕಮಲದ ಹೂವಿದೆ. ಇನ್ನು ಈ ತಾಯಿಯ ವಾಹನವು ಸಿಂಹವಾಗಿದೆ.

ಕಾತ್ಯಾಯಿನಿ ದೇವಿಗೆ ಇಷ್ಟವಾಗುವ ಬಣ್ಣ ಯಾವುದು.? 

ಇಂಥ ಮಗಾತಾಯಿ ಕಾತ್ಯಾಯನಿ ಬಗ್ಗೆ ಆಕೆ ಭಕ್ತರಿಗೆ ನೀಡೋ ವರಗಳ ಬಗ್ಗೆ ಎಷ್ಟೇ ಹೇಳಿದ್ರೂ ಮುಗಿಯುವುದಿಲ್ಲ. ಈಕೆಯನ್ನ ಭಕ್ತಿಯಿಂದ ಪೂಜೆ ಮಾಡಿದರೆ ವಿಶೇಷ ಅನುಗ್ರಹ ನೀಡುತ್ತಾಳೆ. ಆಕೆಯ ಅನುಗ್ರಹದಿಂದ ಸಾಧಕನ ಜೀವನದಲ್ಲಿ ಐಶ್ವರ್ಯವೆಂಬುದು ಮನೆ ಮಾಡುತ್ತದೆ. ಇದ್ರಿಂದ ಭಕ್ತರು ಕಾತ್ಯಾಯಿನಿ ಮಾತೆಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ನೀವೂ ಸಹ ತಾಯಿ ಕಾತ್ಯಾಯನಿಯ ಆಶೀರ್ವಾದದ ಭಾಗವಾಗಲು ಬಯಸಿದರೆ ನಾವು ಇಲ್ಲಿ ಹೇಳಿಕೊಡೋದನ್ನ ಪಾಲಿಸಿ. ನಿಮಗೆ ಗೊತ್ತಿರಲಿ ಮಾತೆ ಕಾತ್ಯಾಯಿನಿ ದೇವಿಯು ಕೆಂಪು ಬಣ್ಣವನ್ನು ಹೆಚ್ಚು ಇಷ್ಟಪಡ್ತಾಳೆ.. ಈ ದಿನ ಭಗವತಿ ದೇವಿಗೆ ಕೆಂಪು ಬಣ್ಣದ ಗುಲಾಬಿ ಹೂವುಗಳನ್ನ ಅರ್ಪಿಸುವುದು ಅತ್ಯಂತ ಮಂಗಳಕರ ಆಗಿದೆ. ಈ ರೀತಿ ಮಾಡೋದ್ರಿಂದ ಮಾತೆಯ ಆಶೀರ್ವಾದ ಸುಲಭವಾಗಿ ಪ್ರಾಪ್ತವಾಗುತ್ತೆ. ಕಾತ್ಯಾಯಿನಿ ದೇವಿಗೆ ಕೆಂಪು ಬಣ್ಣವನ್ನ ಹೊರತುಪಡಿಸಿ ಜೇನು ತುಪ್ಪವೆಂದರೆ ಅತ್ಯಂತ ಇಷ್ಟ. ಈಕೆಯ ಪೂಜೆಯ ಸಮಯದಲ್ಲಿ ತಾಯಿ ಕಾತ್ಯಾಯಿನಿಗೆ ಜೇನುತುಪ್ಪವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಭಕ್ತನ ವ್ಯಕ್ತಿತ್ವದಲ್ಲಿ ಸುಧಾರಣೆಯಾಗುತ್ತೆ. 

ಕಾತ್ಯಾಯಿನಿ ಮಾತೆಯನ್ನು ಹೇಗೆ ಪೂಜಿಸಬೇಕು.?

