ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಕಾಮನ್ ಆದ್ರೆ ಜಗಳವನ್ನೇ ಆಯುಧ ಮಾಡಿಕೊಳ್ಳಬಾರದು. ಇನ್ನು ಕಳೆದ ವಾರ ಮನೆಯೊಳಗೆ ಜಗಳ ತಾರಕಕ್ಕೇರಲು ಮಾಡ್ರನ್ ಕವಿ ಮಂಜ ಮತ್ತು ಯಶಸ್ ನಡುವಿನ ವೈಯಕ್ತಿಕ ನಿಂದನೆಯೇ ಮುಖ್ಯ ಕಾರಣ. ಯಶಸ್ ಅವರ ಚಾರಿತ್ರ್ಯದ ಬಗ್ಗೆ ಅತ್ಯಂತ ಅಸಭ್ಯ ಪದ ಬಳಸಿ ನಿಂದಿಸಿದ್ದ ಮಂಜ, ಮನೆಯ ಇತರ ಮಹಿಳಾ ಸ್ಪರ್ಧಿಗಳಿಗೂ ಅವರಿಂದ ದೂರವಿರಲು ಎಚ್ಚರಿಸಿದ್ದರು. ಹತ್ತು ವರ್ಷಗಳ ದೊಡ್ಡ ಕನಸ ಹೊತ್ತು ಬಂದ ಮಂಜ ಅವರ ಈ ನಡವಳಿಕೆಯನ್ನು ಬಿಗ್ ಬಾಸ್ ಹಾಗೂ ನಿರೂಪಕ ಕಿಚ್ಚ ಸುದೀಪ್ ಗಂಭೀರವಾಗಿ ಪರಿಗಣಿಸಿದರು. ಕನ್ಫೆಷನ್ ರೂಮ್ನಲ್ಲಿ ತಾಯಿಯ ಭಾವುಕ ಧ್ವನಿ ಸಂದೇಶ ಕೇಳಿಸಿದ ಬಳಿಕ, ನಿಯಮ ಮೀರಿ ವರ್ತಿಸಿದ ಮಂಜನಿಗೆ 'ರೆಡ್ ಕಾರ್ಡ್' ನೀಡಿ ತಕ್ಷಣವೇ ಮನೆಯಿಂದ ಹೊರಹಾಕಲಾಯಿತು.
ಇನ್ನೊಂದೆಡೆ, ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ವೇಳೆ ಗಾನವಿ ಗೌಡ ಮತ್ತು ಗಗನ್ ಚಿನ್ನಪ್ಪ ನಡುವಿನ ಶೀತಲ ಸಮರ ತೀವ್ರ ಸ್ವರೂಪ ಪಡೆದುಕೊಂಡಿತ್ತು. ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ, ಗಗನ್ ಅವರನ್ನು 'ಕುನ್ನಿ', 'ಬ್ರೈನ್ಲೆಸ್' ಎಂದು ಕರೆದಿದ್ದಲ್ಲದೆ, ಅವರ ತಾಯಿಯ ಬಗ್ಗೆಯೂ ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಅಲ್ಲದೆ ಟಿವಿ ಸೀರಿಯಲ್ ರಂಗದ ಬಗ್ಗೆ ಕೇವಲವಾಗಿ ಮಾತನಾಡಿದ್ದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಆಕ್ರೋಶಕ್ಕೂ ಕಾರಣವಾಗಿತ್ತು.
ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಈ ಇಬ್ಬರೂ ಸ್ಪರ್ಧಿಗಳಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು. ಜಗಳದ ಮಧ್ಯೆ ತಾಯಂದಿರನ್ನು ಎಳೆದು ತರುವುದು ತೀರಾ ಅಸಹ್ಯ ಎಂದು ಖಂಡಿಸಿದ ಸುದೀಪ್, ಕಾರ್ಯಕ್ರಮದ ಪರವಾಗಿ ಸ್ವತಃ ಗಗನ್ ಅವರ ತಾಯಿಯಲ್ಲಿ ಕ್ಷಮೆ ಕೇಳಿ ವೇದಿಕೆಯಲ್ಲೇ ಕಣ್ಣೀರಿಟ್ಟರು. ಇಂತಹ ಅಸಭ್ಯ ನಡವಳಿಕೆಗಳು ಶೋ ನೆಗೆಟಿವ್ ಆಗಲು ಕಾರಣವಾಗುತ್ತಿವೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.
ಈ ಹಿಂದಿನಿಂದಲ್ಲೂ ಬಿಗ್ ಬಾಸ್ ಶೋ ಮೇಲಿನ ಅಭಿಪ್ರಾಯ ನೆಗೆಟಿವ್ ಆಗಿಯೇ ಇದೆ. ಬಿಗ್ ಬಾಸ್ ಶೋ ಸ್ಕ್ರಿಪ್ಟೆಡ್, ಟಿಆರ್'ಪಿಗೋಸ್ಕರ ಜಗಳ ಆಡೋ ಹಾಗೆ ಮಾಡುತ್ತಾರೆ ಅನ್ನೋ ಅಭಿಪ್ರಾಯ ಸಾಕಷ್ಟು ಜನರಲ್ಲಿದೆ. ಇದರ ನಡುವೆ ಈ ರೀತಿಯ ಘಟನೆಗಳು ಇನ್ನಷ್ಟು ವಿವಾದಕ್ಕೆ ಪುಷ್ಠಿ ನೀಡುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನವರೆಗೂ ಈ ಶೋನಾ ನೋಡ್ತಾರೆ ಅನ್ನೋದು ಅಲ್ಲಿರುವ ಪ್ರತಿಯೊಬ್ಬ ಕಂಟೆಸ್ಟಂಟ್'ಗಳಿಗೂ ಗೊತ್ತು. ಒಂದು ಜವಾಬ್ದಾರಿ ಸ್ಥಾನದಲ್ಲಿದ್ದು, ಈ ರೀತಿ ಮಾತನಾಡುವುದು ಎಷ್ಟು ಸರಿ, ಈ ವರ್ತನೆಗಳು ಜನರ ಮೇಲೆ ಹಾಗೂ ಬಿಗ್ ಬಾಸ್ ಶೋ ಮೇಲೆ ಕೆಟ್ಟ ಪರಿಣಾಮ ಬಿರುವುದಂತೂ ನಿಜ.


