2006ರಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ನಡೆದಿದ್ದ ಪ್ರಾಥಮಿಕ ವಿಜಿಲೆನ್ಸ್ ವಿಚಾರಣೆಗೆ ಸಂಬಂಧಿಸಿದ ಕಡತಗಳನ್ನು ಕೇರಳ ಗೃಹ ಇಲಾಖೆ ಇತ್ತೀಚೆಗೆ ಕೋರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆ ನಡೆಸುವಂತೆ ಕೆಪಿಸಿಸಿ ನಾಯಕ ಮಲಯಿಂಕೀಝು ವೇಣುಗೋಪಾಲ್ ದೂರು ಸಲ್ಲಿಸಿದ್ದರು. ಇದಾದ ಬಳಿಕ ಚೆನ್ನಿತ್ತಲ ಹೊಸದಾಗಿ ತನಿಖೆಗೆ ಆದೇಶಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಚೆನ್ವಿತ್ತಲ ತಾವು ಈ ದೂರನ್ನು ಪರಿಶೀಲಿಸಿದ್ದು, ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ ಎಂದು ಹೇಳಿದ್ದಾರೆ. ಇದರಿಂದ ವಿಸ್ತೃತ ಭ್ರಷ್ಟಾಚಾರ ನಿಗ್ರಹ ತನಿಖೆ ಅತ್ಯಗತ್ಯ ಎಂಬ ತೀರ್ಮಾನಕ್ಕೆ ಬರಲಾಗಿದೆ,. ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ ಬಳಿಕ, ಕಾನೂನುಬದ್ಧವಾದ ವಿಸ್ತೃತ ತನಿಖೆ ನಡೆಸುವಂತೆ ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣ ಕೇರಳ ರಾಜ್ಯ ಸಾರಿಗೆ ಯೋಜನೆ ಅಡಿಯಲ್ಲಿ ಬರುತ್ತದೆ. ಎಂಸಿ ರಸ್ತೆಯ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ PATI-BEL ಒಕ್ಕೂಟದೊಂದಿಗೆ ಕೆಲಸ ಮಾಡುತ್ತಿದ್ದ ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸೀ ಬೀನ್ ಅವರ ಆತ್ಮಹತ್ಯೆಗೆ ಸಂಬಂಧಿಸಿದ್ದಾಗಿದೆ. 2006ರಲ್ಲಿ ವಿಶ್ವಬ್ಯಾಂಕ್ ನೆರವಿನಿಂದ 215 ಕೋಟಿ ರೂ ವೆಚ್ಚದಲ್ಲಿ ಅಂಗಮಾಲಿ–ತಿರುವನಂತಪುರಂ ನಡುವಿನ ಎಂಸಿ ರಸ್ತೆಯ ಪುನರ್ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಮಲೇಷ್ಯಾದ ಕಂಪನಿ ಮತ್ತು ಭಾಗೀರಥ ಎಂಜಿನಿಯರಿಂಗ್ನ ಜಂಟಿ ಸಹಭಾಗಿತ್ವದ PATI-BEL ಸಂಸ್ಥೆ ಈ ಯೋಜನೆಯ ಕಾಮಗಾರಿಯನ್ನು ಕೈಗೊಂಡಿತ್ತು ಎಂದು ಚೆನ್ನಿತ್ತಲ ಹೇಳಿದರು. ಆದರೆ ಕಾಮಗಾರಿ ನಡೆಯುತ್ತಿದ್ದ ವೇಳೆ ಲೀ ಹಲವು ದೂರುಗಳನ್ನು ನೀಡಿದ್ದರು. ಬಳಿಕ ಮಲೇಷ್ಯಾಕ್ಕೆ ಮರಳಿದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸಚಿವರು ತಿಳಿಸಿದರು.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ಪ್ರಕಾರ ಜ್ಞಾನೇಶ್ ಕುಮಾರ್ PWD ಕಾರ್ಯದರ್ಶಿಯಾಗಿದ್ದ ವೇಳೆ ಗುತ್ತಿಗೆದಾರರಿಗೆ ಸಾರ್ವಜನಿಕ ಕಾಮಗಾರಿಗಳನ್ನು ವಹಿಸುವಲ್ಲಿ ಕ್ರಿಮಿನಲ್ ದುರ್ವರ್ತನೆ ಎಸಗಿದ್ದಾರೆ ಎಂಬ ಆರೋಪಗಳಿವೆ. ಈ ಹಿಂದೆ VACB ಈ ಆರೋಪಗಳ ಕುರಿತು ತನಿಖೆ ನಡೆಸಿತ್ತು. ಆದರೆ, ದೂರುದಾರರ ಪ್ರಕಾರ, ಆ ತನಿಖೆಗಳನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಆ ಸಮಯದಲ್ಲಿ ತಮ್ಮ ಪ್ರಭಾವ ಬಳಸಿಕೊಂಡು ಕುಮಾರ್ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಮರು ಜೀವ ಕೊಡಲಾಗಿದೆ. ಸದ್ಯ ತನಿಖೆ ನಿಷ್ಪಕ್ಷಪಾತವಾಗಿ ನಡೆದರೆ ಜ್ಞಾನೇಶ್ ಕುಮಾರ್ ಗೆ ತೊಂದರೆ ಪಕ್ಕಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