ಕಾತ್ಯಾಯಿನಿ ಆರಾಧನೆಯ ಸಮಯ ಸಂಧ್ಯಾಕಾಲ. ಇದ್ರಿಂದ ಸಮಯದಲ್ಲಿ ಮಾತೃದೇವತೆಯನ್ನು ಧೂಪ, ದೀಪಗಳನ್ನ ಬೆಳಗಿ ಪೂಜೆ ಮಾಡ್ಬೇಕು. ಕಾತ್ಯಾಯಿನಿಯನ್ನು ಹಳದಿ ಅಥವಾ ಕೆಂಪು ವಸ್ತ್ರಗಳನ್ನು ಧರಿಸಿ ಪೂಜಿಸಬೇಕು. ಇನ್ನು ತಾಯಿಯ ವಿಗ್ರಹವನ್ನು ಶುದ್ಧ ನೀರಿನಿಂದ ಅಥವಾ ಗಂಗಾಜಲದಿಂದ ಅಭಿಷೇಕ ಮಾಡಬೇಕು ಬಳಿಕ ಕೆಂಪು ಬಣ್ಣ ಕುಂಕುಮ ಹಚ್ಚಿ. ಹಳದಿ ಹೂವುಗಳು ಮತ್ತು ಹಳದಿ ನೈವೇದ್ಯವನ್ನು ಅರ್ಪಿಸಬೇಕು ನಂತರ 3 ತುಂಡು ಅರಿಶಿನವನ್ನು ಸಹ ಅರ್ಪಣೆ ಮಾಡ್ಬೇಕು. ಇದಾದ ಮೇಲೆ ಅರಿಶಿನದ ಉಂಡೆಗಳನ್ನು ನಿಮ್ಮ ಬಳಿ ಸುರಕ್ಷಿತವಾಗಿಟ್ಟುಕೊಳ್ಳಬೇಕು. ತಾಯಿ ಕಾತ್ಯಾಯನಿಗೆ ಜೇನುತುಪ್ಪವನ್ನು ಅರ್ಪಿಸಿ.ಆ ಜೇನುತುಪ್ಪವನ್ನು ಬೆಳ್ಳಿ ಅಥವಾ ಮಣ್ಣಿನ ಪಾತ್ರೆಯಲ್ಲಿ ಅರ್ಪಿಸಿದರೆ ಉತ್ತಮ. 

ಇನ್ನು ತಾಯಿಗೆ ಪರಿಮಳಯುಕ್ತ ಹೂವುಗಳನ್ನ ಅರ್ಪಿಸುವುದರಿಂದ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ. ಇನ್ನು ಪೂಜೆಯ ಸಮಯದಲ್ಲಿ ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್ ಪಾತು ನ: ಸರ್ವಭೀತಿಭ್ಯ: ಕಾತ್ಯಾಯನಿ ನಮೋಸ್ತುತೇ ಈ ಮಂತ್ರವನ್ನ ಪಠಣ ಮಾಡ್ಬೇಕು. 

ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಧರ್ಮ-ಅರ್ಥ-ಕಾಮ್ಯ-ಮೋಕ್ಷ ಹೀಗೆ ಚತುರ್ವಿಧ ಫಲ ಪುರುಷಾರ್ಥಗಳು ಸಹ ದೊರೆಯುತ್ತವೆ. ರೋಗ, ಶೋಕ, ದುಃಖ, ದಾರಿದ್ರ್ಯಗಳು ದೂರವಾಗುತ್ತವೆ. ಜನ್ಮಜನ್ಮಾಂತರದ ಪಾಪಗಳು ನಾಶ ಆಗುತ್ತವೆ. ಇಹ ಲೋಕದಲ್ಲಿ ದೇವಿಯ ಆರಾಧಕರು ಅಲೌಕಿಕವಾದ ತೇಜಸ್ಸು, ಕಾಂತಿ, ಸಮಾಧಾನ- ಸಂತೃಪ್ತಿಯನ್ನು ಕಾಣಬಹುದಾಗಿದೆ. ಜೊತೆಗೆ ಭಯ ದೂರವಾಗಿ ಧೈರ್ಯ ಮೂಡುತ್ತೆ. ಏನನ್ನಾದರೂ ಸಾಧಿಸುವ ಅಚಲ ವಿಶ್ವಾಸ ಸಹ ಬರುತ್ತೆ. ಅಷ್ಟೇ ಅಲ್ಲ.. ನೀವು ಮಾಡಲು ಹೊರಟ ಯಾವುದೇ ಕೆಲಸದಲ್ಲಿ ಯಶಸ್ಸನ್ನ ಸಾಧಿಸಲು ಬಯಸಿದ್ರೆ.. ಆ ಕೆಲಸ ಮಾಡುವ ಮುನ್ನ ಕಾತ್ಯಾಯಿನಿ ದೇವಿಯನ್ನು ಪ್ರಾರ್ಥಿಸಿ. ಕಾತ್ಯಾಯನಿ ಮಾತೆಯನ್ನು ಪೂಜಿಸುವುದರಿಂದ ಕೀರ್ತಿ ಪ್ರಾಪ್ತವಾಗುತ್ತದೆ.

ಶತ್ರುಗಳ ಮೇಲಿನ ವಿಜಯಕ್ಕಾಗಿ ತಾಯಿ ಕಾತ್ಯಾಯನಿಯನ್ನೂ ಪೂಜಿಸಲಾಗುತ್ತದೆ. ಇನ್ನು ಗುರು ಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಅಪಾರ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾನೆ. ಇಲ್ಲಿ ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದರೆ ಅದಕ್ಕೂ ಪರಿಹಾರ ದೊರಕುತ್ತೆ.