ಅಕ್ಟೋಬರ್ 12 ರಂದು ಸುಪ್ರೀಂ ಕೋರ್ಟ್ ಕಡೆಗೆ ಪ್ರತಿಭಟನೆ ಸಾಗುತ್ತಿದ್ದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಿಳಾ ಪತ್ರಕರ್ತೆಯೊಬ್ಬರನ್ನು ನೂಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆ ಪರ್ತಕರ್ತೆ ಆಸ್ಪತ್ರೆಗೂ ದಾಖಲಾಗಿದ್ದರು. ಕೆಲ ಬಿಜೆಪಿ ನಾಯಕರು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್ ಇವತ್ತು ರಾಹುಲ್ ಗಾಂಧಿ ಸೇರಿ ಮತ್ತಿತರಿಂದ ಪ್ರತಿಕ್ರಿಯೆ ಕೇಳಿದೆ.

ಹಿರಿಯ ವಕೀಲ ಗೌರವ್ ಭಾಟಿಯಾ ಈ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದ ನಂತರ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ, ರಾಹುಲ್ ಗಾಂಧಿ ಮತ್ತಿತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ಆವರಣದಲ್ಲಿ ಮಹಿಳಾ ಪತ್ರಕರ್ತೆಯೊಬ್ಬರನ್ನು ತಳ್ಳಲಾಗಿದೆ ಎಂದು ಭಾಟಿಯಾ ನ್ಯಾಯಪೀಠಕ್ಕೆ ತಿಳಿಸಿದರು.ಇದರ ಕುರಿತಂತೆ ಈಗಾಗಲೇ ಬಾಕಿ ಇರುವ ಅರ್ಜಿಯೊಂದರಲ್ಲಿ ಹೊಸದಾಗಿ ಮನವಿಯೊಂದನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವುದು ಏನೆಂದರೆ, ರಾಹುಲ್ ಗಾಂಧಿ ಅವರು ಪತ್ರಕರ್ತೆಯನ್ನು ಗೇಟ್ನತ್ತ ಬಲವಾಗಿ ತಳ್ಳಿದರು.ಇದರ ಪರಿಣಾಮ ಅವರು ಸಮತೋಲನ ಕಳೆದುಕೊಂಡು ಬಿದ್ದುರು. ಬೀಳುವಾಗ ತಮ್ಮ ಕೈಗಳನ್ನು ಊರಿ ತಡೆಹಿಡಿದುಕೊಂಡರು. ಭದ್ರತಾ ಸಿಬ್ಬಂದಿ, ಪತ್ರಕರ್ತರು ಮತ್ತಿತರರು ಇರುವಾಗಲೇ ಇದು ನಡೆದಿದೆ ಎಂದು ಹೇಳಲಾಗಿದೆ. ಈ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ರಾಹುಲ್ ಗಾಂಧಿ ಮತ್ತಿತರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಹಾಗೂ ಪರಿಹಾರ ಒದಗಿಸುವಂತೆ ಈ ಅರ್ಜಿಯಲ್ಲಿ ಕೋರಲಾಗಿದೆ.

ಅಕ್ಟೋಬರ್ 16 ರಂದೇ ಭಾಟಿಯಾ ಈ ವಿಷಯವನ್ನು ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದ್ದರು. ಸುಪ್ರೀಂ ಕೋರ್ಟ್ ಆವರಣದಲ್ಲಿ ರಾಹುಲ್ ಗಾಂಧಿ ತಳ್ಳಿದ ಪರಿಣಾಮ ಮೂರು ತಿಂಗಳ ಗರ್ಭಿಣಿಯಾಗಿದ್ದ ಪತ್ರಕರ್ತೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ನ್ಯಾಯಾಲಯವನ್ನು ಕೋರಿದ್ದರು. ಇದರ ಅನ್ವಯ ಇವತ್ತು ಸುಪ್ರೀಕೋರ್ಟ್ ರಾಹುಲ್ ಗಾಂಧಿಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.