ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಅಪಹರಣದ ಎಚ್ಚರಿಕೆ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ, ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಬಳಿಕ ವಿಮಾನವನ್ನು ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಿ ಭದ್ರತಾ ತಪಾಸಣೆ ನಡೆಸಲಾಯಿತು. ಪೈಲಟ್ ಆಕಸ್ಮಿಕವಾಗಿ ಅಪಹರಣದ ಎಚ್ಚರಿಕೆ ಸಂಕೇತವನ್ನು ಸಕ್ರಿಯಗೊಳಿಸಿದ್ದೇ ಈ ಗೊಂದಲಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಫ್ರಾಂಕ್ಫರ್ಟ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ ಎಐ-2030 ವಿಮಾನ ಮಾರ್ಗಮಧ್ಯದಲ್ಲಿದ್ದಾಗ, ಅಹಮದಾಬಾದ್ನ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಕೆಲವೇ ಸೆಕೆಂಡುಗಳ ಕಾಲ ‘ಸ್ಕ್ವಾಕ್ 7500’ ಸಂಕೇತ ರವಾನೆಯಾಗಿದೆ. ವಿಮಾನ ಅಪಹರಣದ ಸೂಚನೆ ಎಂದು ಪರಿಗಣಿಸಲಾಗುವ ಈ ಸಂಕೇತ ಬಂದ ತಕ್ಷಣ ಭದ್ರತಾ ಸಂಸ್ಥೆಗಳು ಎಚ್ಚೆತ್ತುಕೊಂಡು ವಿಮಾನವನ್ನು ಜೈಪುರ ವಿಮಾನ ನಿಲ್ದಾಣಕ್ಕೆ ತಿರುಗಿಸಲು ಕ್ರಮ ಕೈಗೊಳ್ಳಲಾಯ್ತು.

ಬೆಳಿಗ್ಗೆ ಸುಮಾರು 9:45ಕ್ಕೆ ವಿಮಾನ ಜೈಪುರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಪ್ರತ್ಯೇಕ ಐಸೊಲೇಷನ್ ಬೇಗೆ ಕೊಂಡೊಯ್ಯಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಭದ್ರತಾ ತಪಾಸಣೆ ನಡೆಸಲಾಯಿತು.

ಪೊಲೀಸ್ ಮೂಲಗಳ ಪ್ರಕಾರ, ಪೈಲಟ್ ಆಕಸ್ಮಿಕವಾಗಿ ಅಪಹರಣದ ಎಚ್ಚರಿಕೆ ಬಟನ್ ಒತ್ತಿದ್ದರಿಂದ ಈ ಗೊಂದಲ ಉಂಟಾಗಿದೆ. ಇದು ನಿಜವಾದ ಅಪಹರಣದ ಪ್ರಯತ್ನವಲ್ಲ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದರೂ, ವಿಮಾನಯಾನ ಭದ್ರತಾ ನಿಯಮಾವಳಿಗಳ ಪ್ರಕಾರ ಅಗತ್ಯ ತಪಾಸಣೆಗಳನ್ನು ಕೈಗೊಳ್ಳಲಾಯಿತು. ಭದ್ರತಾ ತಪಾಸಣೆಗಳು ಪೂರ್ಣಗೊಂಡ ಬಳಿಕ ಪ್ರಯಾಣಿಕರನ್ನು ಅದೇ ವಿಮಾನದಲ್ಲಿ ಮರಳಿ ದೆಹಲಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು.

ವಿಮಾನಯಾನ ಕ್ಷೇತ್ರದಲ್ಲಿ ‘ಸ್ಕ್ವಾಕ್ 7500’ ಎಂಬುದು ವಿಮಾನ ಅಪಹರಣ ಅಥವಾ ವಿಮಾನವನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳುವ ಪರಿಸ್ಥಿತಿಯನ್ನು ಸೂಚಿಸುವ ಅಂತಾರಾಷ್ಟ್ರೀಯ ಟ್ರಾನ್ಸ್ಪಾಂಡರ್ ಕೋಡ್ ಆಗಿದೆ. ವಿಮಾನದಿಂದ ಈ ಸಂಕೇತ ರವಾನೆಯಾದಾಗ ವಾಯು ಸಂಚಾರ ನಿಯಂತ್ರಣ ಕೇಂದ್ರಗಳು ಮತ್ತು ಸಂಬಂಧಪಟ್ಟ ಭದ್ರತಾ ಸಂಸ್ಥೆಗಳು ತಕ್ಷಣ ಎಚ್ಚೆತ್ತುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತವೆ.

ಇಂತಹ ಸಂಕೇತ ಬಂದಾಗ ವಿಮಾನವನ್ನು ಸುರಕ್ಷಿತವಾಗಿ ಇಳಿಸಿ, ಇತರ ವಿಮಾನಗಳ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಸಮಗ್ರ ಭದ್ರತಾ ತಪಾಸಣೆ ನಡೆಸಲು ಅನುಕೂಲವಾಗುವಂತೆ ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ. ಏರ್ ಇಂಡಿಯಾ ವಿಮಾನದ ಪ್ರಕರಣದಲ್ಲಿಯೂ ಇದೇ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.