ದುರ್ಗಾದೇವಿಯ ಈ ಅವತಾರದಲ್ಲಿರುವ ಈ ಕೂಷ್ಮಾಂಡ ದೇವಿಯನ್ನ ಶ್ರದ್ಧಾ ಭಕ್ತಿಯಿಂದ ಆರಾಧನೆ ಮಾಡಿದರೆ ಭಕ್ತರು ಸೂರ್ಯನಂತಹ ಪ್ರಕಾಶವನ್ನು ಪಡೆಯುತ್ತಾರೆ ಅಂತ ನಂಬಲಾಗಿದೆ. ಅಲ್ಲದೇ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವಂತೆ. ಇನ್ನು ಈ ತಾಯಿಯು ನೋಡಲು ಹೇಗಿದ್ದಾಳೆ.. ಅನ್ನೋದನ್ನ ನಾವು ತಿಳಿಸಿಕೊಡ್ತೀವಿ. ಕೂಷ್ಮಾಂಡ ದೇವಿಯು ಸಿಂಹದ ಮೇಲೇರಿ ಸವಾರಿ ಮಾಡುತ್ತಾಳೆ. ಈಕೆ 8 ತೋಳುಗಳನ್ನ ಹೊಂದಿದ್ದಾಳೆ. ಹಾಗೂ ತನ್ನ ಎಲ್ಲಾ ಕೈಗಳಲ್ಲಿ ಕಮಲದ ಹೂವುಗಳು, ಅಮೃತ ತುಂಬಿದ ಮಡಕೆ, ಕಮಂಡಲ ಮತ್ತು ಬಿಲ್ಲು, ಬಾಣ ಮತ್ತು ಗದೆ ಸೇರಿದಂತೆ ಅನೇಕ ಆಯುಧಗಳನ್ನು ಹೊಂದಿದ್ದಾಳೆ. ಆದರೆ ಎಂಟನೇ ಕೈಯಲ್ಲಿ ಎಲ್ಲಾ ಸಾಧನೆಗಳು ಮತ್ತು ಸಂಪತ್ತನ್ನು ನೀಡುವ ಜಪಮಾಲೆಯನ್ನ ಹಿಡಿದುಕೊಂಡಿದ್ದಾಳೆ. ತಾಯಿ ಕಮಂಡಲವನ್ನು ತುಂಬಾನೇ ಇಷ್ಟಪಡುತ್ತಾಳೆ. ಇದ್ರಿಂದ ಯಾವಾಗಲೂ ಅದನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿರುತ್ತಾಳೆ. ಈ ಕಾರಣಕ್ಕಾಗಿ ಆಕೆಯನ್ನು ಕೂಷ್ಮಾಂಡ ದೇವಿಯೆಂದು ಕರೆಯಲಾಗುತ್ತೆ.
ಇನ್ನೂ ಹೇಳಬೇಕು ಎಂದರೆ ಕೂಷ್ಮಾಂಡವೆಂದರೆ ಬೂದುಗುಂಬಳಕಾಯಿ ಅಂತ ಅರ್ಥ. ಇದಕ್ಕೆ ಬ್ರಹ್ಮಾಂಡಾ ಅನ್ನುವ ಅರ್ಥವೂ ಇದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಬೂದುಗುಂಬಳಕಾಯಿ ಜ್ಞಾನವರ್ಧಕ, ತೇಜೋವರ್ಧಕವಾಗಿದೆ. ಸಕಲ ತಾಪವನ್ನ ನಿವಾರಣೆ ಮಾಡಿ ದೇಹಕ್ಕೆ ತಂಪೆರೆವ ಶಾಕಾಹಾರ. ಕೂಷ್ಮಾಂಡ ಪದದಲ್ಲಿ ಕು ಅಂದ್ರೆ ಚಿಕ್ಕದು, ಉಷ್ಮ ಅಂದ್ರೆ ಶಕ್ತಿ ಮತ್ತು ಅಂಡ ಅಂದ್ರೆ ಭ್ರೂಣ ಅಂತ ಅರ್ಥ.. ಸರಳವಾಗಿ ಹೇಳುವುದಾದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯಶಕ್ತಿಯನ್ನೇ ತನ್ನ ಒಡಲಿನಲ್ಲಿ ಇಟ್ಟುಕೊಂಡವಳು ಎಂದು. ತಾಯಿ ಕೂಷ್ಮಾಂಡಳು ತನ್ನ ನಗುವಿನಿಂದ ಅಂಧಕಾರವನ್ನ ತೊಡೆದುಹಾಕುವ ಶಕ್ತಿ ದೇವತೆಯಾಗಿದ್ದಾಳೆ. ಈಕೆಗೆ ಎಂಟು ಕೈಗಳು ಇರೋದ್ರಿಂದ ಅಷ್ಟಭುಜ ದೇವಿ ಅಂತಾನೂ ಕರೆಯುತ್ತಾರೆ.
