ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಹಳೆಯ ಮಿತ್ರಪಕ್ಷಗಳ ಜೊತೆಯಾಗಿಯೇ ಎದುರಿಸುವುದಾಗಿ ಅವರು ಸೂಚನೆ ನೀಡಿದ್ದಾರೆ. ಅಲ್ಲದೆ ಸೀಟು ಹಂಚಿಕೆ ಮೈತ್ರಿಯನ್ನು ಶೀಘ್ರದಲ್ಲೇ ಪ್ರಕಟಿಸುವುದು ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ. ಬಿಜೆಪಿ ಶಾಸಕರು ನಿಜವಾಗಿಯೂ ನಿಮ್ಮ ಸಂಪರ್ಕದಲ್ಲಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಹೌದು.. ನಿಜವಾಗಿಯೂ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ನಾವು ಅವರೆಲ್ಲರನ್ನು ಹೇಗೆ ಪಕ್ಷಕ್ಕೆ ಸೇರಿಸಿಕೊಳ್ಳುವುದು? ಸುಳ್ಳು ಭರವಸೆಗಳನ್ನು ನೀಡಿ ಅವರನ್ನು ಸೇರಿಸಿಕೊಂಡು ನಂತರ ಅದನ್ನು ಈಡೇರಿಸದೇ ಇರಲು ನಮಗೆ ಇಷ್ಟವಿಲ್ಲ ಎಂದು ಹೇಳಿದರು.ಉತ್ತರ ಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಎಸ್ ಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಅಖಿಲೇಶ್ ಕೊಟ್ಟಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇನ್ನು ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್ ಜೆಪಿಯವರು ಹೇಳುವ ಯಾವುದೇ ಮಾತನ್ನು ಜನರು ನಂಬಬಾರದು. ಬಿಜೆಪಿ ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಕುರಿತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ನೀಡಿರುವ ಹೇಳಿಕೆಗೂ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದರು. ಉತ್ತರ ಪ್ರದೇಶದ ಅಭಿವೃದ್ಧಿ ಮತ್ತು ರೈತರ ಏಳಿಗೆಯ ಸಲುವಾಗಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು. ಬುಧವಾರ ದೇಶದ ರಾಜಧಾನಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲೂ ಸಮಾಜವಾದಿ ಪಕ್ಷದ ನಾಯಕರು ಭಾಗವಹಿಸಿದ್ದರು ಅವರು ಹೇಳಿದರು.
ಮತ್ತೊಂದು ಕಡೆ ಅಖಿಲೇಶ್ ಯಾದವ್ ಬಿಜೆಪಿ ಮತ್ತೊಂದು ಚೆಕ್ ಮೆಟ್ ಕೊಟ್ಟಿದ್ದಾರೆ. ಮುಕೇಶ್ ಅಂಬಾನಿ ಆಪ್ತ ಸಹಾಯಕ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ನ ಗ್ರೂಪ್ ಅಧ್ಯಕ್ಷ ಧನರಾಜ್ ಪರಿಮಳ್ ನಾಥ್ವಾನಿ ಅವರನ್ನು ಮುಂಬರುವ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ನಿನ್ನೆ (ಬುಧವಾರ) ಅಖಿಲೇಶ್ ಯಾದವ್ ನಾಥ್ವಾನಿ ಅವರೊಂದಿಗೆ ಚುನಾವಣಾ ಆಯೋಗದ ಕಚೇರಿಗೆ ತೆರಳಿ ನಾಥ್ವಾನಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ನಾಮಪತ್ರ ಸಲ್ಲಿಸಿದರು. ಅಖಿಲೇಶ್ ಯಾದವ್ ನಾಥ್ವಾನಿ ಕೈ ಹಿಡಿದು ಆಯೋಗದ ಕಚೇರಿಯಲ್ಲಿದ್ದ ಆಸನದವರೆಗೆ ಕರೆದೊಯ್ದರು. ನಾಮಪತ್ರ ಸಲ್ಲಿಕೆಯಾದ ನಂತರ ನಾಥ್ವಾನಿಯವರನ್ನು ಅಖಿಲೇಶ್ ಅಭಿನಂದಿಸಿದರು ಮತ್ತು ಅವರು ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಇದೇ ತಿಂಗಳ 16 ರಂದು ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ ವಿಧಾನಸಭೆಯ ಪ್ರಸ್ತುತ ಬಲದ ಆಧಾರದ ಮೇಲೆ ಎನ್ಡಿಎ ಎಂಟು ಸ್ಥಾನಗಳನ್ನು ಮತ್ತು ಸಮಾಜವಾದಿ ಪಕ್ಷ ಎರಡು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಆದರೂ ಅಖಿಲೇಶ್ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಮೂರನೇ ಅಭ್ಯರ್ಥಿಯ ಹೆಸರು ಇನ್ನೂ ಬಹಿರಂಗಗೊಂಡಿಲ್ಲ.


