ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಅವಾಂತರವೊಂದು ಈಗ ಜೋರು ಸದ್ದು ಮಾಡುತ್ತಿದೆ. ರಾಹುಲ್ ಗಾಂಧಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುರ್ತಾದ ಕಾಲರ್ ಹಿಡಿದು ಪಕ್ಕಕ್ಕೆ ಜಗ್ಗಿತಳ್ಳಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮೊಟ್ಟಿಗೆ ಸಾಗುತ್ತಾ ಇರುವುದು ಡಿ.ಕೆ.ಶಿವಕುಮಾರ್ ಎನ್ನುವ ಅರಿವಿದ್ದರೂ ರಾಹುಲ್ ಗಾಂಧಿ ಹೀಗೆ ಮಾಡಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ಜೊತೆಗೆ ಇದು ಕರ್ನಾಟಕದ ಜನರ ಸ್ವಾಭಿಮಾನಕ್ಕೆ ಇದು ದೊಡ್ಡ ಪೆಟ್ಟು ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.

ಪ್ರತಿಭಟನೆ ವೇಳೆ  ಆಗಿದ್ದೇನು.?. ಡಿಕೆಶಿಯನ್ನು ತಳ್ಳಿದ್ರಾ ರಾಹುಲ್.? 
ಸುಪ್ರೀಂ ಕೋರ್ಟ್ ಚಲೋ ಮತ್ತು ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಮುಂಚೂಣಿಯಲ್ಲಿ ಸಾಗುತ್ತಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರು ಕ್ಯಾಮೆರಾಗಳ ಹಾಗೂ ಮಾಧ್ಯಮಗಳ ಗಮನ ತಮ್ಮತ್ತ ಸೆಳೆಯುವ ಭರದಲ್ಲಿ ತಮ್ಮ ಪಕ್ಕದಲ್ಲೇ ಸಾಗುತ್ತಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಾಲರ್ ಹಾಗೂ ಕುರ್ತಾ ಭಾಗವನ್ನು ಗಟ್ಟಿಯಾಗಿ ಹಿಡಿದು ಪಕ್ಕಕ್ಕೆ ತಳ್ಳಿದ್ದಾರೆ. ಈ ಘಟನೆಯ ಬಳಿಕ ಭದ್ರತಾ ಸಿಬ್ಬಂದಿಯ ತಳ್ಳಾಟ-ನೂಕಾಟದಲ್ಲೂ ಶಿವಕುಮಾರ್ ಜನಸಂದಣಿಯಲ್ಲಿ ಕಳೆದು ಹೋಗುವ ದೃಶ್ಯಗಳು ಸಹಾ ವೀಡಿಯೋದಲ್ಲಿ ಕಂಡುಬಂದಿವೆ. 

ರಾಹುಲ್ ನಡೆಗೆ ಕನ್ನಡಿಗರ ಆಕ್ರೋಶ 
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ರಾಹುಲ್ ಗಾಂಧಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಲೂ ಅರ್ಹರಿಲ್ಲದ ವ್ಯಕ್ತಿಯೊಬ್ಬ ನಮ್ಮ ರಾಜ್ಯ ಕರ್ನಾಟಕದ ಮುಖ್ಯಮಂತ್ರಿಗಳನ್ನು ಈ ರೀತಿ ಸಾರ್ವಜನಿಕವಾಗಿ ನೂಕಿ ತಳ್ಳುವುದು ನಮಗೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ. ಅದೇ ರೀತಿ ಮತ್ತೊಬ್ಬರು ಸಾಂವಿಧಾನಿಕ ಹುದ್ದೆಗಳಿಗೆ ಗೌರವ ನೀಡದ ಈ ನಾಯಕನಿಗಿಂತ ಡಿ.ಕೆ ಶಿವಕುಮಾರ್ ಜಾಗತಿಕವಾಗಿ ಹಾಗೂ ರಾಜಕೀಯವಾಗಿ ಸಾಧಿಸಿದ್ದು ಅಪಾರವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ನೆಟ್ಟಿಗರು ಅಂದು ತಂದೆ ರಾಜೀವ್ ಗಾಂಧಿ ವೀರೇಂದ್ರ ಪಾಟೀಲರಿಗೆ ಅಪಮಾನ ಮಾಡಿದ್ದನ್ನು ನೆನಪಿಲಸಿದ್ದಾರೆ. ಅಂದು ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದಲೇ ಪಾಟೀಲರನ್ನು ವಜಾ ಮಾಡಿದ್ದರು. ಇಂದು ಮಗ ರಾಹುಲ್ ಗಾಂಧಿ ಶಿವಕುಮಾರ್ ಅವರಿಗೆ ಅಪಮಾನ ಮಾಡಿದ್ದಾರೆ ಕನ್ನಡಿಗರು ಕಾಂಗ್ರೆಸ್ನ ಈ ಅಹಂಕಾರವನ್ನು ಎಂದಿಗೂ ಕ್ಷಮಿಸಲ್ಲ ಎಂದು ಬರೆದಿದ್ದಾರೆ.

ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ್ರಾ ರಾಹುಲ್.?
ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. SIR ಪ್ರತಿಭಟನೆಯ ವೇಳೆ ಮೂರು ತಿಂಗಳ ಗರ್ಭಿಣಿ ಪತ್ರಕರ್ತೆಯೊಬ್ಬರನ್ನು ತಳ್ಳಿದ್ದಾರೆ ಎಂದು ಆಪಾದಿಸಲಾಗಿದೆ. ಈ ವಿಚಾರವಾಗಿ ದೇಶದ ರಾಜಕಾರಣದಲ್ಲಿ ಭಾರಿ ವಿವಾದ ಸೃಷ್ಟಿಯಾಗಿದೆ. ಡಿಜಿಟಲ್ ಮಾಧ್ಯಮವೊಂದರಲ್ಲಿ ಕಾರ್ಯನಿರ್ವಹಿಸುವ ರಿಚಾ ಪರಾಶರ್ ಎಂಬ ಪತ್ರಕರ್ತೆ ನಿನ್ನೆ ವರದಿಗಾಗಿ ತೆರಳಿದ್ದರು ಈ ವೇಳೆ ರಾಹುಲ್ ಗಾಂಧಿ ಅವರ ಬಳಿ ಮೈಕ್ ಹಿಡಿದಾಗ ಅವರು ಸಿಟ್ಟಿನಿಂದ ನನ್ನ ಎಡ ಹೆಗಲನ್ನು ಹಿಡಿದು ತಳ್ಳಿದರು. ಅದೇ ಸಮಯದಲ್ಲಿ ಅವರ ಅಂಗರಕ್ಷಕರು ನನ್ನನ್ನು ಜೋರಾಗಿ ನೂಕಿರು ಎಂದು ಪತ್ರಕರ್ತೆ ಆರೋಪಿಸಿದ್ದಾರೆ. ಈ ರೀತಿ ರಾಹುಲ್ ಹಾಗೂ ಅವರ ಅಂಗರಕ್ಷಕರು ತಳ್ಳಿದ್ದರಿಂದ ನಾನು ಮೆಟ್ಟಿಲುಗಳ ಮೇಲೆ ಮುಖ ಹಾಗೂ ಹೊಟ್ಟೆಯ ಭಾಗ ತಾಗಿ ಬಿದ್ದೆ. ನನ್ನ ಮೇಲೆ ಕ್ಯಾಮೆರಾಮನ್ ಕೂಡ ಬಿದ್ದರು ಎಂದು ಅವರು ಆರೋಪಿಸಿದ್ದಾರೆ.ಈ ಘಟನೆಯ ಬಳಿಕ ತಾವು ಗರ್ಭಿಣಿ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾಗಿ ರಿಚಾ ತಿಳಿಸಿದ್ದಾರೆ.

ಇನ್ನು ತಳ್ಳಾಟ ನೂಕಾಟದಿಂದಾಗಿ ಗಾಯಗೊಂಡಿರುವ ಪತ್ರಕರ್ತೆಯನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ, ವಕ್ತಾರ ಪ್ರದೀಪ್ ಭಂಡಾರಿ ಸೇರಿದಂತೆ ಹಲವು ನಾಯಕರು ರಿಚಾ ಪರಾಶರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ. ಈ ಆರೋಪಗಳು ರಾಜಕೀಯ ಪ್ರೇರಿತ ಮತ್ತು ಸುಳ್ಳು ಎಂದು ಹೇಳಿರುವ ಕಾಂಗ್ರೆಸ್, ಘಟನೆಯ ಸಮಯ ಹಾಗೂ ಆಸ್ಪತ್ರೆಗೆ ದಾಖಲಾದ ದಿನಾಂಕಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ.