ಮಸ್ಕ್ ಅವರ ದೊಡ್ಡ ಪ್ಲಾನ್
ಇಲಾನ್ ಮಸ್ಕ್ ತಮ್ಮ 'ಸ್ಟಾರ್ಲಿಂಕ್' ಉಪಗ್ರಹ ಇಂಟರ್ನೆಟ್ ಸೇವೆಯನ್ನು ಹೇಗಾದರೂ ಮಾಡಿ ಭಾರತದ ಗಲ್ಲಿಗಲ್ಲಿಗೂ ತಲುಪಿಸಬೇಕು ಎಂದು ಕಾತರರಾಗಿದ್ದಾರೆ. ಭಾರತದಲ್ಲಿ ಕೋಟ್ಯಂತರ ಗ್ರಾಹಕರಿದ್ದಾರೆ, ಹಾಗಾಗಿ ಇಲ್ಲಿ ಕಾಲಿಟ್ಟರೆ ತಮ್ಮ ಬಿಸಿನೆಸ್ ಎಲ್ಲೋ ತಲುಪುತ್ತದೆ ಎಂಬುದು ಅವರ ಲೆಕ್ಕಾಚಾರ ಎದ್ದು ಕಾಣುತ್ತಿದೆ. ಅಷ್ಟೇ ಅಲ್ಲದೇ ಭಾರತಕ್ಕೆ ಸ್ಟಾರ್ ಲಿಂಕ್ ಬಾರದೆ ಇರಲು ಮುಖೇಶ್ ಅಂಬಾನಿ ಕಾರಣ ಎಂದು ಆರೋಪ ಮಾಡಿದ್ದಾರೆ.
ಆದರೆ ಮುಕೇಶ್ ಅಂಬಾನಿ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಕಳೆದ ಕೆಲವು ವರ್ಷಗಳಿಂದ 'ಜಿಯೋ' ಮೂಲಕ ಭಾರತದ ಮೂಲೆ ಮೂಲೆಗೂ ಅಗ್ಗದ ದರದಲ್ಲಿ ಇಂಟರ್ನೆಟ್ ತಲುಪಿಸಿ ಇಡೀ ಮಾರುಕಟ್ಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈಗ ಮಸ್ಕ್ ಬಂದು ಆ ಜಾಗವನ್ನು ಕಬಳಿಸಿದರೆ ತಮ್ಮ ಜಿಯೋ ಸಾಮ್ರಾಜ್ಯಕ್ಕೆ ಧಕ್ಕೆಯಾಗಬಹುದು ಎಂಬ ಚಿಂತೆ ಅಂಬಾನಿಯವರದ್ದು. ಹೀಗಾಗಿ ಮಸ್ಕ್ ಸರಳವಾಗಿ ಒಳಬರದಂತೆ ತಡೆಯಲು ತಮ್ಮದೇ ಆದ ಉದ್ಯಮ ತಂತ್ರಗಳನ್ನು ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಇಲಾನ್ ಮಸ್ಕ್ ಅವರ ಆರೋಪಗಳಿಗೆ ಭಾರತದ ದೂರಸಂಪರ್ಕ ಸಚಿವಾಲಯ ಪ್ರತ್ಯುತ್ತರ ನೀಡಿದೆ. ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಯಾರದ್ದೇ ಏಕಸ್ವಾಮ್ಯಕ್ಕೂ ಅವಕಾಶವಿಲ್ಲ, ಹಾಗೆಯೇ ಯಾವುದೇ ಕಂಪನಿಯ ವಿರುದ್ಧ ತಾರತಮ್ಯವನ್ನೂ ಮಾಡುತ್ತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ಮಸ್ಕ್ ಅವರ ಸ್ಟಾರ್ಲಿಂಕ್, ಅಂಬಾನಿಯವರ ಜಿಯೋ ಹಾಗೂ ಭಾರ್ತಿ ಏರ್ಟೆಲ್ನ ಒನ್ವೆಬ್ ಮೂರೂ ಕಂಪನಿಗಳು ಒಂದೇ ಹಂತದಲ್ಲಿವೆ. ಕೇಂದ್ರ ಗೃಹ ಸಚಿವಾಲಯದಿಂದ ರಾಷ್ಟ್ರೀಯ ಭದ್ರತಾ ಮಂಜೂರಾತಿ ಸಿಕ್ಕ ತಕ್ಷಣ, ನಿಯಮಾನುಸಾರ ಎಲ್ಲರಿಗೂ ಸಮಾನ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಸ್ಟಾರ್ ಲಿಂಕ್ ಅಂದ್ರೆ ಏನು..? ಅದರ ಅನುಕೂಲಗಳು ಏನಾಂದ್ರೆ..?
