2028ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದ್ದು ಭಾರತ್ ಜೋಡೋ 2.0 ಹಮ್ಮಿಕೊಂಡಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಈಗ ಮೈತ್ರಿಯ ಮಾತನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಮುಂಬರುವ ಎಲ್ಲಾ ಚುನಾವಣೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಒಗ್ಗಟ್ಟಾಗಿ ಎದುರಿಸಲು ಮುಂದಾಗಿವೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸುಳಿವು ನೀಡಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷದ ಅಭ್ಯರ್ಥಿ ಶಶಿಲ್ ನಮೋಶಿ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಇಂದು ಕಲಬುರಗಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಅವರು ಬದಲಾವಣೆ ಬಯಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಆಡಳಿತ ವೈಫಲ್ಯದಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಆರೋಪಿಸಿದರು
ಇನ್ನು ಒಂದು ವೇಳೆ ಮೈತ್ರಿ ಪಕ್ಷ ಗೆದ್ದರೆ ಮುಖ್ಯಮಂತ್ರಿ ಯಾರು ಎನ್ನುವುದು ಕೂಡಾ ಈಗಿನಿಂದಲೇ ಚರ್ಚೆಗೆ ಬರುತ್ತಿದೆ. ಇದರ ಬಗ್ಗೆಯೂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಂದಿನ ಸಿಎಂ ಅಭ್ಯರ್ಥಿ ಎನ್ನುವ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಅಧಿಕಾರಕ್ಕೆ ಬರಲಿ, ನಮ್ಮ ಗಮನವೆಲ್ಲ ಸದ್ಯಕ್ಕೆ ಆ ಕಡೆಯಿದೆ ಎಂದು ಹೇಳಿ ನುಣುಚಿಕೊಂಡರು. ವಿಧಾನಸಭೆ ಚುನಾವಣೆ ಬಳಿಕ ಯಾರು ಸಿಎಂ ಆಗಬೇಕು ಎಂಬುವುದರ ತೀರ್ಮಾನವಾಗುತ್ತದೆ. ಚುನಾವಣೆ ಬಳಿಕ ಯಾರು ಸಿಎಂ ಎಂಬುದು ಈಗಾಗಲೇ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಮೊದಲು ಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ಬಳಿ ಬಿಜೆಪಿ ಜೆಡಿಎಸ್ ಎರಡು ಒಂದೆ ಎಂಬ ಅಭಿಪ್ರಾಯವಿದೆ. ಸಿಎಂ ಯಾರಾಗಬೇಕು ಎನ್ನುವುದು ನಂತರ ತೀರ್ಮಾನವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು
ಮತ್ತೊಂದು ಕಡೆ 2028ಕ್ಕೂ ನಾನೇ ಸಿಎಂ ಎಂದು ಶಿವಕುಮಾರ್ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಡಿ.ಕೆ ಶಿವಕುಮಾರ್ ಭ್ರಮೆಯಲ್ಲಿದ್ದಾರೆ ಇರಲಿ, ಅವರ ಭ್ರಮೆಗೆ ನಮ್ಮ ಅಭ್ಯಂತರವೇನೂ ಇಲ್ಲ ಎಂದಿದ್ದಾರೆ. ಹಣ ಹೆಂಡ ಬಲದ ಮೇಲೆ ಚುನಾವಣೆಯಲ್ಲಿ ಗೆಲ್ಲುವ ಕಾಲ ಇದಲ್ಲ. ಕಾಂಗ್ರೆಸ್ ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು, ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದಕ್ಕೆ ಪಾಠ ಕಲಿಸಬೇಕು ಅಂದ್ರೆ ಈ ಚುನಾವಣೆಯಲ್ಲಿ ಸೊಲಿಸಬೇಕಿದೆ ಎಂದರು ಮುಂ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತೆವೆ ಎಂಬ ವಿಶ್ವಾಸ ತಮಗಿದೆ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು.


