ಚುನಾವಣಾ ಆಯೋಗದಿಂದ ಆಗಿರುವ ಎಡವಟ್ಟಿನ ಸದ್ದು ನಿಲ್ಲುತ್ತಲೇ ಇಲ್ಲ.ವಿರೋಧ ಪಕ್ಷಗಳು ದಿನಕ್ಕೊಂದು ಅಸ್ತ್ರ ತೆಗೆದು ಬೀಸುತ್ತಲೇ ಇವೆ. ಇವತ್ತು ಕೂಡಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಟಿ ಬೀಸಿದ್ದು ಅದು ಜೋರು ಸದ್ದು ಮಾಡುತ್ತಿದೆ. ಆಯೋಗಗಕ್ಕೆ ಹಲವು ಪ್ರಶ್ನೆಗಳನ್ನು ಕೇಳುವುದರ ಮೂಲಕ ಕೇಂದ್ರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಮತದಾರರ ನೋಂದಣಿಗಾಗಿ ಆನ್‌ ಲೈನ್ ಫಾರ್ಮ್ 6ಕ್ಕೆ ಬದಲಾವಣೆಗಳನ್ನು ತರಲು ಆದೇಶ ಮಾಡಿದವರು ಯಾರು ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಆ ಬದಲಾವಣೆಗಳನ್ನು ಮಾಡುವಂತೆ ಟಿಸಿಎಸ್ ಮೇಲೆ ಯಾರಾದ್ರೂ ಒತ್ತಡ ಹಾಕಿದ್ರಾ ಅಂತಾನೂ ಕೇಳಿದ್ದಾರೆ.  

ಇಲ್ಲಿ ಚುನಾವಣಾ ಆಯೋಗದ ಆಯುಕ್ತರು ದಾಖಲಿಸಿರುವಂತೆ ಆನ್‌ ಲೈನ್  ಫಾರ್ಮ್ 6 ಅನ್ನು ಕಾನೂನುಬಾಹಿರವಾಗಿ ಬದಲಾಯಿಸಲಾಗಿದೆ. ಆದರೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಗೆ  ಆ ಕೆಲಸ ಮಾಡಲು ಚುನಾವಣಾ ಆಯೋಗದಲ್ಲಿ ಯಾರು ಹೇಳಿದರು.? ಇದಲ್ಲದೇ TCSನಲ್ಲಿ ಅದಕ್ಕೆ ಸಹಿ ಹಾಕಿದವರು ಯಾರು.? ಮತ್ತು ಅದನ್ನು ಮಾಡಲು ಅವರ ಮೇಲೆ ಯಾರಿಂದಲಾದರೂ ಒತ್ತಡ ಬಂದಿತ್ತಾ ಎಂದು ರಾಹುಲ್ ತಮ್ಮ X ಪೋಸ್ಟ್‌ನಲ್ಲಿ  ಪ್ರಶ್ನೆ ಮಾಡಿದ್ದಾರೆ.

ಇನ್ನು ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಫಾರ್ಮ್ 6 ರೊಂದಿಗೆ ಲಗತ್ತಿಸಲಾಗಿದ್ದ ಹೆಚ್ಚುವರಿ ವಿಶೇಷ ತೀವ್ರ ಪರಿಷ್ಕರಣೆ ಸಂಬಂಧಿತ ಘೋಷಣೆಯನ್ನು ಚುನಾವಣಾ ಆಯೋಗ ಹಿಂಪಡೆದಿದೆ ಎಂದು ಸುದ್ದಿಸಂಸ್ಥೆಯೊಂದು  ವರದಿ ಮಾಡಿದೆ. ECINET ಆ್ಯಪ್ ಮತ್ತು ಪೋರ್ಟಲ್ ಹಾಗೂ ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳ ಪೋರ್ಟಲ್ ಗಳಿಂದ  ಈ ಘೋಷಣೆಯನ್ನು ತೆಗೆದುಹಾಕಲಾಗಿದೆ. ಇದರ ಅರ್ಥ ಈ ರಾಜ್ಯಗಳಲ್ಲಿ ಮತದಾರರ ನೋಂದಣಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ಕೇವಲ ಸಾಮಾನ್ಯ ಹಾಗೂ ಕಡ್ಡಾಯವಾದ ನಮೂನೆ 6 ಅನ್ನು ಮಾತ್ರ ಸಲ್ಲಿಸಬೇಕು ಎಂದಾಗುತ್ತದೆ.

SIR ಪ್ರಕ್ರಿಯೆ ಇನ್ನೂ ಕೆಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿವೆ. ಅಲ್ಲಿ ಹೆಚ್ಚುವರಿ ಘೋಷಣೆಯ ಸೌಲಭ್ಯವು ECINET ಪೋರ್ಟಲ್‌ ನಲ್ಲಿ  ಲಭ್ಯವಿರುತ್ತದೆ. ಈ ಘೋಷಣೆಯ ಅಡಿಯಲ್ಲಿ ಇರುವುದು ಏನಂದರೆ ಹೊಸ ಅರ್ಜಿದಾರರು ತಮ್ಮನ್ನು, ತಮ್ಮ ಪೋಷಕರನ್ನು ಅಥವಾ ಅಜ್ಜ-ಅಜ್ಜಿಯರನ್ನು ಹಿಂದಿನ SIR ಪ್ರಕ್ರಿಯೆಯ ಸಂದರ್ಭದಲ್ಲಿ ಸಿದ್ಧಪಡಿಸಲಾದ ಮತದಾರರ ಪಟ್ಟಿಯೊಂದಿಗೆ ಜೋಡಿಸುವ ವಿವರಗಳನ್ನು ಒದಗಿಸಬೇಕಾಗುತ್ತದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಒಳಗೊಂಡ ಪೂರ್ಣ ಆಯೋಗದ ಸೆಪ್ಟೆಂಬರ್ 26ರ ಸಭೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಭೆಯ ಬಳಿಕ, ಫಾರ್ಮ್ 6ರೊಂದಿಗೆ ಲಗತ್ತಿಸಲಾದ ಘೋಷಣೆಯು ನಿರ್ದಿಷ್ಟವಾಗಿ ಎಸ್ಐಆರ್ ಗಾಗಿ ಉದ್ದೇಶಿಸಲಾಗಿದ್ದು, ಎಸ್ಐಆರ್ ಅವಧಿಯಲ್ಲದ ಸಂದರ್ಭದಲ್ಲಿ, ನಿಯಮಗಳ ಪ್ರಕಾರ ಅನ್ವಯವಾಗುವ ಫಾರ್ಮ್‌ ಗಳನ್ನು  ಬಳಸಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.