ಸಾಂಪ್ರದಾಯಿಕ ಉಪಗ್ರಹಗಳು ಭೂಮಿಯಿಂದ 35,000 ಕಿ.ಮೀ ದೂರದಲ್ಲಿದ್ದರೆ, ಮಸ್ಕ್ ಅವರ ಸ್ಟಾರ್ಲಿಂಕ್ ಸ್ಯಾಟಲೈಟ್ಗಳು ಕೇವಲ 550 ಕಿ.ಮೀ ಎತ್ತರದಲ್ಲಿರುತ್ತವೆ. ಇದರಿಂದಾಗಿ ಇಂಟರ್ನೆಟ್ ಸಿಗ್ನಲ್ಗಳು ತಕ್ಷಣ ತಲುಪಿ, ಡೇಟಾ ಲೇಟೆನ್ಸಿ ಕಡಿಮೆಯಿರುತ್ತದೆ. ಹಾಗಾಗಿ ಆನ್ಲೈನ್ ಗೇಮಿಂಗ್ ಮತ್ತು ವೀಡಿಯೊ ಕಾಲಿಂಗ್ಗೆ ಇದು ಅತ್ಯುತ್ತಮ. ಕಾಡು, ಬೆಟ್ಟ, ಸಮುದ್ರ ಅಥವಾ ಹಳ್ಳಿಗಳಲ್ಲೂ ಯಾವುದೇ ಅಡೆತಡೆಯಿಲ್ಲದೆ 100 ರಿಂದ 200 Mbps ವೇಗದ ಇಂಟರ್ನೆಟ್ ಸಿಗುತ್ತದೆ.
ಇದರ ಸೆಟಪ್ ಕೂಡ ತುಂಬಾ ಸರಳ, ಯಾವುದೇ ವೈರಿಂಗ್ ಅಥವಾ ಇಂಜಿನಿಯರ್ಗಳ ಅಗತ್ಯವಿಲ್ಲದೆ, ನೀಡಲಾದ ಡಿಶ್ ಸ್ವಯಂಚಾಲಿತವಾಗಿ ಸ್ಯಾಟಲೈಟ್ಗೆ ಕನೆಕ್ಟ್ ಆಗುತ್ತದೆ. ಪ್ರವಾಹ ಅಥವಾ ಚಂಡಮಾರುತದಂತಹ ತುರ್ತು ಸಮಯದಲ್ಲಿ ಮೊಬೈಲ್ ಟವರ್ಗಳು ಬಿದ್ದರೂ ಇದು ತಡೆರಹಿತವಾಗಿ ಕೆಲಸ ಮಾಡುತ್ತದೆ. ಜೊತೆಗೆ ಪ್ರಯಾಣಿಸುವಾಗ ಕಾರು, ಹಡಗು ಹಾಗೂ ವಿಮಾನಗಳಲ್ಲೂ ಇದನ್ನು ಬಳಸಬಹುದು. ಸ್ಟಾರ್ ಲಿಂಕ್'ಯಿಂದ ಇಷ್ಟೆಲ್ಲಾ ಸೌಲಭ್ಯ ಸಿಗಬಹುದು ಆದ್ರೆ ಇದು ಸಾಮಾನ್ಯ ಜನರ ಕೈಗೆ ಎಟುಕುವಂತೆ ಇದ್ಯಾ..? ಅಥವಾ ದುಬಾರಿಯಾಗಿದ್ಯಾ..? ಅಂತ ನೋಡೋದಾದ್ರೆ
ಸ್ಟಾರ್ಲಿಂಕ್ ಮತ್ತು ರಿಲಯನ್ಸ್ ಜಿಯೋ ಇಂಟರ್ನೆಟ್ ಸೇವೆಗಳ ದರ ಹಾಗೂ ಖರ್ಚಿನ ನಡುವೆ ಬಹಳ ದೊಡ್ಡ ವ್ಯತ್ಯಾಸವಿದೆ.
