ಸ್ಟಿಂಗ್ ಆಪರೇಷನ್ ವಿಚಾರ ಈಗಾಗಲೇ ರಾಜ್ಯ ಸರ್ಕಾರಕ್ಕೆ ಉಸಿರು ಕಟ್ಟುವಂತೆ ಮಾಡಿದೆ. ಅದರಲ್ಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಚಾರದಲ್ಲಿ ತಲೆ ಹೊತ್ತು ಕೂರುವಂತಾಗಿದೆ. ಇದೆಲ್ಲಾ ನಡೆಯುತ್ತಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಅಂಗಳಕ್ಕೆ ಪಕ್ಷಾಂತರದ ಬಾಂಬ್ ಎಸೆದಿದ್ದಾರೆ.ಒಂದು ವೇಳೆ ಈಗಲೇ ವಿಧಾನಸಭೆಗೆ ಚುನಾವಣೆ ಘೋಷಣೆಯಾದರೆ ಮುಖ್ಯಮಂತ್ರಿ ಶಿವಕುಮಾರ್ ಅವರ ಸಂಪುಟದ ಸಚಿವರು ಸೇರಿ ಸುಮಾರು 20ರಿಂದ 25 ಶಾಸಕರು ಬಿಜೆಪಿಗೆ ವಲಸೆ ಬರುತ್ತಾರೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತಾನಾಡಿದ ವಿಜಯೇಂದ್ರ ರಾಜ್ಯದಲ್ಲಿ ಅಧಿಕಾರಕ್ಕಾಗಿ ಏನೆಲ್ಲಾ ಆಗುತ್ತಿದೆ. ಸ್ಟಿಂಗ್ ಆಪರೇಷನ್ ಕೂಡ ಆಗುತ್ತಿದೆ. ಈ ಕೆಲಸ ಮಾಡಿಸುವುದು ರಾಜಕೀಯ ವ್ಯಭಿಚಾರ ಎಂದರು. ಕಾಂಗ್ರೆಸ್ ನಲ್ಲಿ ಶಾಸಕರು ಡಿ.ಕೆಶಿವಕುಮಾರ್ ನಾಯಕತ್ವದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಆಡಳಿತ ಪಕ್ಷದಲ್ಲೇ ಸಿಎಂ ಮೇಲೆ ವಿಶ್ವಾಸ ಹೋಗಿದೆ ಎಂದು ವಿಜಯೇಂದ್ರ ಹೇಳಿದರು. ಹೀಗೆ ಅಸಮಾಧಾನಗೊಂಡಿರುವವರು ಪಕ್ಷ ಸೇರಲು ಮುಂದಾಗಿದ್ದಾರೆ. ಹಾಗಂತ ನಾವೇನು ಅವರನ್ನ ಕರೆಯುತ್ತಿಲ್ಲ ಅವರೇ ತುದಿಗಾಲಲ್ಲಿ ನಿಂತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಮುಂದುವರೆದು ಮಾತಾನಾಡಿದ ವಿಜಯೇಂದ್ರ ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಅಧಿಕಾರ ಕಸಿದುಕೊಳ್ಳಲು ಸ್ಟಿಂಗ್ ಮಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಇನ್ನು ಕೆಲವರು ಸಚಿವರಾಗಲು, ಕೆಲವರು ಸಿಎಂ ಆಗಲು ಸ್ಟಿಂಗ್ ಮಾಡಿದ್ದಾರೆ ಅನ್ನೋ ಚರ್ಚೆ ನಡೆದಿದೆ. ಸ್ಟಿಂಗ್ ಆಪರೇಷನ್ ನಂತಹ ಬೆಳವಣಿಗೆ ಕರ್ನಾಟಕದ ರಾಜಕೀಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರು. ಯಾರು ಯಾರ ವಿರುದ್ಧ ಸ್ಟಿಂಗ್ ಮಾಡಿದ್ದಾರೆ ಎಲ್ಲವೂ ಚರ್ಚೆ ಅಗುತ್ತಿದೆ. ಮುಂದೆ ಎಲ್ಲವೂ ಬಹಿರಂಗವಾಗಲಿದೆ. ಈ 420 ಕೆಲಸ ಮಾಡಿದವರು ಅನುಭವಿಸುತ್ತಾರೆ. ಕರ್ನಾಟಕದ ರಾಜಕಾರಣ ಇಂಥಹ ಮಟ್ಟಕ್ಕೆ ಹೋಗಬಾರದಿತ್ತು, ದುರಾದೃಷ್ಟವಶಾತ್ ಹೋಗಿದೆ. ಸ್ಟಿಂಗ್ ಮಾಡೋದು ರಾಜಕೀಯ ವ್ಯಭಿಚಾರದ ಹಾಗೆ ಎಂದು ವಿಜಯೇಂದ್ರ ಕಿಡಿ ಕಾರಿದ್ದಾರೆ.