ಕೂಷ್ಮಾಂಡ ದೇವಿಯ ಆರಾಧನೆ ಹೇಗೆ.?
ನವರಾತ್ರಿ ಹಬ್ಬದ ನಾಲ್ಕನೇ ದಿನದಂದು ಸ್ನಾನ ಇತ್ಯಾದಿಗಳನ್ನು ಮಾಡಿ ಶುದ್ಧರಾಗಬೇಕು. ಬಳಿಕ ದುರ್ಗಾ ದೇವಿಯ ಕೂಷ್ಮಾಂಡ ರೂಪಕ್ಕೆ ಧೂಪ, ದೀಪ, ಅಕ್ಷತೆ, ಕೆಂಪು ಹೂವುಗಳು, ಬಿಳಿ ಕುಂಬಳಕಾಯಿ, ಹಣ್ಣುಗಳು ಮತ್ತು ಒಣ ಹಣ್ಣುಗಳು ಇತ್ಯಾದಿಗಳನ್ನು ಅರ್ಪಿಸಬೇಕು. ಇದಾದ ಬಳಿಕ ತಾಯಿ ಕೂಷ್ಮಾಂಡಾಳಿಗೆ ಹಲ್ವಾ, ಮಾಲ್ಪುವಾ ಮತ್ತು ಮೊಸರನ್ನು ನೈವೇದ್ಯವಾಗಿ ಇಡಬೇಕು. ಇನ್ನು ಕೂಷ್ಮಾಂಡಾ ದೇವಿಯ ಪೂಜೆಗೆ ಕೆಂಪು ಬಣ್ಣದ ಹೂಗಳನ್ನು ಬಳಸಿದರೆ ತುಂಬಾ ಒಳ್ಳೆಯದು. ಕೂಷ್ಮಾಂಡಾ ದೇವಿಯ ಕಾಂತಿಯುತ ರೂಪದ ಬಗ್ಗೆ ಚಿಂತಿಸಿ ಮತ್ತು ಶೋಡಷಚೋಪಚಾರ ಪೂಜೆ ಮಾಡಿ ಕುಟುಂಬದ ಸಮೃದ್ಧಿ ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಕೊಡು ತಾಯಿ ಅಂತ ಕೇಳಿಕೊಳ್ಳಬೇಕು.ಕೊನೆಯಲ್ಲಿ ಕೂಷ್ಮಾಂಡ ದೇವಿಯನ್ನು ಮತ್ತೊಮ್ಮೆ ಪ್ರಾರ್ಥಿಸಿ ಆರತಿ ಬೆಳಗಬೇಕು . ಯಾರು ಕೂಷ್ಮಾಂಡಾ ದೇವಿಯನ್ನು ಆರಾಧಿಸುತ್ತಾರೋ ಅಂಥವರ ಋಣ, ದಾರಿದ್ರ್ಯ, ರೋಗ, ಶೋಕಗಳು ದೂರವಾಗುತ್ತವೆ. ಆಯುಷ್ಯ, ಯಶಸ್ಸು, ಬಲ ಮತ್ತು ಆರೋಗ್ಯದ ವೃದ್ಧಿ ಆಗುತ್ತದೆ. ವ್ಯಾಧಿ- ಬಾಧೆಗಳಿಂದ ದೂರವಾಗುತ್ತೆ.
ಇನ್ನು ಪೂಜೆಯ ವೇಳೆ ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಂ ಯಸಾಃ ಸಾ ಕೂಷ್ಮಾಂಡಾ ಅನ್ನೋ ಮಂತ್ರವನ್ನ ಪಠಣ ಮಾಡ್ಬೇಕು. ಮತ್ತೊಂದು ವಿಚಾರ ಎಂದರೆ ಈಕೆಯೇ ಸೃಷ್ಟಿಯ ಆದಿ-ಸ್ವರೂಪ ಶಕ್ತಿಯಾಗಿದ್ದಾಳೆ. ಸಾಧ್ಯವಾದರೆ ಈ ದಿನಒಳ್ಳೆಯ ಮನಸ್ಸಿನ ಸ್ತ್ರೀಯರನ್ನ ಕರೆದು ಊಟ ಬಡಿಸಬೇಕು. ಮೊಸರು, ಹಲ್ವಾ, ಹಣ್ಣು ಸೇರಿದಂತೆ ಸಿಹಿ ಊಟ ಬಡಿಸಿ. ಒಣ ಹಣ್ಣುಗಳನ್ನು ತಿನ್ನಲು ನೀಡ್ಬೇಕು. ಆ ಮಹಿಳೆಯರು ಊಟದಿಂದ ಎಷ್ಟು ಖುಷಿ ಪಡುತ್ತಾರೋ ಅಷ್ಟೇ ಒಳ್ಳೆಯದಾಗುತ್ತೆ ಅಂತ ಧರ್ಮಗ್ರಂಥಗಳು ಹೇಳಿತ್ವೆ. ಈ ದಿನ ಕೇಸರಿ ಬಣ್ಣಕ್ಕೆ ಮಹತ್ವ ನೀಡ್ಲಾಗಿದೆ. ಇದು ಕೂಷ್ಮಾಂಡ ದೇವಿಗೆ ಪ್ರಿಯವಾದುದು.