ಜಿಯೋದ ಹೋಮ್ ಬ್ರಾಂಡ್ಬ್ಯಾಂಡ್ ಅಥವಾ ಏರ್ಫೈರ್ ಸೆಟಪ್ ಮಾಡಲು ಆರಂಭಿಕ ಖರ್ಚು ತುಂಬಾ ಕಡಿಮೆ. ಇದರ ರೂಟರ್ ಅಥವಾ ಡಿವೈಸ್ ಉಚಿತವಾಗಿ ಅಥವಾ ಕಡಿಮೆ ಅಡ್ವಾನ್ಸ್ ಶುಲ್ಕದೊಂದಿಗೆ ಸಿಗುತ್ತದೆ. ಸ್ಟಾರ್ಲಿಂಕ್ ಸೇವೆಯನ್ನು ಪಡೆಯಲು ಗ್ರಾಹಕರು ಮೊದಲು ಬಾಹ್ಯಾಕಾಶದ ಸಿಗ್ನಲ್ ಪಡೆಯಲು ಪ್ರತ್ಯೇಕವಾದ ಡಿಶ್ ಕಿಟ್ ಅನ್ನು ಖರೀದಿಸಬೇಕು. ಇದರ ಆರಂಭಿಕ ಹಾರ್ಡ್ವೇರ್ ಬೆಲೆ ಅಂದಾಜು 30,000 ದಿಂದ 34,000 ಅಥವಾ ಅದಕ್ಕಿಂತ ಹೆಚ್ಚಿರಬಹುದು.
ಭಾರತದಲ್ಲಿ ಜಿಯೋ ಕಡಿಮೆ ಬೆಲೆಗೆ ಇಂಟರ್ನೆಟ್ ನೀಡಲು ಹೆಸರುವಾಸಿಯಾಗಿದೆ. ಜಿಯೋದ ಮಾಸಿಕ ಪ್ಲಾನ್ಗಳು ಕೇವಲ 399 ರಿಂದ ಆರಂಭವಾಗಿ 1,500 ಒಳಗಡೆ ಉತ್ತಮ ವೇಗದ ಅನ್ಲಿಮಿಟೆಡ್ ಡೇಟಾ ನೀಡುತ್ತವೆ. ಉಪಗ್ರಹ ತಂತ್ರಜ್ಞಾನ ಹಾಗೂ ಜಾಗತಿಕ ವೆಚ್ಚದ ಕಾರಣದಿಂದ ಸ್ಟಾರ್ಲಿಂಕ್ ಮಾಸಿಕ ಚಂದಾ ಶುಲ್ಕವು ತುಂಬಾ ದುಬಾರಿಯಿರಲಿದೆ. ಇದರ ಮಾಸಿಕ ಪ್ಲಾನ್ ಅಂದಾಜು 3,000 ದಿಂದ 8,600 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವಿರಬಹುದು ಎಂದು ಅಂದಾಜಿಸಲಾಗಿದೆ. ಮುಖೇಶ್ ಅಂಬಾನಿಯಂತೆ ಮೊದಲು ನೆಟ್ ವರ್ಕ್ ಬೆಳೆಸಲು ಕಡಿಮೆ ದರದಲ್ಲಿ ಕೊಟ್ಟು, ನಂತರ ಬೆಲೆ ಹೆಚ್ಚಿಸಬಹುದು.
