ಜಪಾನ್ನ ಗಿಫು ಪ್ರಿಫೆಕ್ಚರಲ್ ಗ್ರೀನ್ ಅಂಕಣದಲ್ಲಿ ನಡೆದ ಈ ಹೈವೋಲ್ಟೇಜ್ ಕಾದಾಟದಲ್ಲಿ ಭಾರತ ಆರಂಭದಲ್ಲೇ ಪೂರ್ಣ ಹಿಡಿತ ಸಾಧಿಸಿತ್ತು. ಪಂದ್ಯದ 5 ಮತ್ತು 13ನೇ ನಿಮಿಷದಲ್ಲಿ ನಾಯಕ ಹರ್ಮನ್ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಎರಡು ಗೋಲು ಹಾಕಿ, 23ನೇ ನಿಮಿಷದಲ್ಲಿ ಸುಖ್ಜೀತ್ ಸಿಂಗ್ ಮತ್ತೊಂದು ಫೀಲ್ಡ್ ಗೋಲು ಸೇರಿಸಿ ತಂಡಕ್ಕೆ 3-0 ಅಂತರದ ಭರ್ಜರಿ ಮುನ್ನಡೆ ತಂದುಕೊಟ್ಟರು.
ಆದರೆ ಪಂದ್ಯ ಉಲ್ಟಾ ಆಗಿದ್ದು ದ್ವಿತೀಯಾರ್ಧದಲ್ಲಿ ಮೈಕೊಡವಿ ಎದ್ದುನಿಂತ ಪಾಕಿಸ್ತಾನಿ ಆಟಗಾರರು ಅಬು ಮಹಮೂದ್ (30), ಹನ್ನಾನ್ ಶಾಹಿದ್ (45) ಮತ್ತು ವಾಹೀದ್ ರಾಣಾ (49) ಅವರ ಸಾಲು ಸಾಲು ಗೋಲುಗಳಿಂದ ತಿರುಗೇಟು ನೀಡಿ, ಸ್ಕೋರ್ ಅನ್ನು 3-3ರಲ್ಲಿ ಸಮಬಲಗೊಳಿಸಿದರು. ಪಂದ್ಯ ಶೂಟೌಟ್ಗೆ ತಲುಪಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಆಟ ಮುಗಿಯಲು ಕೇವಲ ಕೆಲವೇ ಕ್ಷಣಗಳಿರುವಾಗ (60ನೇ ನಿಮಿಷ) ಭಾರತದ ಸ್ಟಾರ್ ಆಟಗಾರ ಅಭಿಷೇಕ್ ಮೆರೆದ ಕೊನೆಯ ನಿಮಿಷದ ಮ್ಯಾಜಿಕ್ ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಅವರು ಬಾರಿಸಿದ ಫೀಲ್ಡ್ ಗೋಲು ಭಾರತಕ್ಕೆ 4-3ರ ಐತಿಹಾಸಿಕ ಗೆಲುವು ತಂದುಕೊಟ್ಟಿತು.
ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ. ಇನ್ನು ಅಕ್ಟೋಬರ್ 3 ರಂದು ನಡೆಯಲಿರುವ ಫೈನಲ್ನಲ್ಲಿ ಚಿನ್ನದ ಪದಕಕ್ಕಾಗಿ ಭಾರತ ಪಡೆ ಮಲೇಷ್ಯಾ ಅಥವಾ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.


