ರಾಜ್ಯ ಸರ್ಕಾರ ವಂದೇ ಮಾತರಂ ಗೀತೆಗೆ ಸಂಬಂಧ ಪಟ್ಟಂತೆ ತೆಗೆದುಕೊಂಡಿರುವ ನಿರ್ಣಯಕ್ಕೆ ಬಿಜೆಪಿ ವಿರೋಧ ಮಾಡುತ್ತಲೇ ಬಂದಿದೆ.ಇದೀಗ ಈ ವಿಚಾರ ರಾಜ್ಯಪಾಲರ ಅಂಗಳಕ್ಕೆ ತಲುಪಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಇದಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ 

ರಾಜ್ಯ ಸರ್ಕಾರ ನಿನ್ನೆಯಿಂದ ವಿಶೇಷ ಅಧಿವೇಶನ ಕರೆದಿದೆ. ಬರಗಾಲ ಹಾಗೂ ಕಸ್ತೂರಿರಂಗನ್ ವರದಿ ಜಾರಿ ಬಗ್ಗೆ ಚರ್ಚೆ ಮಾಡಲು ಈ ಸದನ ಕರೆಯಲಾಗಿದೆ. ಆದರೆ ಮೊದಲ ದಿನವಾದ ನಿನ್ನೆ(ಸೋಮವಾರ) ವಿಧಾನ ಪರಿಷತ್ತಿನಲ್ಲಿ ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯಪಾಲರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿರುವ ರಾಜ್ಯಪಾಲರು ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಆದೇಶವನ್ನು ಮರುಪರಿಶೀಲಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ವಂದೇ ಮಾತರಂ ಕುರಿತು ರಾಜ್ಯ ಸರ್ಕಾರದ ನಿರ್ಧಾರವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯಪಾಲರು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಇದೇ ಪತ್ರದಲ್ಲಿ ರಾಜ್ಯಪಾಲರು ಮತ್ತೊಂದು ಅಂಶವನ್ನೂ ಸೇರಿಸಿದ್ದಾರೆ. ಸಂವಿಧಾನಾತ್ಮಕ ಅಂಶಗಳು ಹಾಗೂ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪರಿಗಣಿಸಿ, ರಾಜ್ಯ ಸರ್ಕಾರ ತನ್ನ ಆದೇಶವನ್ನು ಮರುಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

ವಂದೇ ಮಾತರಂನ ಅಧಿಕೃತ ಆವೃತ್ತಿಯನ್ನು ಕೇಂದ್ರ ಗೃಹ ಸಚಿವಾಲಯ ನಿಗದಿಪಡಿಸಿದೆ. ರಾಷ್ಟ್ರೀಯ ಗೀತೆ ಹಾಗೂ ರಾಷ್ಟ್ರಗಾನಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ರಾಜ್ಯ ಸರ್ಕಾರಗಳೂ ಈ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ. ಇನ್ನು ಸಾಮೂಹಿಕ ಗಾಯನದ ಸಂದರ್ಭದಲ್ಲೂ ‘ವಂದೇ ಮಾತರಂ’ನ ಅಧಿಕೃತ ಆವೃತ್ತಿಯನ್ನೇ ಹಾಡಬೇಕು ಎಂದು ಕೇಂದ್ರದ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗಾಗಿ ಪ್ರತ್ಯೇಕವಾಗಿ ಸಂಕ್ಷಿಪ್ತ ಅಥವಾ ಬದಲಾದ ಆವೃತ್ತಿಯನ್ನು ನಿಗದಿಪಡಿಸಲು ಅವಕಾಶವಿಲ್ಲ.

ಇದರ ಜೊತೆ ರಾಜ್ಯಪಾಲರು ಸರ್ಕಾರಕ್ಕೆ ಮತ್ತೊಂದು ವಿಚಾರವನ್ನು ಪತ್ರದಲ್ಲಿ ಸ್ಪಷ್ಟ ಪಡಿಸಿದ್ದಾರೆ. ವಂದೇ ಮಾತರಂ ಗೀತೆ ಹಾಡುವುದು ಕೇವಲ ಆಡಳಿತಾತ್ಮಕ ಅನುಕೂಲಕಷ್ಟೇ ಮೀಸಲಾಗಿಲ್ಲ. ಬದಲಿಗೆ ಅದು ರಾಷ್ಟ್ರದ ಭವ್ಯ ಸಂಕೇತವಾಗಿದೆ. ಹಾಗೂ ನಿಯಮಗಳನ್ನು ಪಾಲನೆ ಮಾಡುವ ಪ್ರಶ್ನೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. 

ಇನ್ನು ರಾಜ್ಯಪಾಲರು ತಮ್ಮ ಪತ್ರದಲ್ಲಿ ಮತ್ತೊಂದು ವಿಚಾರವನ್ನು ಸ್ಪಷ್ಟ ಪಡಿಸಿದ್ದಾರೆ. 1971ರ ಕಾಯ್ದೆಯ ಸೆಕ್ಷನ್ 3ರ ಅಡಿ ರಾಷ್ಟ್ರಗಾನಕ್ಕೆ ನೀಡಲಾಗಿರುವ ರಕ್ಷಣೆಯನ್ನು ವಂದೇ ಮಾತರಂಗೂ ವಿಸ್ತರಿಸಲಾಗಿದೆ ಎಂಬ ಅಂಶವನ್ನೂ ಪತ್ರದಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಸೂಚಿಸಿದ್ದಾರೆ.