ಇದೇ ವೇಳೆ ಶಿವಕುಮಾರ್ ಮತಗಳ್ಳತನದ ಬಗ್ಗೆಯೂ ಮಾತಾಡಿದರು. ಕರ್ನಾಟಕದಲ್ಲಿ ನಾವು ತನಿಖೆ ಮುಂದುವರೆಸುತ್ತೇವೆ.ಸಂವಿಧಾನ ಉಳಿಸಲು, ಪ್ರಜಾಪ್ರಭುತ್ವ ರಕ್ಷಿಸಲು ನಾವು ಹೋರಾಡುತ್ತೇವೆ ಎಂದು ಖಡಕ್ ಆಗಿ ಎಚ್ಚರಿಸಿದರು. ಕರ್ನಾಟಕದಲ್ಲಿ ಬಿಜೆಪಿಯವರು ತಾವು ತಪ್ಪು ಎಸಗಿಯೇ ಇಲ್ಲ ಎನ್ನುತ್ತಿದ್ದಾರೆ. ಅವರು ತಪ್ಪು ಮಾಡಿಯೇ ಇಲ್ಲ ಎನ್ನವುದಾದರೆ ಏಕೆ ಪ್ರಕರಣ ದಾಖಲಿಸಬೇಡಿ ಎನ್ನುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಏಕೆ ರಾಜ್ಯಪಾಲರ ಬಳಿಗೆ ಹೋಗಿದ್ದಾರೆ? ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ? ಅರ್ಜಿ ನಮೂನೆ 7ಕ್ಕೆ ಅಮಾಯಕ ಕಾರ್ಯಕರ್ತರಿಂದ ಸಹಿ ಹಾಕಿಸಿದ್ದಾರೆ. ಮುಖಂಡರುಗಳೇ ಸಹಿ ಹಾಕಬೇಕಿತ್ತು ಎಂದು ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.
ಇನ್ನು ಅನೇಕ ಕಡೆ ಅರ್ಜಿ ನಮೂನೆ 7 ಕ್ಕೆ ತಪ್ಪಾಗಿ ಸಹಿ ಮಾಡಿದ್ದೇವೆ ಎಂದು ಅರ್ಜಿ ವಾಪಸ್ ಪಡೆದಿದ್ದಾರೆ. ಅನೇಕ ಕಡೆ ಪ್ರಕರಣಗಳು ದಾಖಲಾಗಿವೆ, ಬಿಎಲ್ ಓಗಳೇ ದೂರು ನೀಡಿದ್ದಾರೆ ಎಂದರು. ಮತದಾನದ ಹಕ್ಕನ್ನು ಕಿತ್ತು ಹಾಕಲು ಹೊರಟವರು ಬಿಜೆಪಿಯವರು. ಅಪರಾಧ ಮಾಡಿ ಬಡವರ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು. ಇದರಿಂದ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಬಳಿ ನಾನು ಮನವಿ ಮಾಡುತ್ತೇನೆ. ಎಚ್ಚರಿಕೆಯಿಂದಿರಿ, ಮತಗಳು ಕಳೆದುಕೊಂಡಿರುವವರು ಬಿಎಲ್ಎ, ಬಿಎಲ್ಓ ಗಳಿಗೆ ಮನವರಿಕೆ ಮಾಡಿ. ಜನರ ಮತದಾನದ ಹಕ್ಕನ್ನು ಉಳಿಸಬೇಕು ಎಂದು ಕರೆ ಕೊಟ್ಟರು.
ಮತಗಳ್ಳತನ ವಿರೋಧಿಸಿ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿದೆ. ಇದರಲ್ಲಿ ಲಕ್ಷಾಂತರ ಜವರು ಭಾಗವಹಿಸಿದ್ದರು. ಅದನ್ನು ಮಾಧ್ಯಮಗಳೇ ಬಿತ್ತರಿಸಿವೆ.ನವರಾತ್ರಿ ಸಮಯದಲ್ಲೂ ಕರ್ನಾಟಕದಿಂದ ಸಚಿವರು, ನೂರಕ್ಕೂ ಹೆಚ್ಚು ಶಾಸಕರು, 300 ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು ಎಂದು ಶಿವಕುಮಾರ್ ಹೇಳಿದ್ದಾರೆ.

