ಕೃತಕ ಬುದ್ಧಿಮತ್ತೆ ಮೂಲಸೌಕರ್ಯಗಳ ಮೇಲೆ ಭಾರಿ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿರುವ ಟೆಕ್ ದೈತ್ಯ ಮೈಕ್ರೋಸಾಫ್ಟ್, ವೆಚ್ಚ ನಿಯಂತ್ರಣದ ಭಾಗವಾಗಿ ತನ್ನ ಅರ್ಹ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಯೋಜನೆ (Voluntary Buyout Programme) ಪ್ರಕಟಿಸಿದೆ. ಭಾರತ, ಅಮೆರಿಕ, ಬ್ರಿಟನ್ ಮತ್ತು ಕೆನಡಾದಲ್ಲಿನ ಆಯ್ದ ಉದ್ಯೋಗಿಗಳಿಗೆ ಈ ಅವಕಾಶ ಲಭ್ಯವಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಯಾವ ಉದ್ಯೋಗಿಗಳಿಗೆ ಅವಕಾಶ?

ಮೈಕ್ರೋಸಾಫ್ಟ್ನ ಲೆವೆಲ್ 70 ಮತ್ತು ಅದಕ್ಕಿಂತ ಕೆಳಗಿನ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಸಿಬ್ಬಂದಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಎಐ ಎಕ್ಸ್‌ಪೀರಿಯನ್ಸಸ್, ಕೊಪೈಲಟ್, ಹಣಕಾಸು, ಮಾನವ ಸಂಪನ್ಮೂಲ, ಎಕ್ಸ್‌ಬಾಕ್ಸ್‌  ಹಾಗೂ ವಿಂಡೋಸ್ ಮತ್ತು ಡಿವೈಸಸ್ ವಿಭಾಗಗಳ ಉದ್ಯೋಗಿಗಳು ಇದರ ವ್ಯಾಪ್ತಿಗೆ ಬರಲಿದ್ದಾರೆ. ಆದರೆ ಮಾರ್ಕೆಟಿಂಗ್, ಕಮರ್ಷಿಯಲ್ ಬಿಸಿನೆಸ್ ಮತ್ತು ಸೆಕ್ಯುರಿಟಿ ತಂಡಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯ ಜಾಗತಿಕ ಉದ್ಯೋಗಿಗಳಲ್ಲಿ ಸುಮಾರು 60,000 ಮಂದಿಗೆ ಈ ಯೋಜನೆ ಅನ್ವಯಿಸುವ ಸಾಧ್ಯತೆಯಿದೆ. ಆದರೆ ಅಷ್ಟೂ ಉದ್ಯೋಗಿಗಳು ಸಂಸ್ಥೆಯಿಂದ ನಿರ್ಗಮಿಸಲಿದ್ದಾರೆ ಎಂದರ್ಥವಲ್ಲ. ಇದು ಸ್ವಯಂಪ್ರೇರಿತ ಯೋಜನೆಯಾಗಿದ್ದು, ಅರ್ಹ ಉದ್ಯೋಗಿಗಳು ತಮ್ಮ ಇಚ್ಛೆಯ ಮೇರೆಗೆ ನಿರ್ಧಾರ ಕೈಗೊಳ್ಳಬಹುದು.

ಮೈಕ್ರೋಸಾಫ್ಟ್ 2026ರಲ್ಲಿ ಡೇಟಾ ಸೆಂಟರ್ಗಳು ಮತ್ತು ಎಐ ಚಿಪ್‌ಗಳ ಮೂಲಸೌಕರ್ಯಕ್ಕಾಗಿ ಸುಮಾರು 175 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಹೆಚ್ಚುತ್ತಿರುವ ತಂತ್ರಜ್ಞಾನ ವೆಚ್ಚದ ನಡುವೆ ಕಾರ್ಯಪಡೆಯನ್ನು ಮರುಹೊಂದಿಸುವುದು ಕಂಪನಿಯ ಉದ್ದೇಶವಾಗಿದೆ.

ಮುಖ್ಯ ಸಿಬ್ಬಂದಿ ಅಧಿಕಾರಿ ಎಮಿ ಕೋಲ್ಮನ್ ಅವರ ಆಂತರಿಕ ಸಂದೇಶದ ಪ್ರಕಾರ, ಸಂಸ್ಥೆಯ ಹೊರಗೆ ಹೊಸ ವೃತ್ತಿಜೀವನ ಹುಡುಕಲು ಬಯಸುವ ಉದ್ಯೋಗಿಗಳಿಗೆ ಗೌರವಯುತ ನಿರ್ಗಮನದ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಹಿಂದೆಯೂ ಉದ್ಯೋಗ ಕಡಿತ

ಮೈಕ್ರೋಸಾಫ್ಟ್ ಈ ಹಿಂದೆ ಅಮೆರಿಕದಲ್ಲಿ ಸುಮಾರು 9,000 ಉದ್ಯೋಗಿಗಳಿಗೆ ಸ್ವಯಂ ನಿರ್ಗಮನದ ಅವಕಾಶ ನೀಡಿತ್ತು. ಜುಲೈನಲ್ಲಿ ಎಕ್ಸ್‌ಬಾಕ್ಸ್‌ ವಿಭಾಗದ ಪುನರ್ರಚನೆಯ ಭಾಗವಾಗಿ ಉದ್ಯೋಗ ಕಡಿತವನ್ನೂ ಕೈಗೊಂಡಿತ್ತು. ಒಟ್ನಲ್ಲಿ, ಎಐ ಕ್ಷೇತ್ರದಲ್ಲಿ ಬೃಹತ್ ಹೂಡಿಕೆ ಮಾಡುತ್ತಿರುವ ಮೈಕ್ರೋಸಾಫ್ಟ್ ವೆಚ್ಚ ನಿಯಂತ್ರಣಕ್ಕೂ ಆದ್ಯತೆ ನೀಡುತ್ತಿದೆ.