ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಇ.ಡಿ ಅಧಿಕಾರಿಗಳು ತಮ್ಮ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಆದರೆ ಆರೋಪ ಹೊತ್ತಿರುವ ಕೆಪಿಸಿಸಿ ಸದಸ್ಯೆ ಯಾವುದದಕ್ಕೂ ಸರಿಯಾದ ಉತ್ತರ ಕೊಡದೇ ಎಲ್ಲವನ್ನೂ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಕಡೆಗೆ ಎಲ್ಲವನ್ನೂ ತಿರುಗಿಸುತ್ತಿದ್ದಾರೆ ಎನ್ನಲಾಗಿದೆ.

 ಪ್ರಕರಣದಲ್ಲಿ ತಮ್ಮ ಪಾತ್ರವನ್ನು ಗೀತಾ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ನನಗೂ ಈ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ  ಎನ್ನುತ್ತಿದ್ದಾರಂತೆ.. ನೀವು ಏನ್ ಕೇಳ್ಬೇಕು ಅಂದ್ರೂ ಮಾಜಿ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಅವರನ್ನೇ ಕೇಳಿ. ನಾನೊಬ್ಬ ಸದಸ್ಯೆಯಾಗಿ ಸಭೆಗಳಲ್ಲಿ ಭಾಗಿಯಾಗುತ್ತಿದ್ದೆ ಅಷ್ಟೇ. ಪರೀಕ್ಷೆಗೆ ಮೊದಲು ಮತ್ತು ಫಲಿತಾಂಶ ನಂತರ ನಡೆದ ಸಭೆಗಳಲ್ಲಿ ಭಾಗವಹಿಸಿ, ನಂತರ ದಾಖಲೆಗಳಿಗೆ ಸಹಿ ಹಾಕುತ್ತಿದ್ದೆ. ಇದು ಬಿಟ್ಟರೆ ನನಗೆ ಏನೂ ಗೊತ್ತಿಲ್ಲ ಎಂದು ಇ.ಡಿ. ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಗೀತಾರ ಹೇಳಿಕೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಪಿಎಸ್ ಸಿಯಂಥ ಉನ್ನತ ಸಂಸ್ಥೆಯ ಸದಸ್ಯರೊಬ್ಬರು ಕಣ್ಮುಚ್ಚಿ ಕಡತಗಳಿಗೆ ಸಹಿ ಹಾಕಿದ್ದಾರೆ ಎಂಬುದನ್ನು ಒಪ್ಪಲು ಆಗುತ್ತಾ ಎಂದು ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ. ಇನ್ನು ಇಡಿ ಅಧಿಕಾರಿಗಳು ಈಗಾಗಲೇ ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾ ನಡುವೆ ನಡೆದಿರುವ ಹಣಕಾಸು ವ್ಯವಹಾರಗಳ ಕುರಿತು ಹಲವು ಮಾಹಿತಿ ಕಲೆಹಾಕಿದ್ದಾರೆ. ಈ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳನ್ನು ಸಹ ಸಂಗ್ರಹಿಸಲಾಗಿದೆ.ಜತೆಗೆ ಅಭ್ಯರ್ಥಿ ಗಳಿಂದ ಹಾಗೂ ಅವರ ಪಾಲಕರಿಂದ ಹೇಗೆ ಹಣ ಸಂಗ್ರಹಿ ಸಲಾಗಿದೆ ಎಂಬ ವಿವರಗಳನ್ನೂ ಸಹ ಪತ್ತೆ ಹಚ್ಚಿದ್ದಾರೆ.

ಪ್ರಸ್ತುತ ನಡೆಯುತ್ತಿರುವುದು ಪ್ರಾಥಮಿಕ ವಿಚಾರಣೆ ಮಾತ್ರ. ಈ ವೇಳೆ ಇಬ್ಬರೂ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನ ನಿರಾಕರಿಸಿದ್ದಾರೆ. ಇದರಿಂದ ಮುಂದಿನ ಹಂತದಲ್ಲಿ ಸಂಗ್ರಹಿಸಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನ ಆರೋಪಿಗಳ ಮುಂದೆ ಇಟ್ಟು ಮತ್ತಷ್ಟು ತೀವ್ರ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.