ಅಸ್ಸಾಂನ ರಾಜಧಾನಿ ಗುವಾಹಟಿಯ ಉಲುಬಾರಿ ಪ್ರದೇಶದ ಬೋರಾ ಸರ್ವಿಸ್ ಸಮೀಪವಿರುವ ಹೋಟೆಲ್ ಬಿಲಾಸ್ ಇನ್ ಬಳಿ ಬೆಚ್ಚಿ ಬೀಳಿಸುವ ಭೀಕರ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಹೋಟೆಲ್ ಮಾಲೀಕರಾದ ಹೆಲೆನಾ ಬರಾಲಿ ಮತ್ತು ಆಕೆಯ ಮಗ, ದೇಬರ್ಶಿ ಕಶ್ಯಪ್, ನಾರಾಯಣ್ ದಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಭಯಾನಕ ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಗೆ ಕಾರಣವಾದರೂ ಏನು.?
ಈ ಘಟನೆ ಬಳಿಕ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಿದರು. ಇದರ ಬಗ್ಗೆ ಪೊಲೀಸ್ ಆಯುಕ್ತ ಪಾರ್ಥಸಾರಥಿ ಮಹಂತ ಮಾಹಿತಿ ನೀಡಿದ್ದು ಅದರ ಪ್ರಕಾರ ರಾತ್ರಿ 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಹೋಟೆಲ್ ಗುತ್ತಿಗೆ ಒಪ್ಪಂದ ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕರ ಕಡೆಯವರು ಹಾಗೂ ಗುತ್ತಿಗೆ ಪಡೆದವರ ನಡುವಿನ ವಾಗ್ವಾದವೇ ಈ ದಾಳಿಗೆ ಕಾರಣ ಇರಬಹುದು ಎಂದಿದ್ದಾರೆ.
ಕೃತ್ಯ ನಡೆಸಿದ ಆರೋಪಿಯನ್ನು ಕೇವಲ ಒಂದು ಗಂಟೆ ಅಂತರದಲ್ಲೇ ಪೊಲೀಸರು ಬಂಧಿಸಿದ್ದು ಆತನನ್ನ ಘನಕಾಂತ ಗೊಗೊಯ್ ಎಂದು ಗುರುತಿಸಲಾಗಿದೆ. ಪೊಲೀಸರು ಕೃತ್ಯಕ್ಕೆ ಬಳಸಿದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಣ ಕಳೆದುಕೊಂಡಿರುವ ಐವರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮತ್ತೊಬ್ಬರು ಹಾಗೂ ಗಾಯಗೊಂಡಿರುವ ವ್ಯಕ್ತಿ ಅದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪೊಲೀಸರು ಈ ಘಟನೆಯ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಹೋಟೆಲ್ ಲೀಸ್ ಒಪ್ಪಂದದ ಹಿಂದಿನ ಒಳಸಂಚು ಮತ್ತು ವೈಯಕ್ತಿಕ ದ್ವೇಷದ ಆಯಾಮಗಳ ಬಗ್ಗೆಯೂ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