ಯಾರು ಈ ಕೂಷ್ಮಾಂಡ ದೇವಿ.?
ಕೂಷ್ಮಾಂಡಾ ದೇವಿಯನ್ನು ಆದಿಶಕ್ತಿಯೆಂದು ಕರೆಯಲಾಗುವುದು. ಯಾಕೆಂದರೆ ಭೂಮಿಯ ಸೃಷ್ಟಿಕರ್ತೆಯೇ ಈಕೆ ಎನ್ನಲಾಗುತ್ತೆ. ಈಕೆಯು ಸೂರ್ಯದೇವರ ವಾಸಸ್ಥಾನದಲ್ಲಿ ಇರೋದ್ರಿಂದ ಭೂಮಿ ಮೇಲಿರುವ ಎಲ್ಲಾ ಅಂಧಕಾರವನ್ನ ನಿವಾರಣೆ ಮಾಡುವಳು. ಕೂಷ್ಮಾಂಡಾ ದೇವಿಯು ಮೊದಲ ಮೊಟ್ಟೆಯನ್ನ ಸೃಷ್ಟಿಸಿ, ಅದರಿಂದ ಸಂಪೂರ್ಣ ಜೀವಸಂಕುಲಗಳಿಗೆ ಜೀವ ನೀಡಿದಳು ಅನ್ನೋ ಕಥೆ ಇದೆ. ಈ ದೇವಿಯು ಸೂರ್ಯನಿಗೆ ಬೆಳಕು ನೀಡುವಳು. ಆಕೆಯ ನಗು ಜೀವನದಲ್ಲಿ ಧನಾತ್ಮಕತೆ ಉಂಟು ಮಾಡಿ, ಶಕ್ತಿ ನೀಡಿ ಎಲ್ಲಾ ರೀತಿಯಿಂದಲೂ ಒಳ್ಳೆಯದನ್ನ ಮಾಡ್ತಾಳೆ. ಕೂಷ್ಮಾಂಡಾ ದೇವಿಯು ಸೂರ್ಯ ದೇವನಿಗೆ ಬೆಳಕನ್ನ ನೀಡ್ತಾಳೆ.
ಈ ತಾಯಿಯ ಪೂಜೆಯಿಂದ ಸಿಗುವ ಫಲವೇನು.?
ಈಕೆ ಸೂರ್ಯನಿಗೂ ಅಧಿಪತಿಯಾಗಿಕೋ ಕಾರಣದಿಂದ ಕೂಷ್ಮಾಂಡಾ ದೇವಿಯನ್ನ ಪೂಜಿಸಿದ್ರೆ ನಿಮ್ಮ ಜಾತಕದಲ್ಲಿ ಸೂರ್ಯನಿಂದಾಗಿರುವ ಕೆಡುಕು ನಿವಾರಣೆ ಆಗುತ್ತೆ. ಇದರೊಂದಿಗೆ ಕೂಷ್ಮಾಂಡಾ ದೇವಿಯ ಪೂಜಿಸುವ ಜನರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಮತ್ತು ಸಮಾಜದಲ್ಲಿ ಪ್ರಸಿದ್ಧಿ ಪಡೆಯುತ್ತಾರೆ ಅಂತಾನೂ ಹೇಳಲಾಗುತ್ತೆ. ಹೀಗೆ ನವರಾತ್ರಿಯ ನಾಲ್ಕನೇ ದಿನವಾದ ಇವತ್ತು ಕೂಷ್ಮಾಂಡ ದೇವಿಯನ್ನ ಪೂಜಿಸಿ ಆಕೆಯ ಅನುಗ್ರಹಕ್ಕೆ ಪಾತ್ರರಾಗಿ. ನಾಳೆ ನವರಾತ್ರಿಯ ಐದನೇ ದಿನದ ಬಗ್ಗೆ ಮಾತಾಡೋಣ.


