ದೆಹಲಿ ಪೊಲೀಸರ ವಿರುದ್ಧ ಸಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಪತ್ರಕರ್ತೆಯರ ಆಕ್ರೋಶ ಹೆಚ್ಚಾಗಿದೆ.  ಇಲ್ಲಿ ವಿಪರ್ಯಾಸ ಎಂದರೆ ತಮ್ಮ ಮೇಲೆ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಆರೋಪಿಸುತ್ತಿರುವ ಮಹಿಳಾ  ಪತ್ರಕರ್ತರನ್ನೇ ಅವರು ವಶಕ್ಕೆ ಪಡೆದಿದ್ದಾರೆ. 
 
ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ಕಾರ್ಯಕರ್ತರ ಪ್ರತಿಭಟನೆ ಜೋರಾಗಿತ್ತು. ಆದರೆ ಅದನ್ನು ಹತ್ತಿಕ್ಕುವ ಪ್ರಯತ್ನ ದೆಹಲಿ ಪೊಲೀಸರಿಂದಲೂ ನಡೆಯಿತು.ಇದೇ ವೇಳೆ ಇದರ ವರದಿಗಾರಿಕೆಗೆ ತೆರೆಳಿದ್ದ ಮಹಿಳಾ ಪತ್ರಕರ್ತೆಯರ ಮೇಲೆ ಪೊಲೀಸರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ದೆಹಲಿ ಪೊಲೀಸ್ ಸಹಾಯಕ ಆಯುಕ್ತ ವಿವೇಕ್ ಭಗತ್ ವಿರುದ್ಧ ಈ ಆಪಾದನೆ ಮಾಡಲಾಗಿತ್ತು. ಇದೀಗ ಆರೋಪ ಮಾಡಿದ್ದ ಸ್ವತಂತ್ರ ಮಹಿಳಾ ಪತ್ರಕರ್ತೆ ಸೇರಿ 17 ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿತ ಎಸಿಪಿ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಮತ್ತು ತಕ್ಷಣ ಬಂಧಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಪತ್ರಕರ್ತರು ಮತ್ತು ಸಿಜೆಪಿ ಕಾರ್ಯಕರ್ತರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದರು.ಆದರೆ ಆರೋಪಿತ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸುವ ಬದಲಿಗೆ, ದೂರು ನೀಡಲು ಬಂದ ಪತ್ರಕರ್ತೆ ಮತ್ತು ಅವರ ಬೆಂಬಲಿಗರನ್ನೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಮತ್ತು ಕಾರ್ಯಕರ್ತರು ಜಂತರ್ ಮಂತರ್ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ ನಡೆದಿತ್ತು. ಈ ವೇಳೆ ಕನಿಷ್ಠ ಮೂವರು ಮಹಿಳಾ ಪತ್ರಕರ್ತೆಯರು ತಮಗೆ ಪೊಲೀಸರಿಂದ ಲೈಂಗಿಕ ಕಿರುಕುಳ, ಹಲ್ಲೆಯಾಗಿದೆ ಎಂದು ದೂರು ನೀಡಿದ್ದರು. ದೆಹಲಿ ಪೊಲೀಸರು ಈ ದೂರುಗಳನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ.

ಈ ಘಟನೆಯನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಖಂಡಿಸಿದ್ಗಾರೆ. ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಕಿರುಕುಳ ನೀಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಕಿಡಿಕಾರಿದ್ದಾರೆ.