ಸಾಮಾನ್ಯ ನಗರ ಪ್ರದೇಶಗಳು ಮತ್ತು ಮನೆಗಳ ಬಳಕೆಗೆ ಜಿಯೋ ಅಗ್ಗದ ಆಯ್ಕೆಯಾಗಿದೆ (ತಿಂಗಳಿಗೆ ಕೆಲವೇ ನೂರು ರೂಪಾಯಿಗಳು). ಆದರೆ ಸ್ಟಾರ್ಲಿಂಕ್ ಆರಂಭಿಕ ಹಾರ್ಡ್ವೇರ್ಗೆ ದೊಡ್ಡ ಮೊತ್ತವನ್ನು ಹಾಗೂ ಪ್ರತಿ ತಿಂಗಳು ಹೆಚ್ಚಿನ ಚಂದಾ ಶುಲ್ಕವನ್ನು ಬಯಸುವುದರಿಂದ, ಇದು ಸಾಮಾನ್ಯವಾಗಿ ದುಬಾರಿಯಾಗಿದೆ. ಹಾಗಾಗಿ ಫೈಬರ್ ಅಥವಾ ಮೊಬೈಲ್ ನೆಟ್ವರ್ಕ್ ಸಿಗದ ದೂರದ ಕಾಡು, ಬೆಟ್ಟ ಅಥವಾ ತುರ್ತು ವಲಯಗಳ ವ್ಯಾಪಾರ ಹಾಗೂ ಸಂಸ್ಥೆಗಳಿಗೆ ಮಾತ್ರ ಇದು ಹೆಚ್ಚು ಸೂಕ್ತವಾಗಿದೆ.
ಈ ಇಬ್ಬರು ಜಾಗತಿಕ ಉದ್ಯಮಿಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ಒಂದು ದೊಡ್ಡ ಸವಾಲು ಎದುರಾಗಿದೆ. ಒಂದೆಡೆ ಮಸ್ಕ್ ಅವರಂತಹ ದೊಡ್ಡ ಹೂಡಿಕೆದಾರರನ್ನು ಭಾರತಕ್ಕೆ ಕರೆತಂದು, ತಂತ್ರಜ್ಞಾನ ವಲಯದಲ್ಲಿ ದೇಶವನ್ನು ಮುಂಚೂಣಿಯಲ್ಲಿಡುವುದು ಸರ್ಕಾರದ ಆಸೆ. ಇನ್ನೊಂದೆಡೆ ದೇಶದ ಭದ್ರತೆ, ಖಾಸಗಿ ದತ್ತಾಂಶದ ರಕ್ಷಣೆ ಮತ್ತು ದೇಶೀಯ ಉದ್ಯಮಿಗಳ ಹಿತಾಸಕ್ತಿ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಇದು ಕೇವಲ ಇಂಟರ್ನೆಟ್ ಸೇವೆಯ ವಿಷಯವಲ್ಲ, ಉದ್ಯಮದ ಲಾಭ, ಮಾರುಕಟ್ಟೆಯ ಮೇಲಿನ ಹಿಡಿತ ಮತ್ತು ದೇಶದ ಭದ್ರತಾ ನಿಯಮಗಳ ನಡುವೆ ನಡೆಯುತ್ತಿರುವ ದೊಡ್ಡ ಮಟ್ಟದ ತಂತ್ರಗಾರಿಕೆಯ ಆಟವಾಗಿದೆ. ಮುಂದಿನ ದಿನಗಳಲ್ಲಿ ಈ 'ಉಪಗ್ರಹ ಇಂಟರ್ನೆಟ್ ಸಮರ' ಯಾರ ಪರವಾಗಿ ತಿರುಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


